ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು | ಶೇ 60ರಷ್ಟು ಮಳೆ ಕೊರತೆ: ಆತಂಕ

Published 27 ಸೆಪ್ಟೆಂಬರ್ 2023, 6:35 IST
Last Updated 27 ಸೆಪ್ಟೆಂಬರ್ 2023, 6:35 IST
ಅಕ್ಷರ ಗಾತ್ರ

ಸಂಡೂರು: ಮಳೆಯ ಕೊರತೆಯಿಂದಾಗಿ ಈ ವರ್ಷ ತಾಲ್ಲೂಕಿನ ರೈತರು ಅಕ್ಷರಶಃ ನಲುಗಿ ಹೋಗಿದ್ದು, ಕೃಷಿ ಹಾಗೂ ಕಂದಾಯ ಇಲಾಖೆ ಸರ್ಕಾರಕ್ಕೆ ಒದಗಿಸಿರುವ ಮಾಹಿತಿ ಪ್ರಕಾರ ಅಂದಾಜು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.

ಮಳೆಯಾಶ್ರಿತ ಶೇ 90 ರಷ್ಟು ನಷ್ಟ: ತಾಲ್ಲೂಕಿನ‌ ಮೂರು ಹೋಬಳಿಯ 85 ಕಂದಾಯ ಗ್ರಾಮಗಳಲ್ಲಿ ಬಹುತೇಕ ಮಳೆಯಾಶ್ರಿತ ಬೇಸಾಯವೇ ಹೆಚ್ಚು. ಆರಂಭದಿಂದಲೂ ಈ ಸಾಲಿನಲ್ಲಿ ಮಳೆಯ ಕೊರತೆ ಉಂಟಾಗಿದ್ದರಿಂದ ಬಹುಪಾಲು ಬೆಳೆ ಕುಂಠಿತಗೊಂಡಿದ್ದು, ಅನೇಕ ಕಡೆ ಒಣಗಿ‌ ಹೋಗಿ ಕುರಿ ದನಗಳಿಗೆ ಮೇವಾಗುತ್ತಿದೆ.

‘ತಾಲ್ಲೂಕಿನಲ್ಲಿ ಈ ಸಲ 31,100 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿತ್ತು. ಇದರಲ್ಲಿ ಸುಮಾರು 26,600 ಹೆಕ್ಟೆರ್ ಪ್ರದೇಶ ಶೇ 50ಕ್ಕಿಂತ ಹೆಚ್ಚು ಪಟ್ಟು ಬೆಳೆ ನಷ್ಟಕ್ಕೆ ಒಳಗಾಗಿದೆ. ಬಿತ್ತನೆ ಶೇ 90 ರಷ್ಟಾಗಿತ್ತು’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ವಾಡಿಕೆಗಿಂತ ತುಂಬಾ ಕಡಿಮೆ ಮಳೆ: ಈ ಬಾರಿ ವಾಡಿಕೆಗಿಂತ ತುಂಬಾ ಕಡಿಮೆ ಮಳೆ‌ಬಿದ್ದಿದೆ. ವಾಡಿಕೆಯಂತೆ ತಾಲ್ಲೂಕಿನಲ್ಲಿ 44 ಸೆಂ.ಮೀ ಮಳೆಯಾಗಬೇಕಿತ್ತು.

ಆದರೆ ಕೇವಲ 168 .6 ಮಿಮೀ ಸೇರಿ ಶೇ 62 ರಷ್ಟು ಮಳೆ ಕೊರತೆ ಉಂಟಾಗಿದೆ. ಹೋಬಳಿವಾರು ಮಳೆ ನೋಡಿದಾಗ ಈ ಸಲ ತೋರಣಗಲ್ಲು ಹೋಬಳಿಯಲ್ಲಿ ಕಡಿಮೆ ಮಳೆ ದಾಖಲಾಗಿದೆ.

ವಾಡಿಕೆಯಂತೆ 31 ಸೆಂ.ಮೀ ಮಳೆಯಾಗಬೇಕಿತ್ತು ಆದರೆ ಈ ಸಾಲಿನಲ್ಲಿ ಬಿದ್ದಿರೋದು ಕೇವಲ 12 ಸೆಂ.ಮೀ ಮಳೆ ಆಗಿದೆ, ಶೇ 64 ರಷ್ಟು ಮಳೆ ಕೊರತೆ ಇದೆ. ಅದೇ ರೀತಿ ಸಂಡೂರು ಹೋಬಳಿಯಲ್ಲಿ ವಾಡಿಕೆ ಮಳೆ 44 ಸೆಂ.ಮೀ ಆದರೆ 15 ಸೆಂ.ಮೀ   ಬಿದ್ದಿದೆ ಶೇ 64 ಮಳೆ ಕೊರತೆ ಆಗಿದೆ.

ಚೋರನೂರು ಹೋಬಳಿಯಲ್ಲಿ 33 ಸೆಂ.ಮೀ ವಾಡಿಕೆ ಇದ್ದರೆ 22 ಸೆಂ.ಮೀ ಮಳೆಯಾಗಿದೆ. ಇಲ್ಲಿಯೂ ಶೇ 31ರಷ್ಟು ಮಳೆ ಕೊರತೆ ಇದೆ. ತಾಲ್ಲೂಕಿನಲ್ಲಿ ಶೇ 62 ರಷ್ಟು ಮಳೆ ಕೊರತೆ ಆಗಿದೆ‌.

‘ಬೆಳೆ ಉತ್ತಮ ಹಂತದಲ್ಲಿ ಇರುವಾಗ ನಿರಂತರ 4 ವಾರ ಮಳೆ ಬಂದಿಲ್ಲ. ಹಾಗಾಗಿ ಇಡೀ ತಾಲ್ಲೂಕನ್ನು ಸಮೀಕ್ಷೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಧಿಕಾರಿಗೆ ಸರದಿ ಸಲ್ಲಿಸಿದ್ದೇವೆ’ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ರೆಡ್ಡಿ.

‘ಇದೀಗ ಬರ ಘೋಷಣೆ ಆಗಿದೆ. ಸ್ಥಳೀಯವಾಗಿ ಬೆಳೆ ಸಮೀಕ್ಷೆ ಆರಂಭಗೊಂಡಿದ್ದು ಅದರ ಪ್ರಕಾರ ತಮ್ಮ ಮಾಹಿತಿ ತಪ್ಪಾಗಿದ್ದರೆ ರೈತರು ಬೆಳೆ ದರ್ಶಕ ಆ್ಯಪ್‌ನಲ್ಲಿಯೇ ಆಕ್ಷೇಪಣೆ ಸಲ್ಲಿಸಬಹುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT