ಬಳ್ಳಾರಿ: ಜಗತ್ತಿನಲ್ಲಿ ಎಲ್ಲೂ ಕಾಣದ ‘ಕ್ರೋಟಲೇರಿಯಾ ಸಂಡೂರೆನ್ಸಿಸ್’ ಎಂಬ ಗಿಡ ಸಂಡೂರಿನ ರಾಮಗಡ ಶ್ರೇಣಿಯಲ್ಲಿ ಪತ್ತೆಯಾಗಿದೆ.
‘ಸಮುದ್ರಮಟ್ಟದಿಂದ ಒಂದು ಸಾವಿರ ಮೀಟರ್ ಎತ್ತರದಲ್ಲಿ ಮಾತ್ರ ಬೆಳೆಯುವ ಈ ಗಿಡಗಳನ್ನು 1912ರಲ್ಲಿ ಜೆ.ಎಸ್.ಗ್ಯಾಂಬೆಲ್ ಎಂಬ ಯೂರೋಪಿನ ಸಸ್ಯಶಾಸ್ತ್ರಜ್ಞ ರಾಮಗಡದ ಪರ್ವತದಲ್ಲಿ ಮೊದಲ ಬಾರಿಗೆ ಪತ್ತೆ ಮಾಡಿದ್ದರು. ನಂತರ ಈ ಸಸ್ಯವನ್ನು ಇತರೆ ಸೆಣಬು ಸಸ್ಯಗಳೊಂದಿಗೆ ಹೋಲಿಸಿದಾಗ ಈ ಪ್ರಬೇಧ ರಾಮಗಡ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಸೀಮಿತ ಎಂದು ನಿರ್ಧರಿಸಿ ಇದಕ್ಕೆ ‘ಕ್ರೋಟಲೇರಿಯಾ ಸಂಡೂರೆನ್ಸಿಸ್’ ಎಂದು ನಾಮಕರಣ ಮಾಡಿದ್ದರು. 1980ರಲ್ಲಿ ಜೈನ್ ಎಂಬ ಭಾರತೀಯ ಸಸ್ಯಶಾಸ್ತ್ರಜ್ಞ ಇದರ ಅಧ್ಯಯನ ಮಾಡಿದ್ದರು’ ಎಂದು ವನ್ಯಜೀವಿ ಸಂಶೋಧಕ ಸಮದ್ ಕೊಟ್ಟೂರು ತಿಳಿಸಿದ್ದಾರೆ.
‘ಹೊಳಪಿನ ಸೂಕ್ಷ್ಮ ರೋಮಗಳಿಂದ ಕೂಡಿದ ಎಲೆ, ಹಳದಿ ಹೂವು, ಬುರುಡೆಯಂತೆ ಇರುವ ಕಾಯಿ, ಹುರುಳಿಯಾಕಾರದ ಬೀಜಗಳನ್ನು ಬಿಡುವ ಈ ಸಸ್ಯ ಸೆಣಬಿನ ವರ್ಗಕ್ಕೆ ಸೇರಿದೆ. ಇದಕ್ಕೆ ಕನ್ನಡದಲ್ಲಿ ಹೆಸರಿಲ್ಲ. ರಾಮಗಡದಲ್ಲಿ ಮಾತ್ರ ಸಿಗುವ ಕಾರಣ ಇದನ್ನು ‘ರಾಮ ಸೆಣಬು’ ಎಂದು ನಾಮಕರಣ ಮಾಡಿರುವೆ’ ಎಂದು ಅವರು ತಿಳಿಸಿದ್ದಾರೆ.
‘ಈ ಸಸ್ಯದ ಬೀಜಗಳನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಕಾಡಿನಲ್ಲಿ ಬೆಳೆಸುವ ಪ್ರಯೋಗ ಮಾಡಿದರೂ ಅಲ್ಲಿ ಬೆಳೆಯಲಿಲ್ಲ. ಇದಕ್ಕೆ ಸಮುದ್ರ ಮಟ್ಟದಿಂದ ಎತ್ತರ ಹಾಗೂ ಕಬ್ಬಿಣ-ಮ್ಯಾಂಗನೀಸ್ ಅದಿರು ಇರುವ ಮಣ್ಣು ಕಾರಣ ಇರಬಹುದು. ಹೀಗಾಗಿ ಈ ಸಸ್ಯ ಕೇವಲ ರಾಮಗಡದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ. ಆದರೆ ಗಣಿಗಾರಿಕೆಯಿಂದ ಈ ಅಪರೂಪದ ಸಸ್ಯದ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ. ಆದ್ದರಿಂದ ಈ ಸಸ್ಯದ ಕುರಿತ ಅಧ್ಯಯನ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.
ಸಂಡೂರಿನ ಗಣಿಗಾರಿಕೆ ದೂಳಿನಲ್ಲೂ ಬೆಳೆದಿರುವ ರಾಮಸೆಣಬು ಗಿಡ