ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಂ ವಿಶ್ವಕವಿ ಸಮ್ಮೇಳನ | ಭಾವಾನುವಾದವೇ ಪ್ರಾಧಾನ್ಯ: ಕವಿ ಕುಮಾರ

ಸ್ಪ್ಯಾನಿಷ್‌ ಭಾಷೆಗೆ ಶರಣರ ವಚನಗಳ ಅನುವಾದ
Last Updated 23 ಅಕ್ಟೋಬರ್ 2022, 8:41 IST
ಅಕ್ಷರ ಗಾತ್ರ

ಬಳ್ಳಾರಿ (ಡಾ. ಜೋಳದರಾಶಿ ದೊಡ್ಡನಗೌಡರ ವೇದಿಕೆ): ‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೊಹರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ, ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯಾ..’ ಬಿಹಾರದ ಕೈಮೂರಿನ ಡಾ. ಪಿ. ಕುಮಾರ ಮಂಗಲಂ ಅವರು ಸ್ಪ್ಯಾನಿಷ್‌ ಭಾಷೆಯಲ್ಲಿ ಬಸವಣ್ಣನವರ ವಚನ ಓದುತ್ತಿದ್ದಂತೆ ಸಭಾಂಗಣದಲ್ಲಿ ಕರತಾಡನ ಮುಗಿಲು ಮುಟ್ಟಿತ್ತು.

ಬಳ್ಳಾರಿ ‘ಅರಿವು’ ಸಂಸ್ಥೆಯು ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಸಹಭಾಗಿತ್ವದಲ್ಲಿ ನಗರದ ಬಿಐಟಿಎಂ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ‘ಸಂಗಂ’ ವಿಶ್ವಕವಿ ಸಮ್ಮೇಳನದ ಮೂರನೇ ದಿನವಾದ ಭಾನುವಾರದ ಮೊದಲ ಗೋಷ್ಠಿಯಲ್ಲಿ ವಚನದ ಸಾಲುಗಳನ್ನು ಹೇಳಿ ಕುಮಾರ ಮಂಗಲಂ ಎಲ್ಲರ ಗಮನ ಸೆಳೆದರು. ಇದುವರೆಗೆ 57 ವಚನಗಳನ್ನು ಕನ್ನಡದಿಂದ ಸ್ಪ್ಯಾನಿಷ್‌ ಭಾಷೆಗೆ ತರ್ಜುಮೆಗೊಳಿಸಿರುವೆ ಎಂದು ಹೇಳಿದಾಗ ಕರತಾಡನ ಇನ್ನಷ್ಟು ಜೋರಾಗಿತ್ತು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿದೇಶಿ ಭಾಷೆಗಳ ಅಧ್ಯಯನ ವಿಭಾಗದಲ್ಲಿ ಕುಮಾರ ಮಂಗಲಂ ಸ್ಪ್ಯಾನಿಷ್‌ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಗೋಷ್ಠಿ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಕುಮಾರ, 2019ರಲ್ಲಿ ನಾನು ಕಲಬುರಗಿಗೆ ಬಂದಿದ್ದೆ. ಆ ಸಂದರ್ಭದಲ್ಲಿ ಕಲಬುರಗಿ, ಬಸವಕಲ್ಯಾಣ ಸುತ್ತಮುತ್ತಲಿನ ಸ್ಥಳಗಳಲ್ಲಿ ಓಡಾಡುವಾಗ ಬಸವಾದಿ ಶರಣರು, ಅವರ ವಚನಗಳ ಬಗ್ಗೆ ತಿಳಿಯಿತು. ಅದಾದ ಕೆಲ ತಿಂಗಳ ನಂತರ ಬಸವ ಸಮಿತಿಯವರು ವಚನಗಳನ್ನು ಅನ್ಯ ಭಾಷೆಗಳಿಗೆ ಅನುವಾದಗೊಳಿಸುವ ಯೋಜನೆಯನ್ನು ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡರು. ಆಗ ನಾನು ಕೂಡ ಅದರ ಭಾಗವಾದೆ ಎಂದರು.

ಈಗಾಗಲೇ 33 ಭಾಷೆಗಳಿಗೆ ವಚನಗಳನ್ನು ತರ್ಜುಮೆಗೊಳಿಸಲಾಗಿದೆ. 50 ಭಾಷೆಗೆ ವಚನಗಳನ್ನು ಅನುವಾದಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಸದ್ಯ ಜರ್ಮನ್‌, ಜಪಾನಿ, ಸ್ಪ್ಯಾನಿಷ್‌ ಭಾಷೆಗಳ ಅನುವಾದದ ಕೆಲಸ ನಡೆಯುತ್ತಿದೆ. ಒಟ್ಟು 2,200 ವಚನಗಳಲ್ಲಿ 453 ಬಸವಣ್ಣನವರ ವಚನಗಳನ್ನು ಅನುವಾದಕ್ಕೆ ಆಯ್ಕೆ ಮಾಡಲಾಗಿದೆ. ಆರು ತಿಂಗಳೊಳಗೆ 100 ವಚನ ಅನುವಾದಗೊಳಿಸುವ ಉದ್ದೇಶ ಇದೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಪ್ರೊ. ವಿಕ್ರಂ ವಿಸಾಜಿ ಅವರೊಂದಿಗೆ ಸೇರಿಕೊಂಡು ಈ ಕೆಲಸ ಮಾಡುತ್ತಿರುವೆ. ಪ್ರತಿಯೊಂದು ವಚನ ಅನುವಾದಗೊಳಿಸಿದ ನಂತರ ಪ್ರತಿಯೊಂದು ಸಾಲಿನ ಬಗ್ಗೆ ಚರ್ಚಿಸಿದ ನಂತರವೇ ಅಂತಿಮಗೊಳಿಸಲಾಗುತ್ತಿದೆ ಎಂದು ಹೇಳಿದರು.

ಅನುವಾದದ ಸಂದರ್ಭದಲ್ಲಿ ನಾನು ಎಂದೂ ಕೇಳಿರದ ಕೆಲವು ಶಬ್ದಗಳನ್ನು ಕೇಳಿದೆ. ಅವುಗಳ ಬಗ್ಗೆ ಅಧ್ಯಯನ, ಚರ್ಚಿಸಿದ ನಂತರ ಅವುಗಳ ಅರ್ಥ ತಿಳಿದುಕೊಂಡೆ. ತರ್ಜುಮೆಯಲ್ಲಿ ಶಬ್ದಾನುವಾದಕ್ಕಿಂತ ಭಾವಾನುವಾದಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ನಾನು ಕೂಡ ಮೂಲತಃ ಒಬ್ಬ ಅನುವಾದಕನಾಗಿರುವುದರಿಂದ ಭಾವಾನುವಾದವೇ ಪ್ರಾಧಾನ್ಯ ಎಂದರು.

‘ತಾರತಮ್ಯದ ವಿರುದ್ಧ ವಚನಗಳು ಮಾತಾಡುತ್ತವೆ’
‘ಜಾತಿ, ಧರ್ಮ, ಲಿಂಗ ತಾರತಮ್ಯದ ವಿರುದ್ಧ ವಚನಗಳು ಮಾತಾಡುವುದರಿಂದ ಆಪ್ತವೆನಿಸುತ್ತವೆ. 12ನೇ ಶತಮಾನದಲ್ಲಿ ವಚನ ರಚಿಸಿದ್ದರೂ, ಸಮಕಾಲೀನ ಸಮಸ್ಯೆಗಳಿಗೆ ಪರಿಹಾರವಿದೆ; ಸ್ಪಷ್ಟತೆ ಇದೆ. ಕನ್ನಡದಿಂದ ಸ್ಪ್ಯಾನಿಷ್‌ಗೆ ತರ್ಜುಮೆಗೊಳಿಸುತ್ತಿರುವ ನನಗೆ ಹೆಮ್ಮೆಯ ವಿಚಾರ’ ಎಂದು ಡಾ. ಪಿ. ಕುಮಾರ ಮಂಗಲಂ ಹೇಳಿದರು.

ವಚನಗಳ ಬಗ್ಗೆ ಬಹಳ ಕಡಿಮೆ ಜನರಿಗೆ ಗೊತ್ತಿದೆ. ಕೆಲ ವರ್ಷಗಳ ಹಿಂದಿನ ವರೆಗೆ ನನಗೆ ವಚನಗಳ ಬಗ್ಗೆ ಗೊತ್ತೇ ಇರಲಿಲ್ಲ. ಭಕ್ತಿ ಆಂದೋಲನವೆಂದೆ ಗುರುತಿಸಿಕೊಂಡಿರುವ ವಚನ ಚಳವಳಿ ಕ್ರಾಂತಿಕಾರಕವಾದುದು. ಅದರ ಸತ್ವ ಪ್ರತಿಯೊಬ್ಬರಿಗೂ ತಿಳಿಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT