ಬಳ್ಳಾರಿ: ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಬಾಡೂಟ ಹಾಕುವ ಹಳೇ ಮೈಸೂರು ಸಂಸ್ಕೃತಿ ಕಲ್ಯಾಣ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಮಂಗಳವಾರ ಬೆಂಬಲಿಗರು, ಅಭಿಮಾನಿಗಳಿಗೆ ಬಾಡೂಟ ಏರ್ಪಡಿಸಿದ್ದರು. ಆ ವೇಳೆ ಗಣ್ಯರಿಗಾಗಿ ಹಾಕಿದ್ದ ಶಾಮಿಯಾನ ಕುಸಿಯಿತು. ಆದರೆ, ಯಾರಿಗೂ ತೊಂದರೆಯಾಗಿಲ್ಲ.
ರಾಜ್ಯದ ಗಡಿಯ ಕೊನೆಯ ಗ್ರಾಮವಾದ ಬಳ್ಳಾರಿ ತಾಲ್ಲೂಕಿನ ಜೋಳದರಾಶಿಯ ಕುಂಟ ಮಾರಮ್ಮ ದೇವಸ್ಥಾನದ ಬಳಿ ಬಾಡೂಟಕ್ಕಾಗಿ ಮೂರು ಶಾಮಿಯಾನ ಹಾಕಲಾಗಿತ್ತು. ಬೆಂಬಲಿಗರಿಗೆ ಬೃಹತ್ ಗಾತ್ರದ ಶಾಮಿಯಾನ, ಗಣ್ಯರಿಗೆ ಸಣ್ಣ ಶಾಮಿಯಾನ ಹಾಗೂ ಸಸ್ಯಹಾರಿಗಳಿಗಾಗಿ ಮತ್ತೊಂದು ಶಾಮಿಯಾನ ಸಿದ್ಧಪಡಿಸಲಾಗಿತ್ತು.
ಮಧ್ಯಾಹ್ನ 3.30ರಲ್ಲಿ ಬಿರುಗಾಳಿ ಬೀಸುತ್ತಿದ್ದಂತೆ ಊಟಕ್ಕೆ ಕುಳಿತಿದ್ದವರು ಜಾಗೃತರಾದರು. ಗಾಳಿ ಹೊಡೆತಕ್ಕೆ ಸಿಕ್ಕಿ ನಿಧಾನವಾಗಿ ಕುಸಿದ ಶಾಮಿಯಾನ ಬಹಳಷ್ಟು ಮಂದಿ ಕಷ್ಟಪಟ್ಟು ಹಿಡಿದುಕೊಂಡರು. ಇದರಿಂದ ಯಾರಿಗೂ ಗಾಯಗಳಾಗಿಲ್ಲ. ಶಾಮಿಯಾನ ಕುಸಿಯುಷ್ಟರಲ್ಲಿ ಬಹುತೇಕರ ಊಟ ಮುಗಿದಿತ್ತು.
‘50 ಸಾವಿರ ಜನರಿಗೆ ಪ್ರಸಾದ’: ‘ಜೋಳದರಾಶಿಯಲ್ಲಿ ಕುಂಟ ಮಾರಮ್ಮ ಹಾಗೂ ಬಾಟೆ ಮಾರಮ್ಮ ಎಂಬ ಅಕ್ಕತಂಗಿ ದೇವಿಯರಿದ್ದಾರೆ. ಅವರಿಗೆ ಸಂಕಲ್ಪ ಮಾಡಿಕೊಂಡರೆ ಅಂದುಕೊಂಡಿದ್ದು ಆಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ತಂದೆ ಕಾಲದಿಂದಲೂ ಮನೆಯವರು ಇಲ್ಲಿಗೆ ನಡೆದುಕೊಳ್ಳುತ್ತಿದ್ದೇವೆ. ಈ ವರ್ಷ ನನ್ನ ಕ್ಷೇತ್ರದ ಸುಖ– ಶಾಂತಿ, ನೆಮ್ಮದಿ, ಮಳೆ– ಬೆಳೆಗೆ ಪ್ರಾರ್ಥಿಸಿ ಜನರೇ ಹಬ್ಬ ಮಾಡುತ್ತಿದ್ದಾರೆ’ ಎಂದು ಶಾಸಕ ನಾಗೇಂದ್ರ ಇದಕ್ಕೂ ಮುನ್ನ ಸ್ಪಷ್ಟಪಡಿಸಿದರು.
‘ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸುಮಾರು 50 ಸಾವಿರ ಜನ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವರೇ ಪ್ರಸಾದ ಮಾಡಿಕೊಂಡು ಹೋಗುತ್ತಿದ್ದಾರೆ’ ಎಂದು ಅವರು ವಿವರಿಸಿದರು.
‘ಚುನಾವಣೆ ಬಂದಾಗ ಕಾಂಗ್ರೆಸ್‌ಗೆ ಬಾಡೂಟ ನೆನಪಾಗುತ್ತದೆ’ ಎಂದು ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ ಎಂಬ ಪ್ರಶ್ನೆಗೆ, ‘ಕುಂಟ ಮಾರಮ್ಮ ಈ ಭಾಗದ ಆದಿ ದೇವತೆ. ಪ್ರತಿ ತಿಂಗಳು ಅಮಾವಾಸ್ಯೆ, ಹುಣ್ಣಿಮೆಗೆ ಈ ರೀತಿ ಆಚರಣೆ ನಡೆಯುತ್ತದೆ. ಶ್ರೀರಾಮುಲು ಇದೇ ಗ್ರಾಮದವರು. ಅವರು ಪೂಜೆ ಮಾಡುತ್ತಾರೊ, ಇಲ್ಲವೊ ಗೊತ್ತಿಲ್ಲ. ಆದರೆ, ಈ ಆಚರಣೆ ಹಿಂದೆ ಚುನಾವಣೆಯ ಉದ್ದೇಶವಿಲ್ಲ‘ ಎಂದು ನಾಗೇಂದ್ರ ಉತ್ತರಿಸಿದರು.
‘ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ತಮ್ಮದೇ ವಾಹನಗಳಲ್ಲಿ ಬಂದು ಪ್ರಸಾದ ಸ್ವೀಕರಿಸಿದ್ದಾರೆ’ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.