ಚಾಂದ್ ಬಾಷ
ತೆಕ್ಕಲಕೋಟೆ : ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಎಸ್.ಡಬ್ಯ್ಲೂ.ಎಸ್) ಯು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಶಿಥಿಲವಾದ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನ ಕೇಳುವಂತಾಗಿದೆ.
1 ರಿಂದ 6ನೇ ತರಗತಿ ವರೆಗೆ ಒಟ್ಟು 128 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿ ಇಬ್ಬರು ಕಾಯಂ ಶಿಕ್ಷಕರು, ಒಬ್ಬ ಅತಿಥಿ ಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯು 6 ಕೊಠಡಿ ಹೊಂದಿದ್ದು ಇದರಲ್ಲಿ 2 ಕೊಠಡಿಗಳು ಮಾತ್ರ ಬಳಕೆಗೆ ಯೋಗ್ಯವಾಗಿವೆ.
ನಾಲ್ಕು ಕೊಠಡಿಗಳಲ್ಲಿ ಒಂದು ಕೊಠಡಿಗೆ ಚುನಾವಣೆಯ ಸಂದರ್ಭದಲ್ಲಿ ಚಾವಣಿಯ ಸಿಮೆಂಟ್ ಉದುರದಂತೆ ರಿಪೇರಿ ಮಾಡಲಾಗಿದೆ. ಇನ್ನೊಂದು ಕೊಠಡಿಯ ಚಾವಣಿಯು ಮಳೆಯಿಂದಾಗಿ ತೇವಾಂಶ ಹಿಡಿದುಕೊಂಡಿದ್ದು, ಅಲ್ಲಲ್ಲಿ ಸಿಮೆಂಟ್ ಉದುರಿ ಬೀಳುತ್ತಿದೆ. 1 ರಿಂದ 3 ಹಾಗೂ 4 ರಿಂದ 6ನೇ ತರಗತಿಯ ಮಕ್ಕಳನ್ನು 2 ಕೊಠಡಿಗಳಲ್ಲಿ ಕೂಡಿಸಿ ಪಾಠ ಮಾಡಬೇಕಾದ ಅನಿವಾರ್ಯತೆಯಿದೆ.
ಶಾಲೆಯ ಎಲ್ಲಾ ಕೊಠಡಿಗಳು ಶಿಥಿಲಗೊಂಡಿದ್ದು ಹೊಸ ಕೊಠಡಿಗಳನ್ನು ನಿರ್ಮಿಸಿ ಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಪರಿಶೀಲನೆ ನಡೆದಿದೆ.ರೇಖಾ ಶ್ರೀವಾಣಿ, ಮುಖ್ಯಗುರು
ಸಿಮೆಂಟ್ ಸೀಟ್ ಅಳವಡಿಸಿದ ಇನ್ನೊಂದು ಕೊಠಡಿ ಇದ್ದು, ತರಗತಿ ನಡೆಸಲು ಯೋಗ್ಯವಾಗಿಲ್ಲ. ಇದರ ಪಕ್ಕದಲ್ಲಿರುವ ಕೋಣೆಯು ತೀವ್ರ ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಬೀಳುತ್ತದೋ ಎನ್ನುವ ಆತಂಕದಿಂದ ಈ ಕೊಠಡಿಗೆ ಬೀಗ ಜಡಿಯಲಾಗಿದೆ.
ಶಿಥಿಲ ಕೊಠಡಿಗಳ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದಷ್ಟು ಶೀಘ್ರ ಹೊಸ ಕಟ್ಟಡ ನಿರ್ಮಾಣವಾಗುವ ಭರವಸೆ ಇದೆ.ಎಚ್. ಗುರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಸಿರುಗುಪ್ಪ
ಕೋಣೆಗಳ ಕೊರತೆಯಿಂದಾಗಿ 1-3ನೇ ತರಗತಿ ವಿದ್ಯಾರ್ಥಿಗಳನ್ನು ಒಂದು ಕೋಣೆಯಲ್ಲಿ, 4-6ನೇ ತರಗತಿ ವಿದ್ಯಾರ್ಥಿಗಳನ್ನು ಮತ್ತೊಂದು ಕೋಣೆಯಲ್ಲಿ ಕೂಡಿಸಿ ಪಾಠ ಮಾಡಲಾಗುತ್ತಿದ್ದು, ಪಾಠ ಪ್ರವಚನಕ್ಕೆ ಅಡ್ಡಿಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲದಿರುವುದರಿಂದ ಶಾಲೆಯ ಅಕ್ಕ ಪಕ್ಕದ ಮನೆಗಳಲ್ಲಿ ಕೇಳಿ ನೀರು ಕುಡಿಯುವ ಪರಿಸ್ಥಿತಿಯೂ ಇದೆ. ಮಕ್ಕಳಿಗೆ ಶೌಚಾಲಯವೂ ಇರುವುದಿಲ್ಲ.
ಶಿಥಿಲ ಕಟ್ಟದಲ್ಲಿಯೇ ವಿದ್ಯಾರ್ಥಿಗಳು ಓದುತ್ತಿದ್ದು, ಮಳೆ ಬಂದರೆ ಚಾವಣಿಯ ನೀರು ತೊಟ್ಟಿಕ್ಕುತ್ತದೆ. ವಿದ್ಯಾರ್ಥಿಗಳ ಸುರಕ್ಷೆಯ ದೃಷ್ಟಿಯಿಂದ ಹೊಸ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಪಟ್ಟಣ ನಿವಾಸಿ ಎಚ್. ಕಾಡಸಿದ್ದ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.