ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಜಿಲ್ಲೆಯಲ್ಲಿ 459 ಬಾಲ ಗರ್ಭಿಣಿಯರು

2022–23ನೇ ಸಾಲಿನಲ್ಲಿ 966 ಬಾಲಗರ್ಭಿಣಿಯರು: ಆರ್‌ಸಿಎಚ್‌ ಪೋರ್ಟಲ್‌ನಿಂದ ಮಾಹಿತಿ
Published 13 ಮಾರ್ಚ್ 2024, 5:25 IST
Last Updated 13 ಮಾರ್ಚ್ 2024, 5:25 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ವರ್ಷ 966 ಬಾಲಕಿಯರು 18 ವರ್ಷ ತುಂಬುವ ಮೊದಲೇ ಗರ್ಭಿಣಿಯರಾಗಿದ್ದಾರೆ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್‌) ಪೋರ್ಟಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಪತ್ತೆಯಾಗಿದ್ದು ಮಾತ್ರ 459 ಮಂದಿ.

ಕಳೆದ ವರ್ಷ (2022–23ರ ಏಪ್ರಿಲ್‌–ಮಾರ್ಚ್‌ ನಡುವಿನ ಅವಧಿಯಲ್ಲಿ) ರಾಜ್ಯದಲ್ಲಿ 13,477 ಬಾಲಕಿಯರು ಗರ್ಭಿಣಿಯರಾಗಿರುವುದಾಗಿ ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಬೆಂಗಳೂರು ನಗರ (1,334) ಮೊದಲ ಸ್ಥಾನದಲ್ಲಿದ್ದರೆ,  ಬೆಳಗಾವಿ (986) ಎರಡನೇ ಸ್ಥಾನದಲ್ಲಿ ಇತ್ತು. ಬಳ್ಳಾರಿ (966) ಮೂರನೇ ಸ್ಥಾನದಲ್ಲಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ನೌಕರರ ಮೂಲಕ ಬಾಲ ಗರ್ಭಿಣಿಯರನ್ನು ಪತ್ತೆಹಚ್ಚಲು ಆರಂಭಿಸಿತ್ತು. ಸಮೀಕ್ಷೆಯಲ್ಲಿ ಇಲಾಖೆಗೆ 459 ಮಂದಿ ಮಾತ್ರ ಪತ್ತೆಯಾಗಿದ್ದಾರೆ. ಮಿಕ್ಕವರ ವಯಸ್ಸನ್ನು ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ತಪ್ಪಾಗಿ ನಮೂದಿಸಿರುವುದು ಸಮೀಕ್ಷೆ ವೇಳೆ ಬಹಿರಂಗವಾಗಿದೆ ಎಂದು ಬಳ್ಳಾರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೇಲ್ನೋಟಕ್ಕೆ ಕಂಡುಬಂದ ಅಂಶಗಳನ್ನು ಆಧರಿಸಿ ಗರ್ಭಿಣಿಯು ಹದಿಹರೆಯದವಳು ಎಂದು ಆಶಾ ಕಾರ್ಯಕರ್ತೆಯರು ಆರ್‌ಸಿಎಚ್‌ನಲ್ಲಿ ಉಲ್ಲೇಖಿಸುತ್ತಾರೆ. ಹೀಗಾಗಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗಿ ನಮೂದಾಗಿರುವ ಸಾಧ್ಯತೆಗಳಿವೆ. ಗರ್ಭಿಣಿಯು ಬಾಲಕಿಯೋ, ಮಹಿಳೆಯೋ ಎಂಬುದು ಗೊತ್ತಾಗುವುದು ವೈದ್ಯಕೀಯ ಪರೀಕ್ಷೆಗಳಿಂದ ಮಾತ್ರ. ಅಪ್ರಾಪ್ತೆ ಗರ್ಭಿಣಿಯಾಗಿದ್ದಾಳೆ ಎಂದು ಗೊತ್ತಾದ ಕೂಡಲೇ ಈ ಬಗ್ಗೆ ಪೋಕ್ಸೊ ದಾಖಲಿಸಲು ಆಶಾ ಕಾರ್ಯಕರ್ತೆಯರಿಗೂ ಸಮಸ್ಯೆ ಇದೆ.  ಪ್ರಕರಣ ದಾಖಲಿಸಿದರೆ ಸ್ಥಳೀಯವಾಗಿ ಅವರಿಗೆ ಬೆದರಿಕೆ ಎದುರಾಗುತ್ತದೆ’ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಅನಿಲ್‌ ಕುಮಾರ್‌ ಆರ್‌ ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆಗೆ ಕಾರಣವೇನು?:

ಅತೀ ಚಿಕ್ಕ ವಯಸ್ಸಲ್ಲೇ ಗರ್ಭಿಣಿಯರಾಗುತ್ತಿರುವುದಕ್ಕೆ ಬಾಲ್ಯ ವಿವಾಹ ಪ್ರಮುಖ ಕಾರಣವಾಗಿದೆ. ಅರ್ಧದಲ್ಲೇ ಶಾಲೆ ತೊರೆದವರನ್ನು ಬೇಗ ಮದುವೆ ಮಾಡಿಸಲಾಗುತ್ತಿದೆ. ಇಲಾಖೆ ಈಗ ಪತ್ತೆ ಮಾಡಿರುವ 459 ಮಂದಿಯ ಕುಟುಂಬಗಳ ಪೈಕಿ ಬಹುತೇಕ ಕುಟುಂಬಗಳು ಆರ್ಥಿಕವಾಗಿ ದುರ್ಬಲವಾಗಿದ್ದು, ಬೇಗನೇ ಮದುವೆ ಮಾಡಿಕೊಟ್ಟು ಕೈತೊಳೆದುಕೊಳ್ಳುವ ಇರಾದೆ ಹೊಂದಿದ್ದವು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT