ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಣಗಲ್ಲು: ಶ್ರೀಮಂತ ಗ್ರಾಮಕ್ಕೆ ಸಮಸ್ಯೆಗಳ ತೋರಣ

ಕಾರ್ಖಾನೆ, ವಿಮಾನ ನಿಲ್ದಾಣಗಳಿದ್ದರೂ ಆದಾಯಕ್ಕೆ ತಕ್ಕಂತೆ ಆಗಿಲ್ಲ ಅಭಿವೃದ್ಧಿ
ಎರ್ರಿಸ್ವಾಮಿ ಬಿ.
Published 19 ಫೆಬ್ರುವರಿ 2024, 5:48 IST
Last Updated 19 ಫೆಬ್ರುವರಿ 2024, 5:48 IST
ಅಕ್ಷರ ಗಾತ್ರ

ತೋರಣಗಲ್ಲು: ಗ್ರಾಮವು ಜಿಂದಾಲ್ ಕಾರ್ಖಾನೆ ಸೇರಿದಂತೆ ಇತರೆ ಸಣ್ಣ, ಬೃಹತ್ ಪ್ರಮಾಣದ ಕೈಗಾರಿಕೆಗಳಿಂದ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದಿ ಬಳ್ಳಾರಿ ಜಿಲ್ಲೆಯಲ್ಲೆ ಅತಿ ಹೆಚ್ಚು ತೆರಿಗೆ ಪಡೆದು ಶ್ರೀಮಂತ ಗ್ರಾಮವಾಗಿದ್ದರೂ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸದಿರುವುದು ಖೇದಕರ ಸಂಗತಿಯಾಗಿದೆ.

ಸಾರಿಗೆ ಬಸ್‍ನಿಲ್ದಾಣದ ಕೊರತೆ, ಸಕಾಲಕ್ಕೆ ವಿಲೆವಾರಿಯಾಗದ ಕಸ, ಆಪಾರ ಪ್ರಮಾಣದಲ್ಲಿ ಸಂಗ್ರಹಗೊಂಡ ತ್ಯಾಜ್ಯ, ಅನಿಯಂತ್ರಿತ ಸಂಚಾರ ದಟ್ಟಣೆ, ತೆರದ ಚರಂಡಿಗಳ ದುರ್ನಾತ, ನಿರ್ವಹಣೆ ಇಲ್ಲದ ಮಹಿಳಾ ಸಾಮೂಹಿಕ ಶೌಚಾಲಯಗಳು, ಸೌಲಭ್ಯ ವಂಚಿತ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಇತರೆ ಮೂಲಸೌಕರ್ಯ ಸಮಸ್ಯೆಗಳಿಂದ ಗ್ರಾಮವು ಬಳಲುತ್ತಿದೆ.

2011ರ ಜನಗಣತಿಯ ಪ್ರಕಾರ ಗ್ರಾಮವು 12ಸಾವಿರ ಜನಸಂಖ್ಯೆ ಹೊಂದಿದ್ದು, ರಾಜ್ಯ, ಹೊರ ರಾಜ್ಯದ ಸುಮಾರು 40ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರಿಂದ ಗ್ರಾಮದಲ್ಲಿ ಪ್ರಸ್ತುತ 52 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಹೆಚ್ಚು ಜನ ಸಂದಣಿಯ ಪ್ರದೇಶವಾಗಿದೆ.

ಗ್ರಾಮದ ಐದು ವಾರ್ಡ್‍ಗಳಲ್ಲಿನ ಜನಸಂಖ್ಯೆಗೆ ತಕ್ಕಂತೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಸಂಗ್ರಹಗೊಂಡ ತ್ಯಾಜ್ಯ, ಕಸದ ವಿಲೆವಾರಿ, ದಟ್ಟವಾಹನಗಳ ಸಂಚಾರದ ಸಮಸ್ಯೆಗಳು ಶಾಶ್ವತವಾಗಿದ್ದು, ಗ್ರಾಮದ ಶರಬಣ್ಣ ಲೇಔಟ್, 1ನೇ ವಾರ್ಡ್‍ನ ಎಚ್.ಎಲ್.ಸಿ ಹತ್ತಿರದ ಕಾಲೊನಿ, ಬನ್ನಿಮಹಾಂಕಳಮ್ಮ ದೇವಸ್ಥಾನ ಓಣಿ, ಆದರ್ಶನಗರ, ಎರ್ರಿತಾತಕಾಲೊನಿ, ನಾಗಾರ್ಜುನ ಹೋಟೆಲ್‍ ಬಡಾವಣೆ, ಪಾಂಡುರಂಗ ದೇವಸ್ಥಾನದ ಓಣಿ, ಮೆಹಬೂಬ್‍ನಗರದಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ.

ಗ್ರಾಮದ ನಾಡ ಕಾರ್ಯಾಲಯದ ಬಳಿ, ಪಶುಚಿಕಿತ್ಸಾಲಯದ ಆವರಣ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಸಂಗ್ರಹಗೊಂಡ ಕಸ, ಎದುರುಬಸಣ್ಣ ದೇವಸ್ಥಾನದ ಬಳಿಯಲ್ಲಿನ ಹಳ್ಳವು ಸಂಪೂರ್ಣವಾಗಿ ತ್ಯಾಜ್ಯದಿಂದ ಆವೃತವಾಗಿ ಚರಂಡಿಯ ನೀರು ಸ್ಥಗಿತಗೊಂಡು ಗಬ್ಬು ನಾರುತ್ತಿದ್ದು, ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

ಸುಮಾರು ಎಂಟು ವರ್ಷಗಳಿಂದ ಬೈಪಾಸ್ ರಸ್ತೆಯ ಕಾಮಗಾರಿಯು ಸಂಪೂರ್ಣವಾಗಿ ನನೆಗುದಿಗೆ ಬಿದ್ದದ್ದರಿಂದ ಗ್ರಾಮದ ಒಳಗೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರಿಂದ ನಿತ್ಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಕಾರ್ಖಾನೆಗಳ ಕಾರ್ಮಿಕರು, ಸಾರ್ವಜನಿಕರು ಪ್ರಾಣಭಯದಲ್ಲೆ ರಸ್ತೆ ದಾಟಬೇಕಾಗಿದೆ.

ತೋರಣಗಲ್ಲು ಗ್ರಾಮದ ನಾಡ ಕಾರ್ಯಾಲಯದ ಬಳಿ ರಸ್ತೆಯ ಪಕ್ಕದಲ್ಲಿ ಸಂಗ್ರಹವಾದ ಕಸ
ತೋರಣಗಲ್ಲು ಗ್ರಾಮದ ನಾಡ ಕಾರ್ಯಾಲಯದ ಬಳಿ ರಸ್ತೆಯ ಪಕ್ಕದಲ್ಲಿ ಸಂಗ್ರಹವಾದ ಕಸ
ಕೋಟಿಗಟ್ಟಲೆ ತೆರಿಗೆ ಹಣ
ಸಣ್ಣ, ಬೃಹತ್ ಪ್ರಮಾಣದ ಕೈಗಾರಿಕೆಗಳಿಂದ ನಿತ್ಯ ಹೊರಸೂಸುವ ಕಲುಷಿತ ಧೂಳು, ಕಪ್ಪು ಕಿಟ್ಟದ ಹೊಗೆಯಿಂದ ಗ್ರಾಮದ ಜನರು ಹಲವಾರು ವರ್ಷಗಳಿಂದ ಹಲವು ಕಾಯಿಲೆಗಳಿಗೆ ಒಳಗಾಗುವುದು ಸಾಮಾನ್ಯವಾಗಿದೆ. ಗ್ರಾಮ ಪಂಚಾಯಿತಿಗೆ ಗ್ರಾಮ, ಕೈಗಾರಿಕೆಗಳಿಂದ ವಾರ್ಷಿಕವಾಗಿ ಕೋಟಿಗಟ್ಟಲೆ ತೆರಿಗೆಯ ಹಣ ಸಂದಾಯವಾಗುತ್ತಿದ್ದು ಪಂಚಾಯಿತಿಯು ಹಣವನ್ನು ನಿಷ್ಪಕ್ಷಪಾತವಾಗಿ ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಿದರೆ ಮಾದರಿ ಗ್ರಾಮವಾಗುತ್ತದೆ ಎಂಬುದು ಜನರ ಆಶಯವಾಗಿದೆ.
ಪಾಳುಬಿದ್ದ ಮಹಿಳೆಯರ ಸಾಮೂಹಿಕ ಶೌಚಾಲಯ
ಪಾಳುಬಿದ್ದ ಮಹಿಳೆಯರ ಸಾಮೂಹಿಕ ಶೌಚಾಲಯ

ಗ್ರಾಮದಲ್ಲಿ ಬಸ್ ನಿಲ್ದಾಣದ ಕೊರತೆ, ಸೌಲಭ್ಯಗಳಿಂದ ವಂಚಿತವಾದ ಸಮುದಾಯ ಆರೋಗ್ಯ ಕೇಂದ್ರ, ಹೆಚ್ಚಿನ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆ ಈ ಎಲ್ಲ ಸಮಸ್ಯೆಗಳನ್ನು ಪಂಚಾಯಿತಿಯು ಶೀಘ್ರವಾಗಿ ಪರಿಹರಿಸಬೇಕು ಎಂಬುದು ಗ್ರಾಮದ ನಿವಾಸಿ ಲೋಕೇಶ್‍ ಬುಡ್ಡಿಗ ಅವರ ಅಭಿಪ್ರಾಯ.

ವಾಹನಗಳ ಸಂಚಾರ ದಟ್ಟಣೆಯಿಂದ ಅಪಘಾತ ಹೆಚ್ಚಳವಾಗುತ್ತಿದ್ದು ಜನರು ಭಯಪಟ್ಟು ಸಂಚರಿಸುತ್ತಿದ್ದಾರೆ. ಮಹಿಳೆಯರ ಸಾಮೂಹಿಕ ಶೌಚಾಲಯಗಳು ಪಾಳು ಬಿದಿದ್ದು ಅವುಗಳನ್ನು ದುರಸ್ತಿಗೊಳಿಸಬೇಕು. ಸಂಗ್ರಹಗೊಂಡ ತ್ಯಾಜ್ಯ, ಕಸವಿಲೇವಾರಿ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳಿಂದ ಗ್ರಾಮವು ಬಳಲುತ್ತಿದ್ದು ಗ್ರಾಮ ಪಂಚಾಯಿತಿಯು ಇದ್ದೂ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗ್ರಾಮದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಯು.ಶಿವಕುಮಾರ್.

ಎಚ್.ಷಡಕ್ಷರಯ್ಯ 
ಎಚ್.ಷಡಕ್ಷರಯ್ಯ 
ತೋರಣಗಲ್ಲು ಗ್ರಾಮದಲ್ಲಿ ನೂತನ ಸುಜ್ಜಿತ ಬಸ್ ನಿಲ್ದಾಣದ ಕಟ್ಟಡದ ಕಾಮಗಾರಿಯ ಟೆಂಡರ್ ಆಗಿದ್ದು ಶೀಘ್ರದಲ್ಲೇ ಆರಂಭಿಸಲಾಗುವುದು. ಗ್ರಾಮದಲ್ಲಿ ಕಸ ವಿಲೇವಾರಿ ತ್ಯಾಜ್ಯ ಸಂಗ್ರಹವನ್ನು ತೆರೆವುಗೊಳಿಸಲು ಪಿಡಿಒಗೆ ಸೂಚಿಸಲಾಗುವುದು
–ಎಚ್.ಷಡಕ್ಷರಯ್ಯ ಸಂಡೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ.
ಗ್ರಾಮದಲ್ಲಿನ ಮಹಿಳೆಯರ ಶೌಚಾಲಯಗಳನ್ನು ದುರಸ್ತಿಗೊಳಿಸಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೆಚ್ಚಿಸಲಾಗುವುದು. ಸಂಚಾರ ದಟ್ಟಣೆ ನಿವಾರಣೆಗೆ ಸೂಕ್ತ ಕ್ರಮ ವಹಿಸಲಾಗುವುದು
–ಸಿದ್ಧಲಿಂಗಪ್ಪ ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT