ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತ ಕುರಿ, ಮೇಕೆ: ಪರಿಹಾರಕ್ಕಾಗಿ ಅಲೆದಾಟ

ಹೂವಿನಹಡಗಲಿ ತಾಲ್ಲೂಕಿನಲ್ಲಿ 2043 ಕುರಿ, ಮೇಕೆ ಸಾವು
Published 3 ನವೆಂಬರ್ 2023, 14:25 IST
Last Updated 3 ನವೆಂಬರ್ 2023, 14:25 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಪ್ರಕೃತಿ ವಿಕೋಪ ಹಾಗೂ ನಾನಾ ರೋಗಗಳಿಂದ ಎರಡು ವರ್ಷಗಳಲ್ಲಿ 2,043 ಕುರಿ, ಮೇಕೆಗಳು ಮೃತಪಟ್ಟಿವೆ. ಇವರೆಗೂ ಸರ್ಕಾರ ಇವುಗಳಿಗೆ ಪರಿಹಾರ ಬಿಡುಗಡೆ ಮಾಡದಿರುವುದರಿಂದ ಸಂತ್ರಸ್ತ ಕುರಿಗಾರರಿಗೆ ಅಲ್ಪ ನೆರವೂ ಮರೀಚಿಕೆಯಾಗಿದೆ.

ತಾಲ್ಲೂಕಿನಲ್ಲಿ 2022-23ರಲ್ಲಿ 1,538 ಕುರಿಗಳು, 33 ಕುರಿಮರಿಗಳು, 246 ಮೇಕೆಗಳು, 4 ಮೇಕೆ ಮರಿಗಳು ಸಾವಿಗೀಡಾಗಿವೆ. 2023-24ರಲ್ಲಿ 184 ಕುರಿಗಳು, 1 ಕುರಿಮರಿ, 46 ಮೇಕೆಗಳು, 4 ಮೇಕೆ ಮರಿಗಳು ಮೃತಪಟ್ಟಿವೆ. ಆಕಸ್ಮಿಕ ಮರಣ ಹೊಂದುವ ಕುರಿ, ಮೇಕೆಗಳಿಗೆ ತಲಾ ₹5 ಸಾವಿರ, ಮರಿಗಳಿಗೆ ₹3,500 ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ. ಕುರಿ ಮತ್ತು ಉಣ್ಣೆ ನಿಗಮದಿಂದ ಇವುಗಳಿಗೆ ಪರಿಹಾರ ನೀಡಲಾಗುತ್ತಿದೆ. 2021ರ ಡಿಸೆಂಬರ್‌ನಿಂದ ಈವರೆಗೆ ಮೃತಪಟ್ಟಿರುವ ಕುರಿ, ಮೇಕೆಗಳಿಗೆ ಒಟ್ಟು ₹1,01,36,500 ಪರಿಹಾರ ಬಾಕಿ ಇದ್ದು, ಅರ್ಜಿ ಸಲ್ಲಿಸಿರುವ ಸಂತ್ರಸ್ತ ಕುರಿಗಾರರು ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ.

ತಾಲ್ಲೂಕಿನ ಹೊಳಗುಂದಿಯ ಅಡವಿಯಲ್ಲಿ ಎರಡು ವರ್ಷದ ಹಿಂದೆ ವಿಷಕಾರಿ ಸೊಪ್ಪು ಸೇವಿಸಿ ನೂರಾರು ಕುರಿ, ಮೇಕೆಗಳು ಅಸ್ವಸ್ಥಗೊಂಡಿದ್ದವು. ಹೊಳಗುಂದಿಯ ಮಲ್ಲನಕೆರೆ ಹನುಮಂತಪ್ಪ ಎಂಬುವವರ 26 ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದವು. ಪಶುಸಂಗೋಪನೆ ಇಲಾಖೆ ವೈದ್ಯರ ಸಕಾಲಿಕ ಚಿಕಿತ್ಸೆಯಿಂದ 50ಕ್ಕೂ ಹೆಚ್ಚು ಕುರಿಗಳು ಬದುಕುಳಿದಿದ್ದವು. ಇಲ್ಲಿ ಸಾವಿಗೀಡಾಗಿದ್ದ ಕುರಿಗಳಿಗೂ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ.

ನೀಲಿ ನಾಲಿಗೆ ರೋಗ, ಕರುಳು ಬೇನೆ ಹಾಗೂ ವಿಷಕಾರಿ ಆಹಾರ ಸೇವನೆಯಿಂದ ತಾಲ್ಲೂಕಿನಲ್ಲಿ ಕುರಿ, ಮೇಕೆಗಳು ಸಾವಿಗೀಡಾಗಿವೆ. ಕೆಲವೆಡೆ ಮನೆ ಕುಸಿತ, ಮಳೆ, ಸಿಡಿಲ ಆಘಾತದಂತಹ ಪ್ರಕೃತಿ ವಿಕೋಪಗಳಿಂದ ಮೃತಪಟ್ಟಿವೆ. ನಿಯಮಾನುಸಾರ ಮರಣೋತ್ತರ ಪರೀಕ್ಷೆ ವರದಿ, ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರೂ ಪರಿಹಾರ ಸಿಕ್ಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

‘ಎರಡು ವರ್ಷಗಳಲ್ಲಿ ರೋಗದಿಂದ 40 ಕುರಿಗಳು ಮೃತಪಟ್ಟಿದ್ದು, ₹5 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಸರ್ಕಾರದ ಅಲ್ಪ ಪರಿಹಾರವಾದರೂ ಆಸರೆಯಾದೀತೆಂದು ಚಾತಕಪಕ್ಷಿಯಂತೆ ಕಾಯುತ್ತಿವೆ. ಇನ್ನೂ ಪರಿಹಾರ ಬಂದಿಲ್ಲ’ ಎಂದು ಹ್ಯಾರಡ ಗ್ರಾಮದ ಕುರಿಗಾಹಿ ಕಮ್ಮಜ್ಜಿ ಮಂಜಪ್ಪ ಹೇಳಿದರು.

‘ಆರು ತಿಂಗಳಲ್ಲಿ 8 ಕುರಿ, ಮೇಕೆಗಳು ಸಾವಿಗೀಡಾಗಿವೆ. ನಿಯಮಾನುಸಾರ ಅರ್ಜಿ ಸಲ್ಲಿಸಿದ್ದರೂ ಪರಿಹಾರ ಬಂದಿಲ್ಲ. ಕಚೇರಿಗಳಿಗೆ ಅಲೆದಾಡಿ ಸಾಕಾಗಿದೆ. ಪರಿಹಾರ ಮಂಜೂರಾದರೆ ನಾವೇ ತಿಳಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರದ ಯೋಜನೆಗಳು ಘೋಷಣೆಗೆ ಸೀಮಿತವಾಗಬಾರದು’ ಎಂದು ಹೊಳಲಿನ ಗಾಣದ ಬಸವರಾಜಪ್ಪ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT