ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಮಾಂಜ್ರಾ: ನೀರಿಗೆ ಹಾಹಾಕಾರ

ಔರಾದ್: ಮಕ್ಕಳ ಶಾಲೆ ಬಿಡಿಸಿ ನೀರು ಹಿಡಿಯಲು ಹಚ್ಚಿದ ಪಾಲಕರು
ಮನ್ಮಥಪ್ಪ ಸ್ವಾಮಿ
Published 16 ಮಾರ್ಚ್ 2024, 5:26 IST
Last Updated 16 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಔರಾದ್: ಮಳೆ ಕೊರತೆ, ವಿಪರಿತ ಬಿಸಿಲಿನಿಂದಾಗಿ ಮಾಂಜ್ರಾ ನದಿ ಸೇರಿದಂತೆ ನೀರಿನ ಮೂಲಗಳು ಬತ್ತಿದ್ದು ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಹೆಚ್ಚಾಗಿದೆ.

ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಸುವ ಹಾಲಹಳ್ಳಿ ಬ್ಯಾರೇಜ್‌ನಲ್ಲಿ ನೀರಿನ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನೀರು ಪೂರೈಕೆ ಸ್ಥಗಿತವಾಗಿದ್ದು ಜನರು ಪರದಾಡುತ್ತಿದ್ದಾರೆ. 

‘ಮೊದಲು ನಮ್ಮ ಗಲ್ಲಿಗೆ ಎರಡು ದಿನಕ್ಕೊಮ್ಮೆ ನೀರು ಬರುತ್ತಿತ್ತು. ಈಗ ಆರು ದಿನಗಳಿಂದ ಒಮ್ಮೆಯೂ ನೀರು ಬಂದಿಲ್ಲ. ಹೀಗಾಗಿ ₹300 ಕೊಟ್ಟು 500 ಲೀಟರ್ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಪಟ್ಟಣದ ಶಿಕ್ಷಕರ ಕಾಲೊನಿ ನಿವಾಸಿಗಳು.

‘ನೀರಿನ ಸಮಸ್ಯೆ ನಮಗೆ ತುಂಬಾ ಕಾಡುತ್ತಿದೆ. ಕೆಲಸ ಮಾಡದೆ ನಮ್ಮ ಹೊಟ್ಟೆ ತುಂಬುವುದಿಲ್ಲ. ಇನ್ನು ಕೆಲಸಕ್ಕೆ ಹೋದರೆ ನೀರು ತರಲು ಆಗುತ್ತಿಲ್ಲ. ಹೀಗಾಗಿ ನಮ್ಮ ಮಕ್ಕಳನ್ನು ಶಾಲೆ ಬಿಡಿಸಿ ನೀರು ತರಲು ಕೆಲಸಕ್ಕೆ ಹೆಚ್ಚಿದ್ದೇವೆ’ ಎನ್ನುತ್ತಾರೆ ಪಟ್ಟಣದ ಆಶ್ರಯ ಕಾಲೊನಿ (ರಾಮನಗರ) ನಿವಾಸಿಗಳು.

‘ಈ ಬಾರಿ ಮಳೆ ಕೊರತೆಯಾಗಿ ನೀರಿನ ಸಮಸ್ಯೆ ಆಗಲಿದೆ ಎಂಬುದು ಗೊತ್ತಿದ್ದರೂ ಅಧಿಕಾರಿಗಳು ಮುಂಜಾಗೃತೆ ಕ್ರಮ ಕೈಗೊಳ್ಳದಿರುವುದರಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆಯಾಗಿದೆ. ಹಾಲಹಳ್ಳಿ ಬ್ಯಾರೇಜ್‌ನಲ್ಲಿ ನೀರಿನ ಕೊರತೆಯಾದರೂ ತೇಗಂಪುರ ಕೆರೆಯಲ್ಲಿ ಸಾಕಷ್ಟು ನೀರಿದೆ. ಅದನ್ನು ಬಳಸಿ ಜನರಿಗೆ ನೀರು ಕೊಡಬಹುದಿತ್ತು’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಾಲಹಳ್ಳಿ ಬ್ಯಾರೇಜ್‌ನಲ್ಲಿ ಅಗತ್ಯ ನೀರಿನ ಲಭ್ಯತೆ ಇಲ್ಲದ ಕಾರಣ ಔರಾದ್ ಪಟ್ಟಣಕ್ಕೆ ನೀರು ಪೂರೈಸಲು ಆಗುತ್ತಿಲ್ಲ. ಹೀಗಾಗಿ ಕಾರಂಜಾ ಜಲಾಶಯದಿಂದ ಬ್ಯಾರೇಜ್‌ಗೆ ನೀರು ಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇನ್ನೆರಡು ದಿನಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಪಟ್ಟಣ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

ಹಾಲಹಳ್ಳಿ ಬ್ಯಾರೇಜ್‌ನಲ್ಲಿ ನೀರಿನ ಕೊರತೆ ಹಾಗೂ ಇದರಿಂದ ಉಂಟಾದ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಶೀಘ್ರ ಸಮಸ್ಯೆ ಪರಿಹಾರವಾಗಲಿದೆ.

- ನಾಗಯ್ಯ ಹಿರೇಮಠ ತಹಶೀಲ್ದಾರ್ ಔರಾದ್

‌ಔರಾದ್ ಪಟ್ಟಣದ ಜನ ಕಳೆದ ಒಂದು ವಾರದಿಂದ ಕುಡಿಯು ನೀರಿಗಾಗಿ ಸುಡು ಬಿಸಿಲಲ್ಲ ಪರದಾಡುತ್ತಿದ್ದಾರೆ. ಆದರೆ ಅಧಿಕಾರಿಗಳಿಗೆ ಮಾತ್ರ ಇದು ಯಾವುದೂ ಕಾಣುತ್ತಿಲ್ಲ.

- ಅನೀಲ ಜಿರೋಬೆ ಸಾಮಾಜಿಕ ಕಾರ್ಯಕರ್ತ

ಜನಪ್ರತಿನಿಧಿಗಳು ಅಧಿಕಾರಿಗಳ ನಿರ್ಲಕ್ಷ್ಯದಿ ಪಟ್ಟಣದ ಜನ ಪದೇ ಪದೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನಮಗೆ ಶುದ್ಧ ನೀರು ಮರೀಚಿಕೆಯಾಗಿದೆ.

- ಗುರುನಾಥ ವಡ್ಡೆ ಸಾಮಾಜಿ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT