ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜ. 6ರಿಂದ ಎರಡು ದಿನ ಯುವಜನೋತ್ಸವ

ರಾಜ್ಯ ಮಟ್ಟದ ಮೇಳಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಡಿ.ಸಿ ಸೂಚನೆ
Published 29 ಡಿಸೆಂಬರ್ 2023, 14:28 IST
Last Updated 29 ಡಿಸೆಂಬರ್ 2023, 14:28 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಜ. 6 ಮತ್ತು 7 ರಂದು ರಾಜ್ಯಮಟ್ಟದ ಯುವಜನೋತ್ಸವ ಏರ್ಪಾಡಿಸಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಜ.6ರಂದು ನಗರದ ವಿಮ್ಸ್ ಮೈದಾನದಲ್ಲಿ ಸಂಜೆ ಯುವಜನೋತ್ಸವ ಉದ್ಘಾಟನೆಯಾಗಲಿದೆ  ಎಂದು  ತಿಳಿಸಿದರು.

ವಿಭಿನ್ನವಾಗಿ ಉತ್ಸವದ ರೀತಿ ಮೇಳ ಸಂಘಟಿಸಬೇಕು. ಪ್ರತಿ ಜಿಲ್ಲೆಯಿಂದ 35 ‍ಪ್ರತಿನಿಧಿಗಳಂತೆ 1000 ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದು, ಭಾರತೀಯ ಶಾಸ್ತ್ರೀಯ ಕಲೆಗಳನ್ನು ಯುವಜನರಲ್ಲಿ  ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಪ್ರತಿನಿಧಿಗಳಿಗೆ ಉತ್ತಮ ವಸತಿ, ಗುಣಮಟ್ಟದ ಆಹಾರ, ಕುಡಿಯುವ ನೀರಿನ ವ್ಯವಸ್ಥೆ, ಭದ್ರತೆ, ಸಾರಿಗೆ ಸೇರಿದಂತೆ ಕೋವಿಡ್ ನಿಯಮಗಳ ಪಾಲನೆ ಜತೆ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು ಎಂದು  ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಯುವಜನೋತ್ಸವದಲ್ಲಿ ನಡೆಯುವ ಜಾನಪದ ನೃತ್ಯ, ಹಾಡು, ಎಕಾಂಕ ನಾಟಕ, ಮತ್ತಿತರ ಸ್ಪರ್ಧೆಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ, ಜಿಪಂ ಉಪ ಕಾರ್ಯದರ್ಶಿ ಗಿರಿಜಾ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಹೊನ್ನುರಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT