ಮಂಗಳವಾರ, ಅಕ್ಟೋಬರ್ 20, 2020
27 °C

ದೊಡ್ಡಬಳ್ಳಾಪುರ:ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ₹1 ಶುಲ್ಕ ಪಡೆದು ಟ್ಯೂಷನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ‘2019ನೇ ಸಾಲಿನಲ್ಲಿ ₹101 ಶುಲ್ಕ ಪಡೆದು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್‌‌ ಮಾಡಿದ್ದ ನಗರದ ವಿವೇಕ್ ವಿಷನ್ ಕ್ಲಾಸಸ್ ವತಿಯಿಂದ ಈ ಬಾರಿ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ₹1 ಶುಲ್ಕ ಪಡೆದು 10ನೇ ತರಗತಿಗೆ ಟ್ಯೂಷನ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು’ ಎಂದು ವಿವೇಕ್ ವಿಷನ್ ಕ್ಲಾಸಸ್‍ನ ವ್ಯವಸ್ಥಾಪಕ ನಿರ್ದೇಶಕ ಎ.ನಾಗರಾಜು ಹೇಳಿದರು.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರೌಢಶಿಕ್ಷಣ ಅವಧಿಯಿಂದಲೇ ಯುಪಿಎಸ್ಸಿ, ಐಐಟಿ, ನೀಟ್, ಸಿಎನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಆರಂಭಿಸುವಂತಾಗಬೇಕು ಎನ್ನುವ ಮಹಾತ್ವಾಕಾಂಕ್ಷೆಯಿಂದ ₹1 ಶುಲ್ಕದಲ್ಲಿ ವಾರ್ಷಿಕ ಟ್ಯೂಷನ್ ಆರಂಭಮಾಡಲಾಗುತ್ತಿದೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಗಣಿತ, ವಿಜ್ಞಾನ, ಸಮಾಜವಿಜ್ಞಾನ ವಿಷಯಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೋಧನೆ ಮಾಡಲಾಗುವುದು’ ಎಂದರು.

ಆಯ್ಕೆ ಪ್ರಕ್ರಿಯೆ: ‘9ನೇ ತರಗತಿ ಉತ್ತೀರ್ಣ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಆಯ್ಕೆ ಪರೀಕ್ಷೆ ಬರೆಯಬಹುದು. 9ನೇ ತರಗತಿಯ ತರಗತಿ ಕನ್ನಡ ಭಾಷೆಯ ಮೌಲ್ಯಾಂಕನ (20ಅಂಕ), ಸಮಾಜ ವಿಜ್ಞಾನದ ನಮ್ಮ ಸಂವಿಧಾನ (ಅವರ್ ಕಾನ್‌ಸ್ಟಿಟ್ಯೂಶನ್) 20 ಅಂಕ, ಗಣಿತದಲ್ಲಿ ಬಹುಪದೋಕ್ತಿಗಳು (ಪಾಲಿನಾಮಿಯಲ್ಸ್‌) 20 ಅಂಕ ಒಳಗೊಂಡಂತೆ ಒಟ್ಟು 60 ಅಂಕಗಳ ಪರೀಕ್ಷೆಯು ಸೆ.10ರಂದು ಬೆಳಿಗ್ಗೆ 8ಕ್ಕೆ ನಡೆಯಲಿದೆ. ಸೆ.15ರಂದು ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದಂದು ವಿದ್ಯಾರ್ಥಿಗಳ ಆಯ್ಕೆಪಟ್ಟಿ ಪ್ರಕಟಿಸಲಾಗುವುದು’ ಎಂದರು.

ಸಾಧಕರ ಪರಿಚಯ: ‘ಸಾಧಕರ ಪರಿಚಯವನ್ನು ಪ್ರತಿ ವಾರದ ಕೊನೆಯಲ್ಲಿ ಮಾಡಕೊಡಲಾಗುವುದು. ಐಎಎಸ್, ಐಪಿಎಸ್ ಅಧಿಕಾರಿಗಳು, ಐಟಿ ಕಂಪನಿಗಳಲ್ಲಿ ಪ್ರಸ್ತುತ ಉನ್ನತ ಸ್ಥಾನದಲ್ಲಿರುವ ಸಾಧಕರನ್ನು ತರಗತಿಗೆ ಆಹ್ವಾನಿಸಿ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು’ ಎಂದರು.

ಉಚಿತ ತರಬೇತಿ: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್‌ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 7019322451 ಸಂಪರ್ಕಿಸಬಹುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.