ಭಾನುವಾರ, ಜನವರಿ 19, 2020
27 °C

ಕೇಕ್ ತಿಂದು 11 ಮಕ್ಕಳು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಇಲ್ಲಿನ ಬೊಮ್ಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಬೇಕರಿ ಅಂಗಡಿಯಿಂದ ಖರೀದಿಸಿ ತಂದಿದ್ದ ಕೇಕ್ ತಿಂದ 11 ಮಕ್ಕಳು ಅಸ್ವಸ್ಥಗೊಂಡ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.

ನಗರದ ಖಾಸಗಿ ಬೇಕರಿಯೊಂದರಲ್ಲಿ ಮಕ್ಕಳು ಶುಕ್ರವಾರ ಬೆಳಿಗ್ಗೆಯೇ ಖರೀದಿಸಿದ್ದರು. ಜ.1 ರಂದು ಶಾಲೆಯ ಕೆಲ ಮಕ್ಕಳು ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಜಾಂಬೋರೇಟ್ ನಲ್ಲಿ ಭಾಗವಹಿಸಿದ್ದರು, ಜ. 2 ರಂದು ಅಲ್ಲಿನ ಕಾರ್ಯಕ್ರಮ ಮುಗಿದ ನಂತರ ಜ. 3 ರಂದು ಶಾಲೆಗೆ ಹಾಜರಾಗಿದ್ದರು ಎಂಬುದಾಗಿ ಪೋಷಕರು ತಿಳಿಸಿದ್ದಾರೆ.

ಅಸ್ವಸ್ಥರಾದ ತಕ್ಷಣ ಮಕ್ಕಳನ್ನು ಆಟೊ ಇತರೆ ವಾಹನಗಳಲ್ಲಿ ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆ ನೀಡಲಾಯಿತು. ವಿದ್ಯಾರ್ಥಿಗಳು ಚೇತರಿಸಿಕೊಂಡ ಪರಿಣಾಮ ಪೋಷಕರ ಆತಂಕ ದೂರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಮೂರ್ತಿ ಮಾತನಾಡಿ, ‘ಸದ್ಯ ಯಾವುದೇ ಅವಘಡ ಆಗಿಲ್ಲ, ಮಕ್ಕಳೆಲ್ಲ ಸಹಜ ಸ್ಥಿತಿಗೆ ಮರಳಿದ್ದಾರೆ, ಈಗಾಗಲೇ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಕೇಕ್ ಎಲ್ಲಿಂದ ಖರೀದಿಸಿದ್ದರು ಎಂದು ತಿಳಿದುಕೊಂಡು ಅದರ ಗುಣಮಟ್ಟದ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪೋಷಕರ ಕೋರಿಕೆ ಮೇರೆಗೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ’ ಎಂದು ಹೇಳಿದರು.

ಮುಖ್ಯ ಶಿಕ್ಷಕ ಹನುಮಂತರಾಯಪ್ಪ ಮತ್ತು ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಕರೆ ಸ್ವೀಕರಿಸಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು