ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ನಗರಸಭೆ ಮುಂದೆ ಕೊಂಗಾಡಿಯಪ್ಪ ಪುತ್ಥಳಿ

ಕೊಂಗಾಡಿಯಪ್ಪ ಜನ್ಮದಿನದಲ್ಲಿ ಶಾಸಕ ಧೀರಜ್‌ ಮುನಿರಾಜ್‌ ಭರವಸೆ
Published 23 ಫೆಬ್ರುವರಿ 2024, 6:01 IST
Last Updated 23 ಫೆಬ್ರುವರಿ 2024, 6:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಅಭಿವೃದ್ದಿಗೆ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಕೊಡುಗೆ ಮಹತ್ವದ್ದಾಗಿದೆ. ಅವರ ನಿಸ್ವಾರ್ಥ ಸೇವೆ, ಶ್ರಮದಿಂದ‌ ದೊಡ್ಡಬಳ್ಳಾಪುರ ನೇಕಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯದಲ್ಲಿಯೇ ಹೆಸರಾಗಲು ಕಾರಣವಾಗಿದೆ. ನಗರಸಭೆ ಮುಂದೆ ಕೊಂಗಾಡಿಯಪ್ಪ ಅವರ ಪುತ್ಥಳಿ ಸ್ಥಾಪಿಸುವ ಕುರಿತು ಸರ್ಕಾರದ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ದೇವಾಂಗ ಮಂಡಲಿ ಗುರುವಾರ ಆಯೋಜಿಸಿದ್ದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ 164ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ನೇಕಾರಿಕೆಯಲ್ಲಿ ಪ್ರಸಿದ್ದವಾಗಿರುವ ದೊಡ್ಡಬಳ್ಳಾಪುರಕ್ಕೆ ಹೆಸರು ಬರಲು ಕೊಂಗಾಡಿಯಪ್ಪ ಅವರ ಪರಿಶ್ರಮ ಕಾರಣವಾಗಿದೆ. ಇಂತಹ ಮಹನೀಯರ ಪುತ್ಥಳಿಯನ್ನು ಸ್ಥಾಪಿಸಲು ಮಾಡಿರುವ ಮನವಿ ಪುರಸ್ಕರಿಸಲಾಗುವುದು. ಸಮಾಜಸೇವೆ, ಶಿಕ್ಷಣವಲ್ಲದೇ ಪರಿಸರದ ಮೇಲೆ ಅವರಿಗಿದ್ದ ಕಾಳಜಿ ಇಂದಿನವರಿಗೆ ಮಾದರಿಯಾಗಬೇಕಿದೆ. ಶಿಕ್ಷಣ, ಪರಿಸರ, ಸಮಾಜ ಸೇವೆಗಳಿಗೆ ಒತ್ತು ನೀಡಿದ್ದ ಅವರ ಬದುಕು ಹಾಗೂ ಜೀವನ ಕ್ರಮ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು.

ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಮಾತನಾಡಿ, ಕೊಂಗಾಡಿಯಪ್ಪ ಅವರು ಅಧಿಕಾರಿಗಳ ಬಳಿಗೆ ತೆರಳಿ ಊರಿಗೆ ಆಗಬೇಕಾದ ಕೆಲಸಗಳನ್ನು ನಿವೇದನೆ ಮಾಡಿ ಆಗುವವರೆಗೂ ಬೆಂಬಿಡದೇ ಮಾಡಿಸುತ್ತಿದ್ದರು. ಇಂತಹ ಮಹನೀಯರ ಪುತ್ಥಳಿಯನ್ನು ನಗರಸಭೆ ಮುಂದೆ ನಿರ್ಮಾಣ ಮಾಡಲು ಶಾಸಕರು ಹಾಗೂ ಸ್ಥಳೀಯ ಆಡಳಿತ ವಿಳಂಬ ಮಾಡಬಾರದು ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಕೆ.ಪರಮೇಶ್, ದೇವಾಂಗ ಮಂಡಲಿ ಗೌರವ ಕಾರ್ಯದರ್ಶಿ ಎಂ.ಜಿ.ಅಮರನಾಥ್, ಉಪಾಧ್ಯಕ್ಷ ಬಿ.ಜಿ.ಅಮರನಾಥ್, ಪಿ.ಗೋಪಾಲ್, ಸಹ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಎಚ್.ವಿ.ಅಖಿಲೇಶ್ ಸೇರಿದಂತೆ ನಗರಸಭೆ ಸದಸ್ಯರು, ದೇವಾಂಗ ಮಂಡಲಿ ನಿರ್ದೇಶಕರು ಇದ್ದರು.

ನಗರದ ಮುಖ್ಯರಸ್ತೆಯ ಮಾರುಕಟ್ಟೆ ಶಾಲೆಯ ಮುಂಭಾಗದಲ್ಲಿನ ಕೊಂಗಾಡಿಯಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಕೊಂಗಾಡಿಯಪ್ಪ ಸಮಾಧಿಯ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕೊಂಗಾಡಿಯಪ್ಪ ಅವರ  ಸಮಾಧಿಗೆ ಶಾಸಕ ಧೀರಜ್‌ ಮುನಿರಾಜು ಪುಷ್ಪನಮನ ಸಲ್ಲಿಸಿದರು
ಕೊಂಗಾಡಿಯಪ್ಪ ಅವರ  ಸಮಾಧಿಗೆ ಶಾಸಕ ಧೀರಜ್‌ ಮುನಿರಾಜು ಪುಷ್ಪನಮನ ಸಲ್ಲಿಸಿದರು

ನಗರಸಭೆಯಿಂದ ಜಯಂತಿ ಆಚರಣೆ

ನಗರಸಭೆ ವತಿಯಿಂದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರ 164ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯರಸ್ತೆಯ ಮಾರುಕಟ್ಟೆಯ ವೃತ್ತದ ಡಿ.ಕೊಂಗಾಡಿಯಪ್ಪನವರ ಭಾವಚಿತ್ರದ ಮೆರವಣಿಗೆಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಗರಸಭೆ ಕಾರ್ಯಾಲಯದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಎಸ್‌. ಸುಧಾರಾಣಿ ಲಕ್ಷ್ಮೀನಾರಾಯಣ್ ನಗರಸಭೆ ಸಮೀಪ ಪುತ್ಥಳಿ ನಿರ್ಮಾಣಕ್ಕೆ ₹20 ಲಕ್ಷ ಅನುದಾನ ಮೀಸಲಿರಿಸಲಾಗಿದ್ದು ಪ್ರಕ್ರಿಯೆಗಳು ನಡೆಯುತ್ತಿವೆ. ಶಾಸಕರಿಗೂ ಮನವಿ ಮಾಡಲಾಗಿದೆ ಎಂದರು. ನಗರಸಭೆ ಸದಸ್ಯ ಟಿ.ಎನ್.ಪ್ರಭುದೇವ್ ₹5 ಸಂಬಳಕ್ಕೆ ಶಿಕ್ಷಕರ ವೃತ್ತಿಯಲ್ಲಿ ತೊಡಗಿದ್ದ ಕೊಂಗಾಡಿಯಪ್ಪನವರು ತಮ್ಮ ಸೇವಾ ಮನೋಭಾವ ಜನ ಸೇವೆಯಿಂದಾಗಿ ಪುರಸಭೆಯ ಮೊದಲ ಅಧ್ಯಕ್ಷರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಇಂದಿನ ಪೀಳಿಗೆಗೆ ಕೊಂಗಾಡಿಯಪ್ಪನವರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ರವಿಕಿರಣ್ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿ.ತಿಮ್ಮಶೆಟ್ಟಪ್ಪ ಟಿ.ಎನ್.ಪ್ರಭುದೇವ್ ಬಿ.ಜಿ.ಹೇಮಂತರಾಜು ಕೆ.ಆರ್.ರವಿಕಿರಣ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಡಿ.ಕೊಂಗಾಡಿಯಪ್ಪನವರ ಜಯಂತಿ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಗರಸಭೆ ಉಪಾಧ್ಯಕ್ಷೆ ಫರ್ಹಾನಾ ತಾಜ್ ಪೌರಾಯುಕ್ತ ಕೆ.ಪರಮೇಶ್ ಹಾಗೂ ನಗರಸಭಾ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT