ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: 180 ಅನಧಿಕೃತ ಗ್ರಾನೈಟ್‌ ಕಾರ್ಖಾನೆ

ನಿಷೇಧದ ನಡುವೆ 300 ಅಡಿ ಅಳದಲ್ಲಿ ಗಣಿಗಾರಿಕೆ
Published 15 ಫೆಬ್ರುವರಿ 2024, 7:56 IST
Last Updated 15 ಫೆಬ್ರುವರಿ 2024, 7:56 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನಾದ್ಯಂತ 180ಕ್ಕೂ ಅಧಿಕ ಅನಧಿಕೃತ ಗ್ರಾನೈಟ್‌ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆಯ ಅಧಿಕಾರಿಗಳು ನಿಶಕ್ತರಾಗಿದ್ದಾರೆ ಎಂದು ರೇಷ್ಮೆ ಬೆಳೆಗಾರ ಚಿಕ್ಕೆಗೌಡ ಆರೋಪಿಸಿದರು.

ಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ರೈತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅನಧಿಕೃತ  ಗ್ರಾನೈಟ್‌ ಕಾರ್ಖಾನೆ ಹಾಗೂ ಗಣಿಗಾರಿಕೆ ವಿರುದ್ಧ ವಿರುದ್ಧ ದೂರು ನೀಡಿದರೇ, ಅಧಿಕಾರಿಗಳು ಇವುಗಳ ವಿರುದ್ಧ ಕ್ರಮ ಕೈಗೊಳ್ಳುಬ ಬದಲು, ವಿವಿಧ ಆಮಿಷಗಳಿಗೆ ಬಲಿಯಾಗಿ ಅಕ್ರಮ ಗಣಿಯನ್ನು ಸಕ್ರಮಗೊಳಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಅರ್ಕಾವತಿ ನದಿ ಪಾತ್ರ ಪ್ರದೇಶದಲ್ಲಿ ಗಣಿ ಚಟುವಟಿಕೆ ನಿಷಿದ್ಧವಿದ್ದರೂ ಸುಮಾರು 300 ಅಡಿ ಅಳದಷ್ಟು ಭೂಗರ್ಭ ಕೊರೆದು, ಕಲ್ಲು ದಿಮ್ಮಿಗಳನ್ನು ಸಾಗಿಸುತ್ತಿದ್ದಾರೆ. ದಿನದ 24 ಗಂಟೆಯೂ ಅಪಾಯಕಾರಿ ಸ್ಫೋಟಕ ಬಳಸಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದ್ದು, ಗ್ರಾಮಗಳಲ್ಲಿ ವಾಸ ಮಾಡದಂತಹ ದುಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.

ಬೀರಸಂದ್ರದ ರೈತ ರವಿ ಮಾತನಾಡಿ, ಜಿಲ್ಲಾಡಳಿತ ಭವನದ ಮುಂದೆ ಇರುವ ಅಮೇಟಿ ವಿಶ್ವವಿದ್ಯಾಲಯ ಜಾಗದಲ್ಲಿ ರಾಜಕಾಲುವೆಗಳನ್ನು ಮುಚ್ಚಲಾಗಿದೆ. ಪಥ ಬದಲಾವಣೆ ಮಾಡದೇ ರೈತರನ್ನು ಶೋಷಣೆ ನಡೆಸಿ, ಫಸಲು ಹಾಳು ಮಾಡುತ್ತಿದ್ದಾರೆ. ಐತಿಹಾಸಿಕ ಚಪ್ಪರದ ಕಲ್ಲು ಸ್ಮಾರಕ ಹೊಡೆದು ಹಾಕಿದ್ದರೂ, ರಾಷ್ಟ್ರೀಯ ಸ್ಮಾರಕವನ್ನು ರಕ್ಷಿಸಲು ಅಧಿಕಾರಿ ವರ್ಗ ಹಿಂದೇಟು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಮುಖಂಡ ಸಿದ್ಧಾರ್ಥ್‌ ಮಾತನಾಡಿ, ಜನ, ಜಾನುವಾರುಗಳು ತಾಲ್ಲೂಕಿನಲ್ಲಿ ಬದುಕದಂತಹ ಸ್ಥಿತಿ ನಿರ್ಮಾಣವಾಗಿದೆ. ಬಂಡವಾಳಶಾಯಿಗಳ ಪರವಾಗಿ ಕಂದಾಯ ನ್ಯಾಯಾಲಯ ಆದೇಶ ನೀಡಿ, ಶೋಷಿತ ವರ್ಗ ಭೂ ಮಾಲೀಕತ್ವಕ್ಕೆ ಕಾನೂನು ಸಂಘರ್ಷ ನಡೆಸುತ್ತಿದೆ. ದೇವನಹಳ್ಳಿ ಕೃಷಿ ಮಾಡದಂತಹ ಅಘೋಷಿತ ತುರ್ತುಪರಿಸ್ಥಿತಿ ಹೇರಲಾಗಿದೆ ಎಂದು ಆರೋಪ ಮಾಡಿದರು.

ಪಹಣಿ ತಿದ್ದುಪಡಿ, ರಾಜಕಾಲುವೆ, ಕೆರೆ ಒತ್ತುವರಿ ತೆರವು, ಅನಧಿಕೃತ ಕಟ್ಟಡಗಳ ತೆರವು, ಖಾತೆ ಬದಲಾವಣೆ ಸೇರಿದಂತೆ ಇತರ ಸಮಸ್ಯೆಗಳ ಕುರಿತು ಸಭೆಯಲ್ಲಿ 30ಕ್ಕೂ ಹೆಚ್ಚು ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಉಪವಿಭಾಗಾಧಿಕಾರಿ ಶ್ರೀನಿವಾಸ್‌, ತಹಶೀಲ್ದಾರ್ ಶಿವರಾಜ್‌, ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಶೀಲಮ್ಮ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಿದ್ಧರಾಮಯ್ಯ, ಹಕ್ಕುದಾರಿಕೆ ಶಿರಸ್ತೇದ್ದಾರ್ ಭರತ್, ಆರ್‌ಐಗಳಾದ ಮಹೇಶ್ ಆಚಾರಿ, ಉಪೇಂದ್ರ, ವಿಶ್ವನಾಥ್, ಎಂಜಿನಿಯರ್ ಕೃಷ್ಣಕುಮಾರ್, ಪುರಸಭೆಯ ಶಿವಮೂರ್ತಿ, ಮಂಜಪ್ಪ ಉಪಸ್ಥಿತರಿದ್ದರು.

Highlights - ರೈತರ ಕುಂದು ಕೊರತೆ ಸಭೆಯಲ್ಲಿ ಅಸಮಾಧಾನ ನಿಯಮ ಉಲ್ಲಂಘಿಸಿ ಅ‍ಪಾಯಕಾರಿ ಸ್ಫೋಟಕ ಬಳಕೆ

Cut-off box - ಹೆಣ ಕಿತ್ತು ಸ್ಮಶಾನ ಒತ್ತುವರಿ ಪುರಸಭೆ ವ್ಯಾಪ್ತಿಯ ಪುಟ್ಟಪ್ಪನ ಗುಡಿ-ಗೋಕೆರೆ ರಸ್ತೆಯಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಸ್ಮಶಾನ ಭೂಮಿ ಸಮೀಕ್ಷೆ ನಡೆಸಿ ರಕ್ಷಣೆ ಮಾಡಬೇಕಿದೆ. ಈ ಜಾಗ ಪಹಣಿಯಲ್ಲಿ ಸಾರ್ವಜನಿಕ ಸ್ಮಶಾನ ಎಂದಿದೆ. ಏಕಾಏಕಿ ‘ಖರಾಬು’ ಎಂದು ಬದಲಾಯಿಸಲಾಗಿದೆ. ಈಗಾಗಲೇ ಅಲ್ಲಿದ್ದ ಹೆಣಗಳನ್ನು ಕಿತ್ತು ಏಳು ಎಕರೆ ಜಾಗವನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

Cut-off box - ಅನಧಿಕೃತ ಗಣಿಗಾರಿಕೆಗೂ ವಿದ್ಯುತ್‌ ಕೃಷಿ ಭೂಮಿಯಲ್ಲಿ ಅನ್ನದಾತರು ಆಹಾರ ಬೆಳೆ ಬೆಳೆಯಲು ವಿದ್ಯುತ್‌ ಸಂಪರ್ಕ ಕಲ್ಪಿಸಲು ವಿವಿಧ ದಾಖಲೆ ಕೇಳಿ ಟ್ರಾನ್ಸ್‌ಫಾರ್ಮರ್‌ಗಳಿಗೆ ಲಕ್ಷಾಂತರ ರೂಪಾಯಿ ಕಟ್ಟಿಸಿಕೊಳ್ಳುವ ಬೆಸ್ಕಾಂನ ಅಧಿಕಾರಿಗಳು ತಾಲ್ಲೂಕಿನಾದ್ಯಂತ ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿರುವ ಗ್ರಾನೈಟ್‌ ಕ್ರಷರ್‌ಗಳಿಗೆ 24 ಗಂಟೆಯೂ ವಿದ್ಯುತ್‌ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ರೈತರು ಆರೋಪಿಸಿದರು. ವಿದ್ಯುತ್‌ ಸಂಪರ್ಕ ಕಲ್ಪಿಸುವ ವೇಳೆ ದಾಖಲೆ ಪರಿಶೀಲಿಸದೆ ಕಾನೂನು ಬಾಹಿರ ಕೃತ್ಯಕ್ಕೆ ಸಹಕಾರ ನೀಡುತ್ತಿದೆ. ಗ್ರಾ.ಪಂನಲ್ಲಿಯೂ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಕಾನೂನುಗಳು ಕೇವಲ ಪುಸ್ತಕದಲ್ಲಿದೆ ಹೊರತು ಕಾರ್ಯಾಚರಣೆಯಾಗುತ್ತಿಲ್ಲ ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT