ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ | ಬೆಂಗಳೂರು ಗ್ರಾಮಾಂತರ: ಕೈಕೊಟ್ಟ ಮಳೆ, ತಪ್ಪದ ಗೋಳು..

Published 31 ಡಿಸೆಂಬರ್ 2023, 4:16 IST
Last Updated 31 ಡಿಸೆಂಬರ್ 2023, 4:16 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹಲವು ರಾಜಕೀಯ ಏರುಪೇರು, ಬಗೆಹರಿಯದೇ ಮುಂದಿನ ವರ್ಷಕ್ಕೂ ಮುಂದುರೆದ ಸಮಸ್ಯೆಗಳು, ಕೈಕೊಟ್ಟ ಮುಂಗಾರು, ತಾವು ಮಾಡದೇ ಇರುವ ತಪ್ಪಿಗೆ ಮೃತಪಟ್ಟ ಅಮಾಯಕ ಜೀವಗಳ ಕುಟುಂಬಗಳವರ ರೋಧನದೊಂದಿಗೆ 2023 ಮುಕ್ತಾಯವಾಗುತ್ತಿದೆ.

ರಾಜ್ಯ ವಿಧಾನಸಭೆಯ ಚನಾವಣೆಗೆ ಸಾಕ್ಷಿಯಾದ 2023. ರಾಜ್ಯ ಅಲ್ಲದೆ ಕ್ಷೇತ್ರದ ಮಟ್ಟಿಗೂ ಬದಲಾವಣೆಗಳಿಗೆ ಕಾರಣವಾಗಿದೆ. 10 ವರ್ಷಗಳ ಕಾಲ ಶಾಸಕರಾಗಿದ್ದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಅವರು ಸುಮಾರು 30 ಸಾವಿರ ಮತಗಳ ಹಿನ್ನಡೆಯೊಂದಿಗೆ ಸೋಲು ಕಂಡರು. ಇದೇ ಪ್ರಥಮ ಬಾರಿಗೆ ಅತಿ ಹೆಚ್ಚಿನ ಮತಗಳ ಅಂತರದೊಂದಿಗೆ ಬಿಜೆಪಿ ಅಭ್ಯರ್ಥಿ ಧೀರಜ್‌ ಮುನಿರಾಜು ಶಾಸಕರಾಗಿ ಆಯ್ಕೆಯಾದರು. ಹಾಗೆಯೇ ಯುವಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ನೇಮಕಗೊಂಡರು.

ಕ್ಷೇತ್ರದಲ್ಲಿ ನಡೆದ ಈ ಹಿಂದಿನ ಚುನಾವಣೆಗಳಲ್ಲಿ ಬೆರಳೆಣಿಕೆಯಷ್ಟು ಎರಡನೇ ಹಂತದ ಮುಖಂಡರು, ಕಾರ್ಯಕರ್ತರು ಮಾತ್ರ ಪಕ್ಷಾಂತರ ಮಾಡುತ್ತಿದ್ದರು. ಆದರೆ ಈ ಬಾರಿ ಪಕ್ಷದ ಮುಂಚೂಣಿ ಮುಖಂಡರು, ಅಧ್ಯಕ್ಷರು, ನಗರಸಭೆ ಸದಸ್ಯರ ದೊಡ್ಡ ಗುಂಪುಗಳೆ ಪಕ್ಷಾಂತರ ಮಾಡುವ ಮೂಲಕ ಯಾರು ಯಾವ ಪಕ್ಷದಲ್ಲಿದ್ದಾರೆ ಎನ್ನುವುದೇ ಗೊಂದಲ ಮೂಡುವಷ್ಟರ ಮಟ್ಟಗೆ ರಾಜಕೀಯ ಏರುಪೇರುಗಳು ಉಂಟಾದವು. ಜೆಡಿಎಸ್‌, ಕಾಂಗ್ರೆಸ್‌ ಎರಡೂ ಪಕ್ಷದ ಅಭ್ಯರ್ಥಿಗಳು ತಮ್ಮ ಹಿಂಬಾಲಕರು ನೀಡಿದ ಒಳ ಏಟಿಗೆ ತತ್ತರಿಸುವ ಮೂಲಕ ಹೀನಾಯ ಸೋಲು ಕಾಣುವಂತಾಯಿತು.

ಮನ ಕಲುಕಿದ ದುರಂತಗಳು: ಕುಂಟೆಯಲ್ಲಿ ಕೈ ಕಾಲು ತೊಳೆಯಲು ಹೋದ ತಾಯಿ–ಮಗು ಸಾವು, ರಾಸು ಮೈ ತೋಳೆಯಲು ಹೋದ ರೈತನ ಸಾವು, ಮಗಳನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಟ್ರಕ್‌ಗೆ ಸಿಲುಕಿ ನಜ್ಜುಗುಜ್ಜಾದ ತಂದೆ–ಮಗಳು, ಕ್ರಿಕೆಟ್‌ ಆಟದ ವೇಳೆ ಯಾರೋ ಮಾಡಿಕೊಂಡ ತಪ್ಪಿಗೆ ಯಾವುದನ್ನು ತಿಳಿಯದ ಅಮಾಯಕ ವಿದ್ಯಾರ್ಥಿಗಳಿಬ್ಬರು ಚಾಕು ಇರಿತಕ್ಕೆ ಒಳಗಾಗಿ ತಾಯಿ ಕಣ್ಣೇದುರಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದ್ದು, ಪೋಟೋ ಶೂಟ್‌ ವಿಚಾರವಾಗಿ ಚಾಕು ಇರಿತಕ್ಕೆ ವಿದ್ಯಾರ್ಥಿ ಬಲಿಯಾದ. ಅಕ್ರಮ ಗೋ ಸಾಗಾಣಿಕೆ ಸಂದರ್ಭದಲ್ಲಿ ಮನಸೋ ಇಚ್ಚೆ ಥಳಿತಕ್ಕೆ ಒಳಗಾದ ಪ್ರಕರಣ ಈ ಎಲ್ಲವು ಕಲ್ಲು ಹೃದಯಗಳು ಸಹ ಮರುಗುವಂತೆ ಮಾಡಿದ ಕಹಿ ಘಟನೆಗಳು.

ಹೋರಾಟಕ್ಕೆ ಸಿಗದ ಜಯ: ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಳಚರಂಡಿ ನೀರು ಹಾಗೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳ ತ್ಯಾಜ್ಯ ನೀರು ಚಿಕ್ಕತುಮಕೂರು, ದೊಡ್ಡತುಮಕೂರು ಕೆರೆಗಳಿಗೆ ಹರಿದು ಅಂತರ್ಜಲ ಕಲುಷಿತವಾಗುತ್ತಿದೆ. ಸಮಸ್ಯೆಯ ಪರಿಹಾರಕ್ಕೆ ಈ ಭಾಗದ ಗ್ರಾಮಗಳ
ಜನರು ತಾಲ್ಲೂಕು ಕಚೇರಿ ಮುಂದೆ ಅಮರಣಾಂತ ಉಪವಾಸ ನಡೆಸಿದರು. ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದರು. ಆದರೆ ಜನರನ್ನು ತಾತ್ಕಾಲಿಕವಾಗಿ ಮನವೊಲಿಸುವ ಕೆಲಸವಾಯಿತೆ ವಿನಹ ಇದುವರೆಗೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದೆ ಯಥಾಸ್ಥಿತಿ ಮುಂದಿನ ವರ್ಷಕ್ಕೂ ಮುಂದುವರೆದಿದೆ.

ತಪ್ಪದ ಕುರಿ ಕಳ್ಳರ ಕಾಟ: ಬಡವರು, ರೈತರು ತಮ್ಮ ಕಷ್ಟ ತೀರಿಸಿಕೊಳ್ಳಲು ಬ್ಯಾಂಕಿನಲ್ಲಿ ಅಡವಿಟ್ಟಿದ್ದ ಸುಮಾರು 12 ಕೆ.ಜಿ ಚಿನ್ನ ಕಳವು, ಬಿಸಿಲು, ಗಾಳಿ, ಮಳೆ ಎನ್ನದೆ ಇಡೀ ದಿನ ತಿರುಗಾಡಿ ಮೇಯಿಸಿಕೊಂಡು ದೊಡ್ಡಿಯಲ್ಲಿ ಕೂಡಿದ್ದ ಕುರಿ, ಮೇಕೆ, ಹಸುಗಳ ಕಳವು ನಿರಾತಂಕವಾಗಿ ನಡೆಯಿತು.

ಕುರಿ ಕಳ್ಳರ ಹಾವಳಿಗೆ ಬೆಚ್ಚಿಬಿದ್ದ ರೈತರು ತಮ್ಮ ಸಾಕು ಪ್ರಾಣಿಗಳನ್ನು ಕಳ್ಳರಿಂದ ರಕ್ಷಿಸುವಂತೆ ಮೊರೆಯಿಟ್ಟು ತಾಲ್ಲೂಕು ಕಚೇರಿ ಮುಂದೆ ಕುರಿ, ಮೇಕೆಗಳೊಂದಿಗೆ ಪ್ರತಿಭಟನೆ ನಡೆಸಿದ್ದರಿಂದ ಕಳವು ಪ್ರಕರಣಗಳು ಕಡಿಮೆಯಾದವು. ಆದರೆ ಕಳ್ಳರು ಮಾತ್ರ ಪತ್ತೆಯಾಗಿಲ್ಲ, ಕಳುವಾಗಿದ್ದ ಕುರಿ, ಮೇಕೆಗಳು ಮತ್ತೆ ರೈತರ ದೊಡ್ಡಿ ಸೇರಲಿಲ್ಲ, ಅಡವಿಟ್ಟ ಚಿನ್ನವು ಬಡವರ ಕೈ ಸೇರಿಲ್ಲ.

ಮೂಡಿದ ನಿರಾಶೆ: ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರದ ಅವಧಿ ಮುಕ್ತಾಯವಾಗಿ ವರ್ಷಗಳು ಕಳೆದರು ಸಹ ಚುನಾವಣೆಗಳು ನಡೆದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ನಂತರ ಪಕ್ಷ ಸಂಘಟನೆಗಾಗಿ ದುಡಿದಿದ್ದ ಮುಖಂಡರು, ಕಾರ್ಯಕರ್ತರು ನಿಗಮ ಮಂಡಳಿ, ಸ್ಥಳೀಯ ಸಂಸ್ಥೆಗಳಲ್ಲಿ ನಾಮ ನಿರ್ದೇಶಿತ ಹುದ್ದೆಗಳನ್ನು ಪಡೆಯಲು ಕಾದುಕುಳಿತೇ ಇದ್ದಾರೆ.ಆದರೆ ಯಾರೊಬ್ಬರಿಗೂ ಅಧಿಕಾರ ದೊರೆಯದೆ ನಿರಾಶೆಮೂಡಿಸಿದೆ. ಶಾಶ್ವತ ಅಭಿವೃದ್ಧಿ ಕಾಮಗಾರಿಗಳ ದೃಷ್ಠಿಯಿಂದ ತಾಲ್ಲೂಕಿಗೆ 2023 ಅಷ್ಟೇನು ಆಶಾದಾಯಕವಾಗಿರಲಿಲ್ಲ.

ಚಿರತೆಗಳ ಹಾವಳಿ ತಾಲ್ಲೂಕು ಕೇಂದ್ರದಿಂದ ದೂರದ ಬೆಟ್ಟದ ತಪ್ಪಲಿನ ಗ್ರಾಮಗಳಿಗೆ ಸೀಮಿತವಾಗಿತ್ತು. ಆದರೆ ಈಗ ನಗರದ ಅಂಚಿನ ಹಾಗೂ ಕೈಗಾರಿಕಾ ಪ್ರದೇಶದಲ್ಲೂ ಚಿರತೆಗಳ ಒಡಾಟ ಪ್ರಾರಂಭವಾಗಿದೆ.

ಆನೇಕಲ್‌: ಮನಕಲುಕಿದ ಪಟಾಕಿ ದುರಂತ

ಪಟಾಕಿ ಸ್ಫೋಟ ದುರಂತ, ಬನ್ನೇರುಘಟ್ಟದಲ್ಲಿ ಪ್ರಾಣಿಗಳ ಸರಣಿ ‌ ಸಾವು, ಹೆಚ್ಚಿದ ಅಪರಾಧ ಪ್ರಕರಣಗಳು.. ಇದು 2023ನೇ ಸಾಲಿನಲ್ಲಿ ಆನೇಕಲ್‌ ತಾಲ್ಲೂಕನ್ನು ಕಾಡಿದ ಘಟನೆಗಳಿವು.

ಆನೇಕಲ್‌ ತಾಲ್ಲೂಕಿನ ಗಡಿ ಭಾಗ ಅತ್ತಿಬೆಲೆಯಲ್ಲಿ ಅಕ್ಟೋಬರ್‌ 7ರಂದು ಸಂಭವಿಸಿದ ಪಟಾಕಿ ದುರಂತದಿಂದ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಈ ಧಾರುಣ ಘಟನೆಯಲ್ಲಿ ಮೃತಪಟ್ಟವರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದ 16 ಮಂದಿ ತಮಿಳುನಾಡಿನವರು.  ಇವೆರಲ್ಲರೂ ಕೂಲಿ ಮಾಡಿ ಬದುಕುತ್ತಿದ್ದವರು. ಕೆಲವರು ಓದಿಗಾಗಿ ದುಡಿಯಲು ಬಂದಿದ್ದರು. ಇವರ ಮರಣ ಎರಡು ರಾಜ್ಯದ ಜನತೆಯ ಮನ ಕಲಕಿತು. ಮೃತ ಕುಟುಂಬಗಳಿಗೆ ರಾಜ್ಯ ಸರ್ಕಾರ ₹5ಲಕ್ಷ ಪರಿಹಾರ ನೀಡಿತು.

ಹೆಚ್ಚಾದ ಅಪರಾಧಗಳು: ಆನೇಕಲ್‌ ತಾಲ್ಲೂಕಿನಲ್ಲಿ ಈ ವರ್ಷ ಅಪರಾಧ ಚಟುವಟಿಕೆಗಳು  ಹೆಚ್ಚಿದವು. ಮನೆ ಕಳ್ಳತನ, ಗಮನ ಬೇರೆಡೆ ಸೆಳೆದು ಮಹಿಳೆಯರಿಂದ ಸರ ಕಳವು, ಗಾಡಿಗಳ ಕಳವು ಹೆಚ್ಚಾಗಿದ್ದು ಪೊಲೀಸರು ಪ್ರತಿನಿತ್ಯ ಕಳವುಗಳ ಬಗ್ಗೆ ಗಮನ ವಹಿಸಿದಂತಾಗಿತ್ತು. ತಾಲ್ಲೂಕಿನಲ್ಲಿ ಈ ವರ್ಷ ಗಾಂಜಾ ಮಾರಾಟವು ಹೆಚ್ಚಾಗಿತ್ತು ಜೊತೆಗೆ ಪೊಲೀಸರು ಗಾಂಜಾ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾದರು. ಆನೇಕಲ್‌ ತಾಲ್ಲೂಕಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಚಂದಾಪುರ, ಹೆಬ್ಬಗೋಡಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಸಲಹೆ ನೀಡಿದ್ದರು.

ಅಗಲಿದ ವೀರಯೋಧನಿಗೆ ನಮನ: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ಕಾದಾಟ ನಡೆಸಿ ನವೆಂಬರ್‌ 23ರಂದು ಹುತಾತ್ಮರಾದ ಆನೇಕಲ್‌ ತಾಲ್ಲೂಕಿನ ಜಿಗಣಿಯ ನಂದನವನ ಬಡಾವಣೆಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು. ನಿವಾಸಿ ಕ್ಯಾಪ್ಟನ್‌ ಪ್ರಾಂಜಲ್‌ ಅವರ ಅಂತಿಮ ದರ್ಶನಕ್ಕೆ ಜಿಗಣಿಯ ನಿವಾಸದಲ್ಲಿ ಸಾವಿರಾರು ಮಂದಿ ಜಮಾವಣೆಯಾಗಿ ವೀರಯೋಧನಿಗೆ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳು, ಕಾರ್ಮಿಕರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರಾಂಜಲ್‌ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಬಾರದ ಮಳೆ ರೈತರ ಪರದಾಟ: ಆನೇಕಲ್‌ ತಾಲ್ಲೂಕಿನಲ್ಲಿ 2023ರಲ್ಲಿ ಉತ್ತಮ ಮಳೆಯಾಗದೇ ಇದ್ದುದ್ದರಿಂದ ರೈತರು ತೀವ್ರ ಸಮಸ್ಯೆ ಎದುರಿಸುವಂತಾಯಿತು. ಪ್ರತಿ ವರ್ಷ ಈ ಭಾಗದಲ್ಲಿ ಹೂವು, ತರಕಾರಿ, ಕಾಳುಗಳ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತಿತ್ತು. ಆದರೆ ಈ ವರ್ಷ ಉತ್ತಮ ಮಳೆಯಾಗದಿದ್ದರಿಂದ ಅಂತರ್ಜಲವನ್ನು ಆಶ್ರಯಿಸಿ ಕೃಷಿ ಮಾಡುವಂತಾಯಿತು. ಉತ್ತಮ ಮಳೆಯಾಗದ ಕಾರಣ ಸರ್ಕಾರ ಬರಗಾಲ ಪ್ರದೇಶವೆಂದು ಘೋಷಣೆ ಮಾಡಿತ್ತು.

ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯಲ್ಲಿ ಬೆಂಕಿ ಅವಗಢದಿಂದ ಲಾರಿ ಟಾಟಾ ಏಸ್‌ ವಾಹನ ಉರಿಯುತ್ತಿರುವುದು

ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯಲ್ಲಿ ಬೆಂಕಿ ಅವಗಢದಿಂದ ಲಾರಿ ಟಾಟಾ ಏಸ್‌ ವಾಹನ ಉರಿಯುತ್ತಿರುವುದು

ನೇಮಕವಾಗದ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷರು : ಆನೇಕಲ್‌ ತಾಲ್ಲೂಕಿನ ಚಂದಾಪುರ, ಜಿಗಣಿ ಪುರಸಭೆ ಮತ್ತು ಹೆಬ್ಬಗೋಡಿ ನಗರಸಭೆಗೆ ಚುನಾವಣೆ ನಡೆದು ಎರಡು ವರ್ಷಗಳು ಕಳೆದಿದ್ದರೂ ಅಧ್ಯಕ್ಷರ ನೇಮಕವಾಗದೇ ಸದಸ್ಯರು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗದ ಸ್ಥಿತಿ ನಿರ್ಮಾಣವಾಗಿದೆ.

ವನ್ಯ ಪ್ರಾಣಿಗಳ ಸರಣಿ ಸಾವು: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಮತ್ತು ಜಿಂಕೆಗಳ ಸರಣಿ ಸಾವು ಪ್ರಾಣಿ ಪ್ರಿಯರಲ್ಲಿ ಆತಂಕ ತಂದಿತ್ತು. ಬೆಂಗಳೂರಿನ ಸೆಂಟ್‌ ಜಾನ್ಸ್ ಆಸ್ಪತ್ರೆಯ ಉದ್ಯಾನದಿಂದ ತರಲಾಗಿದ್ದ 16 ಜಿಂಕೆಗಳು ಮೃತಪಟ್ಟವು. ಜೈವಿಕ ಉದ್ಯಾನದಲ್ಲಿ ವಿವಿಧೆಡೆಯಿಂದ ಸಂರಕ್ಷಿಸಿ ತರಲಾಗಿದ್ದ ಏಳು ಚಿರತೆ ಮರಿಗಳು ಸೋಂಕಿನಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ಮೃತಪಟ್ಟಿದ್ದವು.

ಶಿವಣ್ಣಗೆ ಹ್ಯಾಟ್ರಿಕ್‌ ಗೆಲುವು: ಆನೇಕಲ್‌ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಬಿ.ಶಿವಣ್ಣ ಮೂರನೇ ಬಾರಿಗೆ 31,325 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಗಟ್ಟಿ ಮಾಡಿಕೊಂಡು ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. 2024ರಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಪದೇ ಪದೇ ತಹಶೀಲ್ದಾರ್‌ ಬದಲಾವಣೆ: ಆನೇಕಲ್‌ನಲ್ಲಿ 2023ನೇ ಸಾಲಿನಲ್ಲಿ ಪದೇ ಪದೇ ತಹಶೀಲ್ದಾರ್‌ರ ಬದಲಾವಣೆಯಾಗಿದ್ದು ಒಂದೇ ವರ್ಷದಲ್ಲಿ ನಾಲ್ಕು ಮಂದಿ ತಹಶೀಲ್ದಾರ್‌ ಅನ್ನು ತಾಲ್ಲೂಕು ಕಾಣಿವಂತಾಯಿತು. ಶಿವಪ್ಪ.ಎಚ್.ಲಮಾಣಿ, ರಾಜೀವ್‌, ಮಂಜುನಾಥ್, ಶಶಿಧರ್‌ ಮಾಡ್ಯಳ್‌, ರಾಜಶೇಖರ್‌ ಅವರು ತಹಶೀಲ್ದಾರ್‌ ಆಗಿ ಅಧಿಕಾರ ನಡೆಸಿದರು.

ರಾಷ್ಟ್ರನಾಯಕರ ರೋಡ್‌ ಷೋ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್‌ ತಾಲ್ಲೂಕಿನ ಚಂದಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿಷ್‌ ಷಾ ಅವರು ರೋಡ್‌ ಷೋ ನಡೆಸಿ ಮತಯಾಚಿಸಿದರು. ಆನೇಕಲ್‌ ಪಟ್ಟಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರೋಡ್‌ ಷೋ ನಡೆಸಿದರು.

ಕಾವೇರಿದ ಕಾವೇರಿ ವಿವಾದ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರ್ನಾಟಕದ ಗಡಿ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಕನ್ನಡಪರ ಹೋರಾಟಗಾರರು ನಿರಂತ ಪ್ರತಿಭಟನೆ ನಡೆಸಿ ರಾಜ್ಯದ ಗಮನ ಸೆಳದರು. ಪ್ರತಿನಿತ್ಯ ಪ್ರತಿಭಟನೆ ನಡೆಯುತ್ತಿತು.

ದೇವನಹಳ್ಳಿ : ಬರೀ ರಾಜಕೀಯ, ಅಭಿವೃದ್ಧಿ ನಗಣ್ಯ

ಸಂದೀಪ್

ಈ‌ ವರ್ಷ ವಿಧಾನಸಭೆ ಚುನಾವಣೆಗೆ ಸಾಕ್ಷಿಯಾದ್ದರಿಂದ ತಾಲ್ಲೂಕಿನಲ್ಲಿ ಹಲವು ರಾಜಕೀಯ ಏಳು–ಬೀಳುಗಳು ನಡೆದವು. ಅರ್ಧ ವರ್ಷ ಬರೀ ರಾಜಕೀಯವೇ ನಡೆಯಿತು. ಇದರ ಹೊರತಾಗಿ ತಾಲ್ಲೂಕಿಗೆ ಬೇಕಾದ ಅಭಿವೃದ್ಧಿ ಕಾರ್ಯಗಳು ಅಷ್ಟೇನು ಜರುಗಲಿಲ್ಲ.

ಮೀಸಲು ಕ್ಷೇತ್ರವಾಗಿದ್ದ ದೇವನಹಳ್ಳಿಯಿಂದ ಸ್ಪರ್ಧಿಸಲು ಕಾಂಗ್ರೆಸ್‌ ಆಕಾಂಕ್ಷಿಗಳು ಕಸರತ್ತು ನಡೆಸಿದರು. ಆದರೆ, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪರಿಗೆ ಅವರಿಗೆ ಟಿಕೆಟ್‌ ದೊರೆತ್ತಿದ್ದು, ಎಲ್ಲ ರಾಜಕೀಯ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿತ್ತು.

ರಾಜಕೀಯ ಜೀವನದಲ್ಲಿ ಜೆಡಿಎಸ್‌ನಿಂದಲೇ ಶಾಸಕರಾದ ಪಿಳ್ಳಮುನಿಶಾಮಪ್ಪ ಜೆಡಿಎಸ್‌ ತೊರೆದು, ಬಿಜೆಪಿ ಸೇರ್ಪಡೆಯಾಗಿ, ಆ ಪಕ್ಷೆದಿಂದ ಸ್ಪರ್ಧಿಸಿದರು. ಜೆಡಿಎಸ್‌ ನಿಸರ್ಗ ನಾರಾಯಣಸ್ವಾಮಿ ಕಣ‌ಕಿಳಿದರು. ಇವರಿಬ್ಬರ ರಾಜಕೀಯ ಜುಗಲ್‌ ಬಂದಿಯಿಂದ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಕೆ.ಎಚ್‌.ಮುನಿಯಪ್ಪ ಚುನಾವಣೆಯಲ್ಲಿ ಜಯ ಸಾಧಿಸಿದರು. ಕೋಲಾರದಿಂದ ಬಂದು ಶಾಸಕರಾದ ಕೆ.ಎಚ್‌.ಮುನಿಯಪ್ಪರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನಮಾನ ದೊರೆತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚನೆಯಾದ ಮೊದಲಿಗೆ ಸಚಿವರಾದ ಹೆಗ್ಗಳಿಗೆ ಅವರು ಪಾತ್ರರಾದರು.

ಸದಾ ಹಸನ್ಮುಖಿಯಾಗಿದ್ದ ಮಾಜಿ ಶಾಸಕ ವೆಂಕಟಸ್ವಾಮಿ ಅವರ ಅಕಾಲಿಕ ನಿಧನ ಕ್ಷೇತ್ರದ ಜನತೆಯಲ್ಲಿ ಬೇಸರ ತರಿಸಿತು.

ಹೊಸ ಸರ್ಕಾರ ಬದಲಾದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿಯ ಸಿಇಒ ಸೇರಿದಂತೆ ಸಾಕಷ್ಟು ಅಧಿಕಾರಿಗಳು ವರ್ಗಾವಣೆ ಮಾಡಿ, ಆಡಳಿತ ವರ್ಗಕ್ಕೆ ಮೇಜರ್‌ ಸರ್ಜರಿ ಮಾಡಲಾಯಿತು.

ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ (ಎಸ್‌ಟಿಆರ್‌ಆರ್‌)ನ ಮೊದಲ ಹಂತದ ಹೆದ್ದಾರಿ ದೊಡ್ಡಬಳ್ಳಾಪುರ- ದೇವನಹಳ್ಳಿ - ಹೊಸಕೋಟೆ ಮಾರ್ಗ ಸಂಚಾರಕ್ಕೆ ಮುಕ್ತವಾಗಿ, ನಲ್ಲೂರು ಬಳಿ ಟೋಲ್‌ ಪ್ಲಾಜಾ ತಲೆ ಎತ್ತಿತ್ತು.

ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಿಎಸ್‌ಆರ್‌ ನಿಧಿ: ಖಾಸಗಿ ಕಂಪನಿಗಳ ಕಾರ್ಪೋರೆಟ್‌‌‌ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ನಿಧಿ ಮೂಲಕ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಹೊಸ ಶಾಲೆ ನಿರ್ಮಿಸುವ ಯೋಜನೆಯನ್ನು ಜಿಲ್ಲೆಯಲ್ಲಿ ಆರಂಭಿಸಲಾಯಿತು.  ವಿಶ್ವನಾಥಪುರ ಶಾಲೆ ಆವರಣದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ನೂತನ ಯೋಜನೆಗೆ ಚಾಲನೆ ಕೊಟ್ಟರು.

ಇನ್ನೂ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌– 2 ಕಾರ್ಯಾಚರಣೆ ಪ್ರಾರಂಭಿಸಿದ್ದು, ಎಲ್ಲ ವಿದೇಶಿ ಮಾರ್ಗದ ವಿಮಾನಗಳು ಹೊಸ ಟರ್ಮಿನಲ್‌ನಿಂದ ಹಾರಾಟ ಪ್ರಾರಂಭಿಸಿದವು. ಟರ್ಮಿನಲ್‌–2 ಅನ್ನು ವಿಶ್ವದಲ್ಲಿಯೇ ಅತ್ಯಂತ ಸುಂದರ ಟರ್ಮಿನಲ್‌ ಎಂದು ಯುನೆಸ್ಕೋ ಗುರುಸಿತು. 

ವನ್ಯಜೀವಿಗಳ ಕಳ್ಳಸಾಗಣೆ: ಅದೇ ರೀತಿಯಲ್ಲಿ ಸಾಕಷ್ಟು ಮಾದಕ ವಸ್ತು, ಚಿನ್ನ ಅಕ್ರಮ ಸಾಗಣೆ ಸೇರಿದಂತೆ ನಿಷೇಧಿತ ವಸ್ತು ಪತ್ತೆ ಹಚ್ಚುವಲ್ಲಿ ಇಲ್ಲಿನ ಕಸ್ಟಮ್ಸ್‌, ವೈಮಾನಿಕ ಗುಪ್ತಚರ ನಿರ್ದೇಶನಾಲಯ ಸಿಬ್ಬಂದಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಏರ್‌ಪೋರ್ಟ್‌ ಪೊಲೀಸರು ಯಶಸ್ವಿಯಾಗಿದ್ದರು.

ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಕಾಂಗರೂ, ಕಾಪು ಚಿನ್‌ ಕೋತಿ, ಊಸರವಳ್ಳಿ, ವಿವಿಧ ಜಾತಿಯ ಹೆಬ್ಬಾವೂ ಸೇರಿದಂತೆ 200ಕ್ಕೂ ಹೆಚ್ಚು ಕಾಡು ಪ್ರಾಣಿಗಳ ಕಳ್ಳ ಸಾಗಣೆ ಪ್ರಕರಣ ದೇಶದಲ್ಲಿಯೇ ಸಂಚಲನ ಮೂಡಿಸಿತ್ತು.

ಜುಲೈನಲ್ಲಿ ಏರ್‌ಏಷ್ಯಾ ವಿಮಾನವು ಭದ್ರತಾಲೋಪದಿಂದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಬಿಟ್ಟು ಹಾರಿದ್ದು, ಬಳಿಕ ಕ್ಷಮೆಯಾಚಿಸಿದ ಸುದ್ದಿ ಸದು ಮಾಡಿತು.

ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವೂ ಸೆಪ್ಟೆಂಬರ್‌ನಲ್ಲಿ ಕರೆ ನೀಡಿದ್ದ ಬಂದ್‌ನಿಂದಾಗಿ ವಿಮಾನದ ಟಿಕೆಟ್‌ಕ್ಕಿಂತ ಟ್ಯಾಕ್ಸಿ ಬೆಲೆ ದುಪ್ಪಟ್ಟಾಗಿದ್ದು, ಪ್ರಯಾಣಿಕರ ಪರದಾಟ ಮುಷ್ಕರದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಅನಿಲ್‌ ಕುಂಬ್ಳೆ ಪ್ರಯಾಣಿಸಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು.

ಎರಡು ವರ್ಷದ ಹೋರಾಟಕ್ಕೆ ಸಿಗದ ಬೆಂಬಲ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ ಕೈಗಾರಿಕಾ ಉದ್ದೇಶಕ್ಕೆ 1,777 ಜಮೀನನ್ನು ಕೆಐಎಡಿಬಿ ಭೂ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ರೈತರು ಮತ್ತು ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ 635 ದಿನ ಪೂರೈಸಿ, ಮುಂದುವರೆದಿದ್ದರೂ ಸರ್ಕಾರದಿಂದ ಯಾವ ಸ್ಪಂದನೆಯೂ ದೊರೆತಿಲ್ಲ.

ಚುನಾ‌ವಣಾ ಪೂರ್ವದಲ್ಲಿ ಕಾಂಗ್ರೆಸ್ಸಿಗರು ಧರಣಿನಿರತರನ್ನು ಭೇಟಿಯಾಗಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭೂ ಸ್ವಾಧೀನ ಕೈ ಬಿಡುವುದಾಗಿ ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆಯುತ್ತಿದ್ದರೂ, ಸೂಕ್ತ ಸ್ಪಂದನೆ ದೊರೆಯದೆ ಇರುವುದು ರೈತರು ಮತ್ತು ಹೋರಾಟಗಾರರಲ್ಲಿ ಬೇಸರ ಮೂಡಿಸಿದೆ.

ಹೊಸಕೋಟೆ: ಸಿಹಿ–ಕಹಿಯೊಂದಿಗೆ ವಿದಾಯ

ವೆಂಕಟೇಶ್ ಡಿ ಎನ್‌

ಹೊಸಕೋಟೆ‌ ತಾಲ್ಲೂಕು ಕಹಿ ಅನುಭವಗಳು, ಕೆಲವೇ ಸಿಹಿ ಘಟನೆಗಳೊಂದಿಗೆ 2023ಕ್ಕೆ ವಿದಾಯ ಹೇಳುತ್ತಿದೆ.

ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ತಾಲ್ಲೂಕಿನಲ್ಲಿ ಬರ ಆವರಿತು. ಇದರಿಂದ ಜನರು ಮಾತ್ರವಲ್ಲ ಜಾನು‌ವಾರುಗಳು ಮೇವು, ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದವು.

2023ರಲ್ಲಿ ಉಂಟಾದ ಕಹಿ ನೆನಪು‌ ಮರೆತು 2024 ವರ್ಷ ಸ್ವಾಗತಿಸಲು ಜನತೆ ಸಜ್ಜಾಗುತ್ತಿದ್ದಾರೆ. ನೂತನ ವರ್ಷಕ್ಕೆ ಹೋಗುವ ಮುನ್ನ ತಾಲ್ಲೂಕಿನ‌ ನಡೆದ ಘಟನೆಗಳ ಹಿನ್ನೋಟ ಇಲ್ಲಿದೆ.

ಹೊಸಕೋಟೆ ನಗರದಲ್ಲಿ ನಡೆದ ಪ್ರಸಾದ ಪ್ರಕರಣದಲ್ಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು.

ಹೊಸಕೋಟೆ ನಗರದಲ್ಲಿ ನಡೆದ ಪ್ರಸಾದ ಪ್ರಕರಣದಲ್ಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು.

ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾಗಿದ್ದ ಶರತ್ ಬಚ್ಚೇಗೌಡ  2023ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎಂ.ಟಿ.ಬಿ. ನಾಗರಾಜ್‌ ಅವರ ವಿರುದ್ಧ ಜಯ ಗಳಿಸಿದರು. ಇನ್ನೂ ಇದೇ ವರ್ಷ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಅವರು ತಮ್ಮ ರಾಜಕೀಯ ನಿವೃತ್ತಿ ಘೋಷಿಸಿದರು.

ಅಪಘಾತ ಒಂದೇ ಕುಟುಂಬದ ಮೂವರು ಸಾವು: ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿ ಕೇಂದ್ರದ ಬಳಿಯಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಜುಲೈ ತಿಂಗಳಲ್ಲಿ ನಡೆದಿತ್ತು. ಈ ಘಟನೆಯಲ್ಲಿ ಜಡಿಗೇನಹಳ್ಳಿ ಸಮೀಮದ ಗೊಣಕನಹಳ್ಳಿ ಗ್ರಾಮದ 4 ವರ್ಷದ ಮಗು ಸೇರಿ ಮೂವರು ಮೃತಪಟ್ಟು ಕುಟುಂಬಸ್ಥರ ರೋಧನ ಮುಲು ಮುಟ್ಟಿತ್ತು.

ಆಸ್ತಿಗಾಗಿ ಅತ್ತೆ ಮಾವಂದಿರ ಕೊಲೆ: ಮಗನಿಗೆ ಆಸ್ತಿ ಹಂಚಿಕೆಯಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೊಸೆ ಮತ್ತು ಮೊಮ್ಮಕ್ಕಳು ಸೇರಿ ವೃದ್ಧ ದಂಪತಿಯನ್ನು ಕೊಲೆ ಮಾಡಿದ ಪ್ರಸಂಗ ಡಿಸೆಂಬರ್ ತಿಂಗಳಿನಲ್ಲಿ ನಡೆದಿತ್ತು.

ಅಂತಿಮ ಹಂತಕ್ಕೆ ನೀರಾವರಿ ಯೋಜನೆ:ತಾಲ್ಲೂಕಿನಲ್ಲಿ ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯಿಂದ ಒಂದಷ್ಟು ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಅಂತಿಮ ಹಂತದಲ್ಲಿದ್ದು, ತಾಲೂಕಿನ 3 ಹೋಬಳಿಗಳ 38 ಕೆರೆಗಳಿಗೆ ನೀರು ಶೀಘ್ರವೇ ಹರಿಯಲಿದ್ದು, ತಾಲ್ಲೂಕಿನ ಜನತೆಗೆ ಒಂದಷ್ಟು ಸಮಾಧಾನದ ಸಂಗತಿಯಾದರೆ, ನಗರಕ್ಕೆ ಕಾವೇರಿ ನೀರಿನ ಕನಸು ನನಸಾಗಿಯೇ ಉಳಿದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಸಾದ ತಂದ ತಲ್ಲಣ: ಡಿಸೆಂಬರ್ ತಿಂಗಳಲ್ಲಿ ನಡೆದ ಏಕಾದಶಿ ಮತ್ತು ಹನುಮ ಜಯಂತಿ ಪ್ರಯುಕ್ತ ನಗರದ ವಿವಿಧ ದೇಗುಲಗಳಲ್ಲಿ ವಿತರಿಸಿದ ಪ್ರಸಾದ ಸೇವಿಸಿ, ಒಬ್ಬರು ಮೃತಪಟ್ಟು, ನೂರಾರು ಮಂದಿ ಅಸ್ವಸ್ಥರಾದರು. ಈ ಘಟನೆ ನಗರದ ಜನತೆಯಲ್ಲಿ ತಲ್ಲಣ ಉಂಟು ಮಾಡಿತ್ತು. ಇದೊಂದು ದುರುದ್ದೇಶದ ಪುಕರಣ ಎಂಬುದಾಗಿ ಸೊಮೋಟೋ ಪ್ರಕರಣವೂ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT