ಸೋಮವಾರ, ನವೆಂಬರ್ 30, 2020
19 °C
ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ನವೆಂಬರ್‌ 26ರಂದು ಪ್ರತಿಭಟನೆ

‘ಕೋವಿಡ್‌ಗಿಂತಲೂ ಭೀಕರ ಕಾಯ್ದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಕಾರ್ಮಿಕ ಕಾಯ್ದೆ ಏಪ್ರಿಲ್‌ನಿಂದ ಅನುಷ್ಠಾನಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ನವೆಂಬರ್‌ 26 ರಂದು ವಿವಿಧ ಕಾರ್ಮಿಕ, ರೈತ ಸಂಘಟನೆಗಳು ಜಂಟಿಯಾಗಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು(ಸಿಐಟಿಯು) ಸೆಂಟರ್‌ ಆಫ್‌ ಇಂಡಿಯಾನ್‌ ಟ್ರೇಡ್‌ ಯೂನಿಯನ್ಸ್‌ ರಾಜ್ಯ ಕಾರ್ಯದರ್ಶಿ ಕೆ.ಎನ್‌.ಉಮೇಶ್‌ ಹೇಳಿದರು.

ಅವರು ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಕೋವಿಡ್‌ ಸಂಕಷ್ಟದ ಸಂದರ್ಭವನ್ನು ನೆಪವಾಗಿಟ್ಟುಕೊಂಡು ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರುತ್ತಿದೆ. ದೇಶದಲ್ಲಿ ಯೋಜನಾ ರಹಿತವಾಗಿ ಲಾಕ್‌ಡೌನ್‌ ಜಾರಿಗೊಳಿಸಿದ ಪರಿಣಾಮ ಲಕ್ಷಾಂತರ ಜನ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕು ವಂತಾಯಿತು. ಇಂದಿಗೂ ದೇಶದಲ್ಲಿ ಆರ್ಥಿಕ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಸರ್ಕಾರದ ತಪ್ಪು ನಿರ್ಧಾರದಿಂದಾಗಿಯೇ ಸಂಕಷ್ಟಕ್ಕೆ ಸಿಲುಕುರುವ ಆದಾಯ ತೆರಿಗೆ ಪಾವತಿಯಿಂದ ಹೊರಗಿರುವ ಎಲ್ಲರಿಗೂ ಪ್ರತಿ ತಿಂಗಳು ₹7ಸಾವಿರ ಪರಿಹಾರ ಅವರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಕಾಯ್ದೆಗೆ ರಾಷ್ಟ್ರಪತಿ ಈಗಾಗಲೇ ಅಂಕಿತ ಹಾಕಿದ್ದಾರೆ. ಕಾಯ್ದೆಯಲ್ಲಿನ ಕಾನೂನು ಏಪ್ರಿಲ್‌ನಿಂದ ಜಾರಿಗೆ ಬಂದರೆ 55ವರ್ಷ ಅಥವಾ 35ವರ್ಷ ಸೇವೆ ಸಲ್ಲಿಸಿರುವ ಎಲ್ಲರೂ ಬಲವಂತದ ನಿವೃತ್ತಿಗೆ ಒಳಗಾಗುವ ಅಪಾಯ ಇದೆ. ಇದು ಕೇವಲ ಕೈಗಾರಿಕೆಗಳಲ್ಲಿನ ಕಾರ್ಮಿಕರಿಗಷ್ಟೇ ಅಲ್ಲದೆ ಎಲ್ಲರಿಗೂ ಅನ್ವಯವಾಗಲಿದೆ. ಸಂವಿಧಾನ ಜಾರಿಗೆ ಬರುವ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ಕಾರ್ಮಿಕರ ಪರವಾಗಿ ಜಾರಿಗೆ ತಂದಿದ್ದ ಎಲ್ಲ ಕಾನೂನುಗಳು ಈಗ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರು ಸದಾ ಕಾಲ ಆತಂಕದಲ್ಲಿಯೇ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಲಿದೆ. ಕೋವಿಡ್‌ ಮಹಾಮಾರಿಗಿಂತಲೂ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರೈತ, ಕಾರ್ಮಿಕ ವಿರೋಧಿ ನೀತಿಗಳೇ ಹೆಚ್ಚು ಅಪಾಯಕಾರಿಯಾಗಿವೆ. ಈ ಕಾಯ್ದೆಗಳ ವಿರುದ್ಧ ಜಂಟಿ ಹೋರಾಟ ನಡೆಯದ ಹೊರತು ಕೃಷಿಕರಿಗೆ, ಕಾರ್ಮಿಕರಿಗೆ ಉಳಿಗಾಲ ಇಲ್ಲದಾಗಲಿದೆ ಎಂದರು.

ಸಭೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಪಿ.ಎ.ವೆಂಕಟೇಶ್‌, ವೀರಣ್ಣ, ಕಾರ್ಯದರ್ಶಿ ಚಂಬಣ್ಣ ಸಹ ಕಾರ್ಯದರ್ಶಿ, ನಳಿನಾಕ್ಷಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.