ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಿ, ನೀಲಗಿರಿ ಮರಗಳ ತೆರವಿಗೆ ಕ್ರಮ

ಕಂದಾಯ ಸಚಿವ ಅಶೋಕ್‌ರಿಂದ ಕೊನಘಟ್ಟ ಕೆರೆಗೆ ಬಾಗಿನ
Last Updated 19 ಅಕ್ಟೋಬರ್ 2019, 13:26 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೆರೆ ಅಂಗಳದಲ್ಲಿ ಬೆಳೆದಿರುವ ಜಾಲಿಮರಗಳ ತೆರವು ಹಾಗೂ ಅರಣ್ಯ ಇಲಾಖೆ ವತಿಯಿಂದ ಬೆಳೆಸಲಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ರೈತರೂ ನೀಲಗಿರಿ ಮರಗಳ ತೆರವಿಗೆ ಮುಂದಾಗಬೇಕು ಎಂದು ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಅಶೋಕ್‌ ಹೇಳಿದರು.

ತಾಲ್ಲೂಕಿನ ಕೊನಘಟ್ಟ ಕೆರೆಗೆ ಬಾಗಿನ ಸಮರ್ಪಣೆ ಮಾಡಿ ಮಾತನಾಡಿ, ‘ತಾಲ್ಲೂಕಿನಲ್ಲಿ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇದನ್ನು ಪುನಶ್ಚೇತನಗೊಳಿಸಲು ಈಗಿನಿಂದಲೇ ಎಚ್ಚರ ವಹಿಸಬೇಕಿದೆ. ಇಲ್ಲವಾದರೆ ಕುಡಿಯುವ ನೀರು ದೊರೆಯದಂತಹ ಸ್ಥಿತಿ ನಿರ್ಮಾಣವಾಗಲಿದೆ’ ಎಂದರು.

‘ನಗರ ಪ್ರದೇಶದಲ್ಲಿ ಎಲ್ಲ ಮನೆ, ವಾಣಿಜ್ಯ ಕಟ್ಟಡಗಳಿಗೂ ಮಳೆ ನೀರು ಸಂಗ್ರಹ ಪದ್ಧತಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇ ಬೇಕು. ಮಳೆ ನೀರು ಸಂಗ್ರಹ ಮಾಡಿಕೊಳ್ಳುವ ಕಟ್ಟಡಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಸಾಂಪ್ರದಾಯಿಕ ಕುಡಿಯುವ ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದರು.

‘ಕೆರೆಗೆ ನೀರು ಬಂದರೆ ಮೊದಲು ಖುಷಿ ಪಡುವವರು ಮಹಿಳೆಯರು. ಮನೆಗೆ ನೀರು ತರುವ ಕಷ್ಟ ಮಹಿಳೆಯರಿಗಷ್ಟೇ ಅರ್ಥವಾಗಲು ಸಾಧ್ಯ. ನಾನು ಸಹ ಬಾವಿಗೆ ಹಗ್ಗ ಇಳಿ ಬಿಟ್ಟು ಬಿಂದಿಗೆಯಲ್ಲಿ ನೀರು ಮೇಲೆತ್ತಿ ಮನೆ ಬಳಕೆಗೆ ಬೇಕಾಗುವಷ್ಟು ನೀರು ತುಂಬಿಸಿ ಶಾಲೆಗೆ ಹೋಗಬೇಕಾದ ಸ್ಥಿತಿ ಇತ್ತು. ಇಂದು ಕೊಳಾಯಿಗಳ ಮೂಲಕ ನೀರು ಮನೆಗೆ ಬರುವುದರಿಂದ ನೀರಿನ ಮಿತಿ ಬಳಕೆ ಬಗ್ಗೆ ಜನರಿಗೆ ತಿಳಿವಳಿಕೆ ಇಲ್ಲದಾಗಿದೆ’ ಎಂದರು.

ರಾಜ್ಯದಲ್ಲಿನ ಎಲ್ಲ ಅಣೆಕಟ್ಟೆಗಳು ತುಂಬಿವೆ. ಬಹುತೇಕ ಕೆರೆಗಳಿಗೆ ನೀರು ಬಂದಿವೆ. ಹೀಗಾಗಿ ಕುಡಿಯುವ ನೀರಿನ ಬವಣೆ ನೀಗಲಿದೆ. ಬೆಂಗಳೂರು ನಗರಕ್ಕೆ ಕಾವೇರಿ ನದಿಯಿಂದ 18 ಟಿಎಂಸಿ ನೀರು ಬರುತ್ತಿದೆ. ಹಾಗೆಯೇ ಬೆಂಗಳೂರು ಪ್ರದೇಶದಲ್ಲಿ ಬೀಳುವ ಮಳೆಯಿಂದ ಸುಮಾರು 40 ಟಿಎಂಸಿ ನೀರು ಹರಿದು ಕೊಚ್ಚೆ ನೀರಾಗಿ ಹೊರಗೆ ಹರಿದು ಹೋಗುತ್ತಿವೆ. ಈ ನೀರನ್ನು ವ್ಯರ್ಥವಾಗದಂತೆ, ಕೊಳಕಾಗದಂತೆ ಸಂಗ್ರಹ ಮಾಡಿಕೊಳ್ಳುವ ತುರ್ತು ಅಗತ್ಯವಿದೆ ಎಂದರು.

ಅಭಿವೃದ್ದಿಗೆ ಪ್ರಥಮ ಆದ್ಯತೆ: ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬೆಂಗಳೂರು ನಗರದ ಒಂದು ಭಾಗವೇ ಆಗುತ್ತಿವೆ. ಬೆಂಗಳೂರು ನಗರಕ್ಕಿಂತಲೂ ಸುತ್ತಲಿನ ತಾಲ್ಲೂಕು ಕೇಂದ್ರಗಳು ವೇಗವಾಗಿ ಬೆಳೆಯುತ್ತಿವೆ. ಇಂತಹ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಯಾವುದೇ ಪಕ್ಷದ ಭೇದ ಇಲ್ಲದೆ ಎಲ್ಲ ತಾಲ್ಲೂಕುಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ’ ಎಂದರು.

‘ಕುಡಿಯುವ ನೀರಿನ ಬವಣೆಯನ್ನು ನೀಗಿಸುವುದು ಈ ಭಾಗದ ಬಹು ದೊಡ್ಡ ಸವಾಲಾಗಿದೆ. ಹೀಗಾಗಿ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ತುರ್ತಾಗಿ ಮುಕ್ತಾಯಗೊಳಿಸುವ ಕಡೆಗೆ ಒತ್ತು ನೀಡಲಾಗುತ್ತಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು.

ಸಂಸತ್‌ ಸದಸ್ಯ ಬಿ.ಎನ್‌. ಬಚ್ಚೇಗೌಡ ಮಾತನಾಡಿ, ಕೊನಘಟ್ಟದಲ್ಲಿ ಕುಡಿಯುವ ನೀರಿನ ಟ್ಯಾಂಕ್‌, ಶಾಲಾ ಕಟ್ಟಡ ನಿರ್ಮಾಣಕ್ಕೆ ಸಂಸತ್‌ ಸದಸ್ಯರ ನಿಧಿಯಿಂದ ₹10 ಲಕ್ಷ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಜಿಲ್ಲಾಧಿಕಾರಿ ಪಿ.ಎ. ರವೀಂದ್ರ, ಸಿಇಒ ಎನ್‌. ಎಂ. ನಾಗರಾಜ್‌, ಉಪವಿಭಾಗಾಧಿಕಾರಿ ಸಿ. ಮಂಜುನಾಥ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಮುನೇಗೌಡ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎನ್‌. ಹನುಮಂತೇಗೌಡ, ಬಿಜೆಪಿ ಹಿರಿಯ ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ಟಿ.ವಿ. ಲಕ್ಷ್ಮೀನಾರಾಯಣ, ಬಿ.ಸಿ. ನಾರಾಯಣಸ್ವಾಮಿ, ಕೋಡಿನರಸಿಂಹಮೂರ್ತಿ, ಪುಷ್ಪಾಶಿವಶಂಕರ್‌, ಅಶ್ವತ್ಥನಾರಾಯಣಕುಮಾರ್‌, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ. ರಾಜಣ್ಣ, ನಗರ ಅಧ್ಯಕ್ಷ ಕೆ.ಬಿ. ಮುದ್ದಪ್ಪ, ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT