ಗುರುವಾರ , ಮಾರ್ಚ್ 23, 2023
32 °C
ದೊಡ್ಡಬೆಳವಂಗಲ: ಶೇ 100 ಫಲಿತಾಂಶ ಸಾಧನೆ, ವಿದ್ಯಾರ್ಥಿಗಳ ಒಲವು

ಕೆಪಿಎಸ್‌: ದಾಖಲಾತಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ತಾಲ್ಲೂಕಿನ ದೊಡ್ಡಬೆಳವಂಗಲದಲ್ಲಿ 2019ರಲ್ಲಿ ಪ್ರಾರಂಭವಾದ ಕರ್ನಾಟಕ ಪಬ್ಲಿಕ್‌ ಶಾಲೆಗೆ 2020-21ನೇ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ.

2019 ಹಾಗೂ 2020 ಎರಡೂ ವರ್ಷವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಶೇ 100ರಷ್ಟು ಹಾಗೂ ಕನ್ನಡ ಮಾಧ್ಯಮದಲ್ಲಿ ಶೇ 93ರಷ್ಟು ಫಲಿತಾಂಶ ಬಂದಿದೆ ಎಂದು ಮಾಹಿತಿ ನೀಡಿದ ಉಪಪ್ರಾಂಶುಪಾಲ ಶ್ರೀನಿವಾಸರೆಡ್ಡಿ, ‘ಎಲ್‌ಕೆಜಿಯಿಂದ 10ನೇ ತರಗತಿಯವರೆಗೂ ಒಂದೇ ಆವರಣದಲ್ಲಿ ಕಲಿಕೆಗೆ ಅವಕಾಶ ಇದೆ. ಪ್ರತಿ ವಿಷಯಗಳಿಗೂ ಪ್ರತ್ಯೇಕ ಶಿಕ್ಷಕರು, ಸುಸಜ್ಜಿತವಾದ ಕೊಠಡಿ ಸೇರಿದಂತೆ ಎಲ್ಲ ಮೂಲಸೌಲಭ್ಯಗಳು ಇವೆ. ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ತಲುಪುತ್ತಿವೆ. ಹೀಗಾಗಿ ನಮ್ಮ ಶಾಲೆಯಲ್ಲಿನ ಕಲಿಕೆ ಕುರಿತು ಪೋಷಕ ರಲ್ಲಿ ವಿಶ್ವಾಸ ಮೂಡಿದೆ’ ಎಂದರು.

‘2019ರಲ್ಲಿ 8ರಿಂದ 10ನೇ ತರಗತಿವರೆಗೆ 310 ಜನ ವಿದ್ಯಾರ್ಥಿಗಳ ಸಂಖ್ಯೆ ಇತ್ತು. 2020ರಲ್ಲಿ 413 ಜನ, ಹಾಗೆಯೇ ಎಲ್‌ಕೆಜಿ ಯಿಂದ 7ನೇ ತರಗತಿವರೆಗೆ 340 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ದಾಖಲಾತಿಗೆ ಇನ್ನು ಸಹ ಅವಕಾಶ ಇದೆ’ ಎಂದರು.

‘8ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳನ್ನು ಕೇಳುತ್ತಿರುವ ಬಗ್ಗೆ ಪರಿಶೀಲಿಸಿ ವಿದ್ಯಾಗಮನ ಕಾರ್ಯಕ್ರಮದಂತೆ ವಿದ್ಯಾರ್ಥಿಗಳು ಇರುವಲ್ಲಿಗೆ ತೆರಳಿ ಅಭ್ಯಾಸದ ಹಾಳೆಗಳನ್ನು ವಿಷಯವಾರು ನೀಡಿ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಶಿಕ್ಷಕರನ್ನು ನಿಯೋಜಿಸಲಾಗಿದೆ’ ಎಂದರು.

ಬಿಇಎಲ್‌ ಕಂಪನಿ, ಆರ್‌ಐಡಿಎಫ್‌, ಎಚ್‌ಎಎಲ್‌ ವತಿಯಿಂದ ಶಾಲೆಗೆ ಹೆಚ್ಚುವರಿ ಕೊಠಡಿ, ಹೈಟೆಕ್‌ ಶೌಚಾಲಯ ಹಾಗೂ ಬಿಬಿಎಂಪಿ ವತಿಯಿಂದ ಕಾಂಪೌಂಡ್‌ ನಿರ್ಮಿಸಿಕೊಟ್ಟಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.