ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಕೋಟೆ | 717 ಕೃಷಿ ಹೊಂಡಗಳಿಗಿಲ್ಲ ಬೇಲಿ

ಅಪಾಯಕ್ಕೆ ಆಹ್ವಾನಿಸುತ್ತಿರುವ ಹೊಂಡಗಳು
ಡಿ.ಎನ್.ವೆಂಕಟೇಶ್
Published 4 ಏಪ್ರಿಲ್ 2024, 5:09 IST
Last Updated 4 ಏಪ್ರಿಲ್ 2024, 5:09 IST
ಅಕ್ಷರ ಗಾತ್ರ

ಹೊಸಕೋಟೆ: ಮಳೆ ಕಡಿಮೆಯಾಗುತ್ತಿದ್ದಂತೆ ಈ ಭಾಗದಲ್ಲಿ ಸಿಗುವ ಅಲ್ಪಸ್ವಲ್ಪ ನೀರನ್ನು ಶೇಖರಿಸಿಕೊಂಡು ವ್ಯವಸಾಯಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಸಹಾಯದನದಲ್ಲಿ ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಿಗೆ ತಡೆಬೇಲಿ ಇಲ್ಲದ ಕಾರಣ ಅಪಾಯಕ್ಕೆ ಆಹ್ವಾನವನ್ನು ನೀಡುವಂತಿದೆ. 

ಕೃಷಿ ಹೊಂಡಗಳಲ್ಲಿ ಶೇಖರಿಸುವ ನೀರು ಇಂಗುವುದನ್ನು ತಡೆಯಲು ಅದಕ್ಕೆ ಟಾರ್ಪಲಿನ್ ಅಳವಡಿಸಿರುತ್ತಾರೆ. ಆದ್ದರಿಂದ ಅಪ್ಪಿ ತಪ್ಪಿ ಈಜು ಬರದೆ ಇರುವವರು ಯಾರಾದರೂ ಕೃಷಿ ಹೊಂಡಗಳಿಗೇನಾದರೂ ಬಿದ್ದರೆ, ಅದರಿಂದ ಹೊರ ಬರುವುದು ಅಸಾಧ್ಯ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೃಷಿ ಹೊಂಡಗಳಿಗೆ ಅಪ್ಪಿತಪ್ಪಿಯೂ ಯಾರೂ ಹೋಗದಂತೆ ಮುಳ್ಳಿನ ಬೇಲಿಯನ್ನು ರೈತರೇ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. 

ಬೇಸಿಗೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಹುತೇಕ ಕಾಲ ಕಳೆಯಲು ಆಯ್ಕೆ ಮಾಡಿಕೊಳ್ಳುವುದು ನೀರಿನ ಆಟವನ್ನು. ಅದಕ್ಕಾಗಿ ತೋಟಗಳ ಬಳಿ ಇರುವ ಬಾವಿ, ಕೆರೆ, ಕುಂಟೆ, ಹಳ್ಳಗಳಲ್ಲಿ ಅಡುವುದು ವಾಡಿಕೆ. ಆದರೆ ಅವರಿಗೆ ಈಗ ಸುಲಭವಾಗಿ ಕೃಷಿ ಹೊಂಡಗಳು ಸಿಗುತ್ತಿದ್ದು, ಇದರಿಂದ ಮಕ್ಕಳ ಪ್ರಾಣಕ್ಕೆ ಎರವಾಗುವಂಥ ಘಟನೆಗಳು ನಡೆಯುತ್ತಿವೆ.

2014ರಿಂದ 2018 ರವರೆಗಿನ ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ 717 ಕೃಷಿ ಹೊಂಡಗಳಿದ್ದು, ಈ ಎಲ್ಲಾ ಕೃಷಿ ಹೊಂಡಗಳಿಗೆ ಬೇಲಿ ಕಡ್ಡಾಯವಾಗಿರಲಿಲ್ಲ. ಆದ್ದರಿಂದ ಅದರಲ್ಲಿ ಬಹುತೇಕ ಹೊಂಡಗಳಿಗೆ ಬೇಲಿಯನ್ನು ಅಳವಡಿಸಿಲ್ಲ. ಆದರೆ ಪ್ರಸ್ತುತ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸುಮಾರು 50 ಕೃಷಿ ಹೊಂಡಗಳಿಗೆ ಅರ್ಜಿ ಸಲ್ಲಿಸುವಾಗಲೇ ಕಡ್ಡಾಯ ಮಾಡಿ, ಬೇಲಿ ಅಳವಡಿಸಿದ್ದರೆ ಮಾತ್ರ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಿ.ಚಂದ್ರಪ್ಪ ತಿಳಿಸಿದರು.

ಕೃಷಿ ಹೊಂಡ ನಿರ್ಮಾಣದ ನಂತರ ಕೊಳವೆ ಬಾವಿ ಒಣಗುವುದು ಸೇರಿದಂತೆ ನೀರಿನ ಮೂಲಗಳ ಕೊರತೆ ಎದುರಾಗಿ ತಾಲ್ಲೂಕಿನಲ್ಲಿ 717ರಲ್ಲಿ ಶೇ 20ರಷ್ಟು ಕೃಷಿ ಹೊಂಡಗಳು ಬಳಕೆಯಿಲ್ಲದೆ ಉಳಿದಿವೆ. ಆದರೆ ಕೃಷಿ ಹೊಂಡಗಳು ಯಾವುದೇ ಕಾರಣಕ್ಕೂ ನಿರರ್ಥಕವಲ್ಲ. ಒಂದಲ್ಲಾ ಒಂದು ದಿನ ಅವುಗಳು ಬಳಕೆಯಾಗುತ್ತವೆ. ಮುಖ್ಯವಾಗಿ ಅಂಜತರ್ಜಲ ವೃದ್ಧಿಗೆ ಅತ್ಯಂತ ಸಹಕಾರಿ ಎಂದು ಅವರು ಹೇಳಿದರು.

ಫೆನ್ಸಿಂಗ್ ಅಳವಡಿಕೆಗೆ ಅನುದಾನ ಕೋರಿಕೆ: ತಾಲ್ಲೂಕಿನಲ್ಲಿ ಬೇಲಿ ರಹಿತವಾಗಿ ಉಳಿದಿರುವ ಕೃಷಿ ಹೊಂಡಗಳಿಗೆ ಬೇಲಿಯನ್ನು ಒದಗಿಸಲು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಅನುಮತಿ ನೀಡಿದ ತಕ್ಷಣ ಹಳೆಯ ಕೃಷಿ ಹೊಂಡಗಳಿಗೂ ಬೇಲಿಯನ್ನು ಹಾಕುವ ಕೆಲಸವನ್ನು ಮಾಡುತ್ತೇವೆ. ಉಳಿದಂತೆ ಕೃಷಿ ಹೊಂಡಗಳಿಂದ ಯಾವುದೇ ಸಮಸ್ಯೆ ಸಂಭವಿಸದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲು ರೈತರಿಗೆ ನಿರ್ದೇಶನ ನೀಡಲಾಗಿದೆ ಎಂದು ಬಿ.ಪಿ.ಚಂದ್ರಪ್ಪ ಅವರು ತಿಳಿಸಿದರು.

ತಾಲ್ಲೂಕಿನಲ್ಲಿ ಪ್ರಸ್ತುತ ವರ್ಷದಲ್ಲಿ 50 ಕೃಷಿ ಹೊಂಡಗಳು ಕೃಷಿ ಇಲಾಖೆಯ ಅಡಿಯಲ್ಲಿ ನಿರ್ಮಾಣವಾಗುತ್ತಿವೆ. ಮುಂದಿನ ವಾರ ಟಾರ್ಪಲಿನ್ ಅಳವಡಿಸುವ ಕಾರ್ಯ ನಡೆಯಲಿದೆ. ಆ ನಂತರ ಬೇಲಿ ಹಾಕುವ ಕಾರ್ಯ ನಡೆಯಲಿದೆ. ಹೊಂಡಕ್ಕೆ ಬರುವ ಅನುದಾನವನ್ನು ಪಡೆಯಬೇಕಾದರೆ ರೈತರು ಕೃಷಿ ಹೊಂಡಕ್ಕೆ ಬೇಲಿಯನ್ನು ಅಳವಡಿಸಬೇಕು. ಸಿಮೆಂಟ್ ಕಂಬ, ಕಲ್ಲಿನ ಕಂಬ ಅಥವಾ ಕಬ್ಬಿಣದ ಕಂಬ ಯಾವುದಾದರೂ ಆಗಲಿ ಬೇಲಿ ಕಡ್ಡಾಯ. ಇದಕ್ಕೆ ಶೇ 40ರಷ್ಟು ಸಬ್ಸಿಡಿಯನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಬಿ.ಪಿ.ಚಂದ್ರಪ್ಪ
ಬಿ.ಪಿ.ಚಂದ್ರಪ್ಪ

ಕೃಷಿ ಹೊಂಡಗಳಲ್ಲಿ ಬೇಲಿ ಹೊರತಾಗಿಯೂ ಉದ್ದವಾದ ದಾರಗಳು, ವೇಸ್ಟ್ ಸೈಕಲ್, ಬೈಕ್, ಕಾರಿನ ಟ್ಯೂಬ್‌ಗಳಿಗೆ ಗಾಳಿ ತುಂಬಿ ಬಿಡಬೇಕು. ಹಾಗಾದಲ್ಲಿ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗುತ್ತದೆ. ಅಪ್ಪಿತಪ್ಪಿ ಯಾರಾದರೂ ನೀರಿನಲ್ಲಿ ಬಿದ್ದರೆ ಈಜು ಬರದೆ ಇದ್ದರೂ ಅವುಗಳ ಸಹಾಯದಿಂದ ಜೀವ ಉಳಿಸಿಕೊಳ್ಳಲು ನೆರವಾಗುತ್ತವೆ ಎನ್ನುತ್ತಾರೆ ಅವರು. 

ಪ್ರಭುದೇವಯ್ಯ
ಪ್ರಭುದೇವಯ್ಯ
ಅವಘಡಕ್ಕೂ ಮುನ್ನ ಎಚ್ಚೆತ್ತುಕೊಳ್ಳಲಿ
ತಾಲ್ಲೂಕಿನಲ್ಲಿ ಇತ್ತೀಚೆಗೆ ಕರಿಬೀರನ ಹೊಸಹಳ್ಳಿಯಲ್ಲಿ ಒಂದೇ ಕುಟುಂಬದ ಮೂವರು ಕೃಷಿ ಹೊಂಡದಲ್ಲಿ ಬಿದ್ದು ಹೊರಬರಲಾದರೆ ಮೃತಪಟ್ಟಿದ್ದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೃಷಿ ಹೊಂಡಗಳಿಗೆ ಬೇಲಿ ವ್ಯವಸ್ಥೆ ಮಾಡಬೇಕು. ಈ ಹಿಂದೆ ನಿರ್ಮಾಣವಾಗಿರುವ ಕೃಷಿ ಹೊಂಡಗಳಿಗೆ ಬೇಲಿ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಕಡ್ಡಾಯ ಮಾಡಿರಲಿಲ್ಲ. ಆದರೆ ಪ್ರಾಣ ಹಾನಿಯನ್ನು ತಡೆಯುವ ದೃಷ್ಟಿಯಿಂದ ಸರ್ಕಾರ ರೈತರಿಗೆ ಬೇಲಿ ನಿರ್ಮಿಸಿಕೊಳ್ಳಲು ಅನುದಾನವನ್ನು ನೀಡಬೇಕಿದೆ– ಪ್ರಭುದೇವಯ್ಯ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಹೊಸಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT