ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಹಬ್ಬ: ಸಂವಿಧಾನ ಶಿಲ್ಪಿಗೆ ನಮನ

ದೊಡ್ಡಬಳ್ಳಾಪುರದ ವಿವಿಧೆಡೆ ಅದ್ದೂರಿ ಜಯಂತಿ l ಮೊಳಗಿದ ಜೈಭೀಮ್ ಘೋಷಣೆ
Last Updated 15 ಏಪ್ರಿಲ್ 2023, 8:46 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯನ್ನು ತಾಲ್ಲೂಕಿನ ವಿವಿಧೆಡೆ ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿನ ಅಂಬೇಡ್ಕರ್ ಅವರ ಪ್ರತಿಮೆಗೆ ಶಾಸಕ ಟಿ. ವೆಂಕಟರಮಣಯ್ಯ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮಿನಾರಾಯಣ, ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು.

ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ನಡೆದ ಅಂಬೇಡ್ಕರ್ ಜಯಂತಿಯ ಸರಳ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಎನ್. ತೇಜಸ್ ಕುಮಾರ್ ಮಾತನಾಡಿ, ‘ವಿಶ್ವದಲ್ಲೇ ವಿಶಿಷ್ಟ ಮತ್ತು ಶ್ರೇಷ್ಠ ಸಂವಿಧಾನವನ್ನು ರಚಿಸುವ ಮೂಲಕ ಅಂಬೇಡ್ಕರ್ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಪರಿಶ್ರಮದಿಂದ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಸಮಾನತೆ ಹಾಗೂ ಸ್ವಾತಂತ್ರ್ಯ ದೊರೆತಿದೆ’ ಎಂದರು.

ತಹಶೀಲ್ದಾರ್ ಮೋಹನಕುಮಾರಿ, ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಸೋಮಶೇಖರ್ ಇದ್ದರು.

ಮತದಾರರ ಜಾಗೃತಿ ಕಾರ್ಯಕ್ರಮ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆಯಿಂದ ಮತದಾರರ ಜಾಗೃತಿ ಜಾಥಾ ಶುಕ್ರವಾರ ನಡೆಯಿತು. ನಗರದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮತದಾನದ ಮಹತ್ವದ ಕರಪತ್ರಗಳನ್ನು ಮತದಾರರಿಗೆ ಹಂಚಿಕೆ ಮಾಡಿ, ಅರಿವು ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ಸಂಚಾಲಕ ಆರ್. ಚಂದ್ರತೇಜಸ್ವಿ, ‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳು ಕುಸಿಯುತ್ತಿವೆ. ಇದು ಗಂಭೀರವಾದ ವಿಚಾರವಾಗಿದ್ದು, ಜನಪ್ರತಿನಿಧಿಗಳು ಮತ್ತು ಮತದಾರರೇ ಇದಕ್ಕೆ ಹೊಣೆಯಾಗಿದ್ದಾರೆ’ ಎಂದರು.

‘ಅಂಬೇಡ್ಕರ್ ಅವರ ಸಮಾನತೆ ಆಶಯಗಳನ್ನು ನಾವು ಅಳವಡಿಸಿಕೊಂಡು ಪ್ರಜಾಪ್ರಭುತ್ವ ಬಲಪಡಿಸಬೇಕಾದ ಅಗತ್ಯವಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಇದೆಲ್ಲವನ್ನೂ ನೆನಪಿಟ್ಟಿಕೊಳ್ಳಬೇಕು. ನಮ್ಮ ಹಕ್ಕನ್ನು ಸಮರ್ಥವಾಗಿ ಚಲಾಯಿಸಬೇಕು. ಮತದಾನ ಎಂಬುದು ನಮ್ಮನ್ನು ನಾವೇ ನೋಡಿಕೊಳ್ಳುವ ಕನ್ನಡಿಯಾಗಬೇಕು. ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಜಾತಿವಾದಿಗಳು, ಕೋಮುವಾದಿಗಳು ಮತ್ತು ಅಹಂಕಾರಿಯಾಗಿರಬಾರದು’ ಎಂದು ಪ್ರತಿಪಾದಿಸಿದರು.

ವೇದಿಕೆ ಸಂಚಾಲಕ ರಾಜುಸಣ್ಣಕ್ಕಿ, ಸಂಜೀವ ನಾಯಕ್, ವೆಂಕಟೇಶ್, ಡಿ.ಪಿ.ಆಂಜನೇಯ, ರುದ್ರಾರಾದ್ಯ, ಮುನಿಪಾಪಯ್ಯ, ಗೂಳ್ಯ ಹನುಮಣ್ಣ, ಛಲವಾದಿ ಸುರೇಶ್, ಆಶಾರಾಣಿ, ಸರಸ್ವತಿ, ನಟರಾಜ್ ಇದ್ದರು.

ಅಭಿವೃದ್ಧಿಗೆ ಸಂವಿಧಾನ ಪೂರಕ

ನಗರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 132ನೇ ಜಯಂತಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಟ್ರಸ್ಟ್ ಉಪಾಧ್ಯಕ್ಷ ಜೆ. ರಾಜೇಂದ್ರ ಮಾತನಾಡಿ, ‘ಅಂಬೇಡ್ಕರ್ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಪರಿಣಾಮಕಾರಿಯಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಅಂಬೇಡ್ಕರ್ ಅವರ ಆಶಯಗಳು ಈಡೇರಲು ಯುವಜನ ಕಾರ್ಯೋನ್ಮುಖರಾಗಬೇಕು’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ವಿಜಯಕಾರ್ತಿಕ್, ಅಕಾಡೆಮಿಕ್ ನಿರ್ದೇಶಕ ಡಾ. ಶ್ರೀನಿವಾಸರೆಡ್ಡಿ, ಪದವಿ ಕಾಲೇಜು ಪ್ರಾಧ್ಯಾಪಕ ಪ್ರೊ.ಕೆ.ಆರ್. ರವಿಕಿರಣ್, ಕ್ಯಾಂಪಸ್ ಎಇಇ ರಮೇಶ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ನಿತಿನ್ ಸೋಮಶೇಖರ್, ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT