ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಅಮಿತ್ ಶಾ ರೋಡ್ ಷೊ– ಸಂತೆ ಮಳಿಗೆಗಳು ತೆರವು

Last Updated 21 ಏಪ್ರಿಲ್ 2023, 8:01 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಪಟ್ಟಣದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ರೋಡ್ ಷೊ ನಡೆಸಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಪಟ್ಟಣದಲ್ಲಿ ನಡೆಯಬೇಕಿದ್ದ ಸಂತೆ ಮಳಿಗೆಗಳನ್ನು ಮುಚ್ಚಿಸಿದ್ದು, ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಶುಕ್ರವಾರ ನಡೆಯುವ ಸಂತೆಯಲ್ಲಿ ಭಾರಿ ವ್ಯಾಪಾರ ವಹಿವಾಟು ನಡೆಯುತ್ತದೆ.

ಹೀಗಾಗಿ ವ್ಯಾಪಾರಿಗಳು ರಸ್ತೆಬದಿ ಮತ್ತು ಸಂತೆ ಮೈದಾನದ ಒಳಗೆ ಮಳಿಗೆ ಹಾಕಿದ್ದರು. ಸಂತೆ ಮೈದಾನದೊಳಗೆ ವ್ಯಾಪಾರ ಆರಂಭವಾಗಿತ್ತು. ಇದಕ್ಕೆ ಪುರಸಭೆ ಅಧಿಕಾರಿಗಳು ಅನುಮತಿ ನೀಡಿದ್ದರು. ಆದರೂ ಪೊಲೀಸರು ಬೆಳಿಗ್ಗೆ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ.

'ಮುಖ್ಯರಸ್ತೆ ಬಿಟ್ಟು ಸಂತೆ ಮೈದಾನದ ಒಳಗೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಳ್ಳಿ ಎಂದು ಅಧಿಕಾರಿಗಳು ಹೇಳಿದ್ದರು. ಈಗ ಪೊಲೀಸರು ಬಂದು ಮಳಿಗೆ ತೆರವುಗೊಳಿಸುತ್ತಿದ್ದಾರೆ. ಮೊದಲೇ ಸಂತೆಯಲ್ಲಿ ಅಂಗಡಿ ಇಟ್ಟುಕೊಳ್ಳಬಾರದು ಎಂದು ಹೇಳಿದ್ದರೆ, ನಾವು ಇಲ್ಲಿಗೆ ಬರುತ್ತಿರಲಿಲ್ಲ' ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.

ಸಂಚಾರಕ್ಕೆ ಪರದಾಟ:
ಪಟ್ಟಣದ ಶಿವಗಣೇಶ ಸರ್ಕಲ್ ನಿಂದ ಚನ್ನರಾಯಪಟ್ಟಣ ಸರ್ಕಲ್ ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಬಿಜೆಪಿ ಬಾವುಟಗಳಿಂದ ಅಲಂಕಾರ ಮಾಡಲಾಗಿದೆ. ಬ್ಯಾರಿಕೇಡ್ ಗಳಿಂದ ಹೊರಗೆ ಜನರು ನಿಂತುಕೊಳ್ಳಲು ಅವಕಾಶ ಮಾಡಲಾಗಿದೆ. 20 ಸಾವಿರಕ್ಕೂ ಹೆಚ್ಚು ಮಂದಿ ಸೇರುವಂತಹ ನಿರೀಕ್ಷೆ ಇದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಕಟೌಟ್ ಗಳನ್ನು ರಸ್ತೆಗಳ ಉದ್ದಕ್ಕೂ ಕಟ್ಟಲಾಗಿದೆ. ರಸ್ತೆಯುದ್ಧಕ್ಕೂ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು, ಹೊಟೇಲ್ ಗಳನ್ನು ಮುಚ್ಚಲಾಗಿದೆ.

ಎಲ್ಲೆಡೆ ಬ್ಯಾರಿಕೇಡ್ ಅಳಡಿಸಿರುವುದರಿಂದ ಸಾರ್ವಜನಿಕರು ಸಂಚರಿಸಲು ಪರದಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಬ್ಯಾರಿಕೆಡ್ ಅಳವಡಿಸಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ಬಸ್ ಗಳಷ್ಟೆ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿವೆ.
ಬಿಜೆಪಿ ರಾಜ್ಯ ಉಸ್ತುವಾರಿ ಅಣ್ಣಾಮಲೈ ಅವರು ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. 600 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ, ವಿಶೇಷ ರಕ್ಷಣಾ ಸಿಬ್ಬಂದಿ, ಸಶಸ್ತ್ರ ಮೀಸಲು ಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ, ಕೇಂದ್ರ ಗುಪ್ತಚರ ಅಧಿಕಾರಿಗಳು, ರಾಜ್ಯ ಗುಪ್ತಚರ ಅಧಿಕಾರಿಗಳು, ರಾಜ್ಯ ಪೊಲೀಸ್, ಗಡಿ ಭದ್ರತಾ ಪಡೆಗಳು, ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಅಮಿತ್ ಶಾ ಸಂಚರಿಸುವ ರಸ್ತೆಯಲ್ಲಿ ಗುಂಡಿಗಳು: ಅಮಿತ್ ಶಾ ಅವರು ರೋಡ್ ಷೊ ನಡೆಸಲಿರುವ ಮುಖ್ಯರಸ್ತೆ ಗುಂಡಿಗಳಿಂದ ತುಂಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT