ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಲ್ಲಿ ಆದರ್ಶ, ಸಾಧನೆ ಮನೋಭಾವ ಮುಖ್ಯ

ಧಾರವಾಡದ ಸ್ಪರ್ಧಾಸ್ಫೂರ್ತಿ ಅಕಾಡೆಮಿಯ ಪ್ರೊಫೆಸರ್ ರಾಘವೇಂದ್ರ ಸಲಹೆ
Last Updated 12 ಜನವರಿ 2020, 14:09 IST
ಅಕ್ಷರ ಗಾತ್ರ

ವಿಜಯಪುರ: ‘ಯುವಜನರು ಆದರ್ಶ ಮತ್ತು ಸಾಧನೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಆದರ್ಶ, ಸಾಧನೆ ಈ ಎರಡೂ ಶಾಶ್ವತವಾಗಿ ಉಳಿದು ಮುಂಬರುವ ಪೀಳಿಗೆಗೆ ಮೈಲಿಗಲ್ಲುಗಳಾಗಬೇಕು’ ಎಂದು ಧಾರವಾಡದ ಸ್ಪರ್ಧಾಸ್ಫೂರ್ತಿ ಅಕಾಡೆಮಿಯ ಪ್ರೊಫೆಸರ್ ರಾಘವೇಂದ್ರ ತಿಳಿಸಿದರು.

ಇಲ್ಲಿನ ಶಿಡ್ಲಘಟ್ಟ ಕ್ರಾಸ್‌ನಲ್ಲಿರುವ ಇನ್ಸ್‌ಫೈರ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವಜನತೆಯಲ್ಲಿ ಅಗಾಧ ಶಕ್ತಿ ಮತ್ತು ಯುಕ್ತಿ ಎರಡೂ ಇವೆ. ಇವುಗಳನ್ನು ಸಮಾಜದ ಒಳಿತಿಗೆ ಹಾಗೂ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಸ್ವಂತಕ್ಕೆ, ಸಮಾಜಕ್ಕೂ ಎರಡಕ್ಕೂ ಹಾನಿಕಾರಕ. ವಿವೇಕಾನಂದರ ಚಿಂತನೆಗಳು ಮತ್ತು ಅವರ ಸಮಾಜಮುಖಿ ಧೋರಣೆಗಳು ಎಂದೆಂದಿಗೂ ಪ್ರಸ್ತುತ’ ಎಂದರು.

ಸ್ಪರ್ಧಾ ಸಾರಥಿ ತರಬೇತಿ ಕೇಂದ್ರದ ಸ್ಥಾಪಕ ಎನ್. ಶ್ರೀನಿವಾಸಮೂರ್ತಿ ಮಾತನಾಡಿ, ‘ಯುವಜನತೆ ಇಂದು ಪುಸ್ತಕ ಹಿಡಿದು ಕಲಿಯುತ್ತಿರುವ ಶಿಕ್ಷಣ ಇನ್ನೊಬ್ಬರು ಕೊಡುವ ಉದ್ಯೋಗಕ್ಕೆ ಮಾನದಂಡವಾಗಿದೆಯೇ ಹೊರತು, ಅದರಿಂದ ಸಮಾಜ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಾಗುತಿಲ್ಲ. ಇಂದಿನ ಶಿಕ್ಷಣ ಕೇವಲ ಮಾರುಕಟ್ಟೆಯ ಸರಕಷ್ಟೇ ಆಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸ್ವಾಮಿ ವಿವೇಕಾನಂದರು ಬಯಸಿದಂತೆ ಯುವಜನತೆ ಸ್ವಯಂ ಉದ್ಯಮಿಗಳಾಗಬೇಕು. ಆ ನಿಟ್ಟಿನಲ್ಲಿ ಕೌಶಲಭರಿತ ಶಿಕ್ಷಣ ಸಮಾಜದ ಕಡೆಯ ವ್ಯಕ್ತಿಯವರೆಗೂ ತಲುಪಬೇಕು. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಮತ್ತು ಸರ್ಕಾರ ಕಾರ್ಯ ನಿರ್ವಹಿಸಬೇಕು’ ಎಂದರು.

ಶಿಕ್ಷಣ ತಜ್ಞೆ ಮಂಜುಶ್ರೀ ಮಾತನಾಡಿ, ‘ವ್ಯಕ್ತಿ ಕೇವಲ ಇತಿಹಾಸ ಓದುವುದರಲ್ಲಿಯೇ ಬದುಕನ್ನು ಕಳೆಯಬಾರದು. ಇತಿಹಾಸ ಸೃಷ್ಟಿಸುವಂತಹ ಮಹತ್ಕಾರ್ಯಗಳಿಗೆ ಮುಂದಾಗಬೇಕು. ಪ್ರತಿ ವ್ಯಕ್ತಿಯಲ್ಲಿಯೂ ಪ್ರಜ್ವಲಿಸಬಲ್ಲ ಕಿಡಿ ಸ್ತುಪ್ತವಾಗಿರುತ್ತದೆ. ಅದನ್ನು ಜಾಗೃತವಾಗಿಸಿ ಬೆಳಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಯುವಜನತೆ ಕಾರ್ಯ ಪ್ರವೃತ್ತರಾಗಬೇಕು. ಆರೋಗ್ಯಯುತವಾದ ಸ್ಪರ್ಧಾತ್ಮಕ ಮನೋಭಾವ ಮುಖ್ಯ’ ಎಂದರು.

‘ಸಾಮಾಜಿಕ ಜಾಲ ತಾಣಗಳಲ್ಲಿ ಕಳೆದುಹೋಗುತ್ತಿರುವ ಇಂದಿನ ಯುವಜನತೆ ಸಂಕುಚಿತರಾಗುತ್ತಿದ್ದಾರೆ. ಇದರಿಂದ ಹೊರಬಂದು ವಿಶಾಲ ಪ್ರಜ್ಞೆ‌ ಬೆಳೆಸಿಕೊಳ್ಳಬೇಕು. ಎಂತಹುದೇ ಸಂಧಿಗ್ಧ ಪರಿಸ್ಥಿತಿಯಲ್ಲೂ ಬದುಕಿನಿಂದ ವಿಮುಖರಾಗಬಾರದು’ ಎಂದರು.

ರಜಿನಿ, ವಿನುತ, ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT