ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್ | ಕಾಸು‌ ಕೊಟ್ಟು ಪೊರೆಕೆಯಲ್ಲಿ ಹೊಡೆಸಿಕೊಂಡರು

ಆನೇಕಲ್‌ನಲ್ಲಿ ಶ್ರದ್ಧಾ,ಭಕ್ತಿಯ ‘ಕೋಟೆ ಜಗಳ’
Published 25 ಮೇ 2024, 15:19 IST
Last Updated 25 ಮೇ 2024, 15:19 IST
ಅಕ್ಷರ ಗಾತ್ರ

ಆನೇಕಲ್ : ಜಗಳದ ವೇಳೆ ‘ಪೊರ್ಕೆಲಿ ಹೊಡೆತ್ತೀನಿ’, ‘ಮೊರದಲ್ಲಿ ಹೊಡೆತ್ತೀನಿ’ ಎಂದು ಬೈಯ್ಯುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಆನೇಕಲ್‌‌ನಲ್ಲಿ ಕಾಸು ಕೊಟ್ಟು ಪೊರೆಕೆ ಮತ್ತು ಮೊರದಲ್ಲಿ ಹೊಡೆಸಿಕೊಳ್ಳುವ ಪದ್ಧತಿ ಆಚರಣೆಯಲ್ಲಿ ಇದೆ.

ಇದು ಆನೇಕಲ್ ಧರ್ಮರಾಯಸ್ವಾಮಿ ದ್ರೌಪದಿ ದೇವಿ ಕರಗ ಮಹೋತ್ಸವದ ಅಂಗವಾಗಿ ನಡೆಯುವ ‘ಕೋಟೆ ಜಗಳ’ ಎಂಬ ಧಾರ್ಮಿಕ ಆಚರಣೆಯಲ್ಲಿ ಕಾಣುವ ವಿಶಿಷ್ಟ ಆಚರಣೆ.

ಆನೇಕಲ್‌ ಹಸಿ ಕರಗದ ನಂತರ ಎರಡನೇ ದಿನವಾದ ಶನಿವಾರ ಈ ವಿಶಿಷ್ಟ ಧಾರ್ಮಿಕ ಆಚರಣೆ ನಡೆಯಿತು. ಸಂತೆಮಾಳದಲ್ಲಿನ ಮರವೊಂದರ ಕಟ್ಟೆಯ ಸುತ್ತಲೂ ಕೋಟೆ ಜಗಳಕ್ಕಾಗಿ ಜನರು ಜಮಾಯಿಸಿದ್ದರು. ವಿಶೇಷವಾಗಿ ಮಹಿಳೆ ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕೋಟೆ ಜಗಳದಲ್ಲಿ ಕಾಳಿ ದೇವಿಯ ಆವಾಹನೆಗೆ ಒಳಗಾದ ವ್ಯಕ್ತಿಯು ಕರಗದ ಗುಡಿಯಲ್ಲಿ ಗುಡಿಸಿದ ಪೊರಕೆ, ಮೊರ ಹಿಡಿದು ಹೊರ ಬಂದ ತಕ್ಷಣವೇ ಜನರು ಅವರಿಗೆ ಕಾಣಿಕೆ ನೀಡಿ, ಪೊರಕೆ ಮತ್ತು ಮೊರದಲ್ಲಿ ಹೊಡೆಸಿಕೊಳ್ಳಲು ಮುಗ್ಗಿಬಿದ್ದರು.

ಈ ರೀತಿ ಹೊಡೆಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ನಕಾರಾತ್ಮಕ ಅಂಶ ನಾಶವಾಗುತ್ತದೆ ಎಂಬ ನಂಬಿಕೆ ಜನರದ್ದು. ಹೀಗಾಗಿ ಕಾಳಿ ವೇಷಧಾರಿಗೆ ಹಣ ನೀಡಿ ಹೊಡೆಸಿಕೊಳ್ಳಲು ಮಹಿಳೆ ಮತ್ತು ಮಕ್ಕಳು ಬೀಳುತ್ತಿದ್ದರು, ಜನ ನಿಯಂತ್ರಿಸಲು ಕರಗ ಸಮಿತಿ ಪದಾಧಿಕಾರಿಗಳು ಹರಸಾಹಸ ಪಟ್ಟರು.

ಬೃಹತ್‌ ವೀರ ವಸಂತರಾಯ : ಕರಗದ ಉತ್ಸವದಲ್ಲಿ ಕುರುಕ್ಷೇತ್ರದ ವಿವಿಧ ಅಂಶಗಳು ಆಚರಣೆಯ ರೂಪದಲ್ಲಿ ಇಂದಿಗೂ ನಡೆಸುತ್ತಾ ಬರಲಾಗಿದೆ. ಉತ್ಸವದ ಅಂಗವಾಗಿ ವೀರ ವಸಂತರಾಯನ ಬೃಹತ್ ಮೂರ್ತಿಯ ಸ್ಥಾಪನೆ ಮಾಡಲಾಗಿದೆ.

ಒಣಕರಗ : ಧರ್ಮರಾಯಸ್ವಾಮಿ ದ್ರೌಪದಿ ದೇವಿ ಒಣಕರಗ ಮಹೋತ್ಸವ ರಾತ್ರಿ 2ಕ್ಕೆ ನಡೆಯಲಿದೆ. ಅಗ್ನಿಕೊಂಡ ಪ್ರವೇಶ ಹಾಗೂ ವೀರವಸಂತರಾನ ಶಿರಚ್ಛೇದನ ನಡೆಯಲಿದೆ. ಕರಗ ಮಹೋತ್ಸವದ ಆಚರಣೆಯ ಭಾಗವಾಗಿ ಭಾನುವಾರ ಬೆಳಗ್ಗೆ ಪೊಂಗಲ್‌ ಸೇವೆ ನಡೆಯಲಿದೆ. ಮಹಿಳೆಯರು ಸಿಹಿ ಪೊಂಗಲ್‌ನ್ನು ದೇವಾಲಯದ ಆವರಣದಲ್ಲಿಯೇ ಮಾಡಿ ಭಕ್ತರಿಗೆ ಹಂಚಲಿದ್ದಾರೆ.

ಕರಗ ಹೊತ್ತ ಚಂದ್ರಪ್ಪ ಅವರು ಭಕ್ತರಿಗೆ ಅರಿಶಿನ ನೀಡಿ ಹರಸಿದರು
ಕರಗ ಹೊತ್ತ ಚಂದ್ರಪ್ಪ ಅವರು ಭಕ್ತರಿಗೆ ಅರಿಶಿನ ನೀಡಿ ಹರಸಿದರು
ಆನೇಕಲ್‌ ಕರಗ ಮಹೋತ್ಸವದ ಅಂಗವಾಗಿ ಕೋಟೆ ಜಗಳದಲ್ಲಿ ಪೊರಕೆ ಮೊರದಲ್ಲಿ ಹೊಡೆಸಿಕೊಳ್ಳುತ್ತಿರುವ ಭಕ್ತರು
ಆನೇಕಲ್‌ ಕರಗ ಮಹೋತ್ಸವದ ಅಂಗವಾಗಿ ಕೋಟೆ ಜಗಳದಲ್ಲಿ ಪೊರಕೆ ಮೊರದಲ್ಲಿ ಹೊಡೆಸಿಕೊಳ್ಳುತ್ತಿರುವ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT