ಆನೇಕಲ್: ಪಟ್ಟಣದ ಪುರಸಭೆಯಿಂದ ರಸ್ತೆಗಳ ಸ್ವಚ್ಛತೆಗಾಗಿ ಯಂತ್ರಗಳ ಮೂಲಕ ರಸ್ತೆ ಸ್ವಚ್ಛತೆ ಕಾರ್ಯಕ್ಕೆ ಪುರಸಭೆ ಅಧ್ಯಕ್ಷೆ ಸುಧಾನಿರಂಜನ್ ಮತ್ತು ಉಪಾಧ್ಯಕ್ಷೆ ಭುವನಾ ದಿನೇಶ್ ಚಾಲನೆ ನೀಡಿದರು.
ಪುರಸಭೆ ಅಧ್ಯಕ್ಷೆ ಸುಧಾ ನಿರಂಜನ್ ಮಾತನಾಡಿ, ಆನೇಕಲ್ ಪಟ್ಟಣದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಸವಾಲಾಗಿದೆ. ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿದೆ. ಮುಖ್ಯ ರಸ್ತೆಗಳನ್ನು ದೂಳು ಮುಕ್ತ ರಸ್ತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವಚ್ಛತಾ ಯಂತ್ರಗಳಿಗೆ ಚಾಲನೆ ನೀಡಲಾಗಿದೆ ಎಂದರು.
ರಸ್ತೆ ಸ್ವಚ್ಛತೆಗಾಗಿ ಪುರಸಭೆಯ ಪೌರಕಾರ್ಮಿಕರು ಪ್ರತಿದಿನ ಬೆಳಗ್ಗೆ ಶ್ರಮವಹಿಸುತ್ತಿದ್ದರು. ಸ್ವಚ್ಛತಾ ಯಂತ್ರದಿಂದಾಗಿ ಪೌರಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ರಸ್ತೆಗಳಲ್ಲಿ ಧೂಳಿನಿಂದಾಗಿ ಸಂಚರಿಸುವುದು ಕಷ್ಟವಾಗಿತ್ತು. ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿತ್ತು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸ್ವಚ್ಛತಾ ಪರಿಕರಗಳನ್ನು ಖರೀದಿಸಲಾಗಿದೆ ಎಂದರು.
ದೂಳು ಮುಕ್ತ ಪುರಸಭೆಯನ್ನಾಗಿ ಮಾಡಲು ಹೆಚ್ಚಿನ ಗಮನ ವಹಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳ ಕಸವನ್ನು ಹಸಿ ಮತ್ತು ಒಣ ಕಸಗಳಾಗಿ ವಿಂಗಡಿಸಿ ಪುರಸಭೆ ವಾಹನಕ್ಕೆ ನೀಡಬೇಕು. ಪೌರಕಾರ್ಮಿಕರು ಪ್ರತಿದಿನ ಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರ ಶ್ರಮ ಶ್ಲಾಘನೀಯ ಎಂದರು.
ಪುರಸಭೆ ಉಪಾಧ್ಯಕ್ಷೆ ಭುವನಾ ದಿನೇಶ್ ಮಾತನಾಡಿ, ಆನೇಕಲ್ ದಸರಾ ನಮ್ಮೆಲ್ಲರ ಹೆಮ್ಮೆಯಾಗಿದೆ. ಪಟ್ಟಣದಲ್ಲಿ ನಡೆಯುವ ವೈಭವದ ದಸರಾ ಹಬ್ಬದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರಿಗೆ ದೂಳಿನ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗಿದೆ ಎಂದರು.
ಪುರಸಭೆ ಸದಸ್ಯ ಸುರೇಶ್ ಬಾಬು, ಮುಖ್ಯಾಧಿಕಾರಿ ಅಮರನಾಥ್, ಆರೋಗ್ಯ ನಿರೀಕ್ಷಕ ರಾಜಶೇಖರ್ ಇದ್ದರು.