ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಾಸಕ್ತಿ ಕಳೆದುಕೊಂಡ ಕಲಾವಿದರು’

ಕನ್ನಡ ದೀಪ ಕಾರ್ಯಕ್ರಮ
Last Updated 3 ಡಿಸೆಂಬರ್ 2020, 14:29 IST
ಅಕ್ಷರ ಗಾತ್ರ

ವಿಜಯಪುರ: ‘ಗ್ರಾಮೀಣ ರಂಗಭೂಮಿ ಇನ್ನೂ ತನ್ನ ಚೈತನ್ಯ ಕಳೆದುಕೊಂಡಿಲ್ಲ. ಆದರೆ ಕಲಾವಿದರು ರಂಗಾಸಕ್ತಿ ಕಳೆದುಕೊಂಡಿದ್ದಾರೆ’ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ತಿಳಿಸಿದರು.

ಪಟ್ಟಣದ ರಾಯಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಮಂಗಳವಾರ ಕನ್ನಡ ಕಲಾವಿದರ ಸಂಘದಿಂದ ಆಯೋಜಿಸಿದ್ದ ಕನ್ನಡ ದೀಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದೂರದರ್ಶನ ಮಾಧ್ಯಮಗಳಿಂದ ಗ್ರಾಮೀಣ ರಂಗಭೂಮಿ ಗ್ರಾಮೀಣ ಜನರಿಂದಲೇ ದೂರವಾಗಿದೆ. ಇದರ ಪುನಶ್ಚೇತನಕ್ಕೆ ಗ್ರಾಮೀಣ ಜನರೇ ಆಸಕ್ತಿ ತೋರಬೇಕು. ಗ್ರಾಮೀಣ ರಂಗ ಕಲೆಗಾಗಿ ಅನೇಕ ಮಂದಿ ನಾಟಕಕಾರರು ತಮ್ಮ ಕೊಡುಗೆ ನೀಡಿದ್ದಾರೆ. ರಂಗ ಕಲೆಯನ್ನು ವ್ಯಾಪಾರ ಮಾಡಿಕೊಳ್ಳದೆ, ಸಂತೃಪ್ತಿಗಾಗಿ ಕಲೆಯನ್ನು ಬೆಳೆಸುವ ಕೆಲಸವಾಗಬೇಕಾಗಿದೆ’ ಎಂದು ಅವರು ಹೇಳಿದರು.

‘ನಾಳೆಯ ಪೀಳಿಗೆಗೆ ರಂಗ ಕಲೆ ಜೀವಂತವಾಗಿ ಉಳಿಯಬೇಕು. ಪರದೆ ಮೇಲೆ ಬರುವ ನೃತ್ಯ ಪ್ರದರ್ಶನಗಳು ನೀಡುವ ಸುಖಕ್ಕಿಂತ ನೇರ ದೃಶ್ಯದಲ್ಲಿ ರಂಗದ ಅಭಿನಯವು ಹೃದಯ ಮತ್ತು ಮನಸ್ಸುಗಳಿಗೆ ಚೈತನ್ಯ ನೀಡುತ್ತದೆ. ಇದರ ಜೀವಂತಿಕೆ ಸಾಮಾಜಿಕ ಕಳಕಳಿಯೂ ಆಗಿದೆ’ ಎಂದ ಅವರು ನಾಟಕಕಾರ ಸಂಸ ಅವರ ಜೀವನ ಚರಿತ್ರೆಯ ಕುರಿತು ವಿವರಿಸಿದರು.

ಭಾರತೀಯ ಸೀನಿಯರ್ ಛೇಂಬರ್ ನ ಅಧ್ಯಕ್ಷ ವಿ.ಎನ್.ರಮೇಶ್ ಮಾತನಾಡಿ, ‘ಆಧುನಿಕತೆ ಮತ್ತು ದೃಶ್ಯ ಮಾಧ್ಯಮಗಳ ಹಾವಳಿಯಿಂದ ನಶಿಸಿಹೋಗುತ್ತಿರುವ ರಂಗಕಲೆಯನ್ನು ಜೀವಂತವಾಗಿಡಬೇಕು. ರಂಗಭೂಮಿ ಕಲೆ, ಕಲಾವಿದರನ್ನು ತಯಾರು ಮಾಡಿ ಅವರ ಪ್ರತಿಭೆ ಅನಾವರಣಗೊಳಿಸುವ ಮಹತ್ತರ ವೇದಿಕೆಯಾಗಿದೆ’ ಎಂದರು.

ಬಿ.ಎಸ್.ಎನ್.ಎಲ್. ನಾಮ ನಿರ್ದೇಶನ ಸದಸ್ಯ ಕನಕರಾಜು ಮಾತನಾಡಿ, ‘ರಂಗಭೂಮಿಗೆ ಎಲ್ಲಾ ರಂಗದ ದಿಗ್ಗಜರು ನೀಡಿರುವ ಕೊಡುಗೆಗಳು ಇಂದು ನೇಪಥ್ಯಕ್ಕೆ ಸರಿದಿವೆ’ ಎಂದರು.

ಎಂ.ವಿ.ನಾಯ್ಡು ಮತ್ತು ಗಾಯಕ ಮಹಾತ್ಮಾಂಜನೇಯ ಅವರ ತಂಡದಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಕಲಾವಿದ ಭಟ್ರೇನಹಳ್ಳಿ ನಾಗರಾಜ್ ಅವರನ್ನು ಸನ್ಮಾನಿಸಿದರು. ಕಲಾವಿದರಾದ ಬಿಜ್ಜವಾರ ಕೆಂಪಣ್ಣ, ಜೆ.ಆರ್.ಮುನಿವೀರಣ್ಣ, ಸುಭ್ರಮಣಿ, ನಾರಾಯಣಸ್ವಾಮಿ, ಸೀತಾರಾಮಯ್ಯ, ರವಿಕುಮಾರ್, ನಾಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT