ಬುಧವಾರ, ಆಗಸ್ಟ್ 10, 2022
23 °C
ವಿಜಯಪುರ: ಧಾರ್ಮಿಕ ಕೇಂದ್ರಗಳು ಖಾಲಿ, ಇತಿಮಿತಿ ನಡುವೆ ಪ್ರಾರ್ಥನೆ

ಬೆಂಗಳೂರು ಗ್ರಾಮಾಂತರ: ದೇಗುಲಗಳತ್ತ ಸುಳಿಯದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಎರಡೂವರೆ ತಿಂಗಳಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳು ಸೋಮವಾರದಿಂದ ಬಾಗಿಲು ತೆರೆಯಲು ಅವಕಾಶ ನೀಡಿದ್ದರೂ ದೇವಸ್ಥಾನಗಳಿಗೆ ಬರಲು ಭಕ್ತರು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಈ ಭಾಗದ ದೇವಾಲಯಗಳು ಭಣಗುಡುತ್ತಿವೆ.

ರಾಜ್ಯ ಸರ್ಕಾರ ನಿಗದಿಪಡಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸರ್ಕಾರ, ದೇವಾಲಯ ತೆರೆಯಲು ಅನುಮತಿ ನೀಡುತ್ತಿದ್ದಂತೆ ಬಹುತೇಕ ದೇವಾಲಯಗಳನ್ನು ಶುಚಿಗೊಳಿಸಿ, ಭಕ್ತರ ದರ್ಶನಕ್ಕೆ ಅಣಿಗೊಳಿಸುವ ಕಾರ್ಯಗಳು ನಡೆದವು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎ, ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲಿ ಮಾತ್ರ ದೇವರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಜನಸಂದಣಿ ಸೇರುವ ಉತ್ಸವಗಳಾದ ಬ್ರಹ್ಮ ರಥೋತ್ಸವ, ಜಾತ್ರೆ ಮುಂತಾದ ವಿಶೇಷ ಧಾರ್ಮಿಕ ಕೈಂಕರ್ಯಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಿದೆ.

ಹೋಟೆಲ್‌ ಮತ್ತು ದೇವಾಲಯಗಳಲ್ಲಿ ಕಡ್ಡಾಯವಾಗಿ ಅಂತರ ಕಾಪಾಡಬೇಕು. ಮಾಸ್ಕ್‌ ಧರಿಸಬೇಕು. ಎಲ್ಲ ಸ್ಥಳಗಳ ಪ್ರವೇಶದ್ವಾರದಲ್ಲಿ ಸ‍್ಯಾನಿಟೈಸರ್‌ ಇಡಬೇಕು. ಥರ್ಮಲ್‌ ಸ್ಕ್ಯಾನಿಂಗ್ ನಡೆಸಬೇಕು ಎಂಬ ಷರತ್ತು ವಿಧಿಸಲಾಗಿದೆ. ದೇವಾಲಯ, ಚರ್ಚ್‌, ಮಸೀದಿಗಳಲ್ಲಿ ಪವಿತ್ರ ಜಲ ಪ್ರೋಕ್ಷಣೆ ಮಾಡುವುದು ನಿಷೇಧಿಸಿದೆ. ಜತೆಗೆ ಭಕ್ತಾಧಿಗಳು ದೇವಾಲಯದ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕ್ಕಿ, ಧಾರ್ಮಿಕ ಗ್ರಂಥ, ಪುಸ್ತಕ ಮುಂತಾದವುಗಳನ್ನು ಮುಟ್ಟುವುದನ್ನು ನಿರ್ಬಂಧಿಸಿದೆ.

ಪೂಜೆಗೆ ಮೊದಲು ಮತ್ತು ನಂತರ ಕಡ್ಡಾಯವಾಗಿ ಸ್ಯಾನಿಟೈಸೇಶನ್‌ ಮಾಡಬೇಕು. ಚರ್ಚ್‌ನಿಂದ ಹೊರಗೆ ಅಭಿನಂದಿಸಲು ಮತ್ತು ಇತರ ಕಾರಣಗಳಿಗೆ ಹಸ್ತ ಲಾಘವ ಮಾಡುವುದು ಅಥವಾ ತಬ್ಬಿಕೊಳ್ಳುವುದನ್ನು ನಿಷೇಧಿಸಿದೆ. 65 ವಯಸ್ಸಿನ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇವಾಲಯ, ಚರ್ಚ್‌ಗಳಲ್ಲಿ ಗುಂಪು ಹಾಡುಗಾರಿಕೆ, ಸಂಗೀತ ಕಚೇರಿಗಳಿಗೆ ಅನುಮತಿ ನೀಡಿಲ್ಲ.‌

ಮಸೀದಿಗಳಲ್ಲಿ ಪ್ರಾರ್ಥನೆಗೆ ಸಮಯ ನಿಗದಿ ಮಾಡಿದ್ದು, ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಮುಂದುವರಿಸಲಾಗಿದೆ. ನಮಾಜ್‌ಗೆ ಮಸೀದಿ ಚಾಪೆ ಬಳಸದೇ ಮನೆಯಿಂದಲೇ ಒಯ್ದು, ವಾಪಸ್‌ ತೆಗೆದುಕೊಂಡು ಹೋಗುವಂತೆ ಷರತ್ತು ವಿಧಿಸಲಾಗಿದೆ. ಮಸೀದಿಯಲ್ಲಿ ಮದುವೆ ಮಾಡದಂತೆ ನಿರ್ಬಂಧಿಸಿದ್ದು, ಮಕ್ತಾದ್‌ ಮತ್ತು ಮದರಸಾ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಅಧ್ಯಯನಕ್ಕೆ ಅವಕಾಶ ಇಲ್ಲ. ಮಸೀದಿಗಳಲ್ಲಿ ಧಾರ್ಮಿಕ ಪಠಣ, ಚಿಂತನ ಮಂಥನ ಅವಕಾಶ ನೀಡಿಲ್ಲ. ಪರಸ್ಪರ ಆಲಿಂಗನ, ಹಸ್ತಲಾಘವ ಮಾಡದಂತೆ ಭಕ್ತರಿಗೆ ಷರತ್ತು ವಿಧಿಸಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ಗಳಿಗೂ ವಿವಿಧ ಷರತ್ತು ಬದ್ಧ ಅನುಮತಿ ನೀಡಿದೆ. ಪ್ರತಿ ಹೋಟೆಲ್‌ನಲ್ಲಿ ರೋಗಲಕ್ಷಣಗಳಿಲ್ಲದ ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕು ಎಂದು ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು