ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಗೋ ಹಬ್‌’ ಆಗಲಿದೆ ಬೆಂಗಳೂರು

Published 29 ಜುಲೈ 2023, 16:30 IST
Last Updated 29 ಜುಲೈ 2023, 16:30 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವೈಮಾನಿಕ ಸರಕು ಸಾಗಣೆ (ಕಾರ್ಗೊ) ನಿರ್ವಹಣೆ ಉಸ್ತುವಾರಿಯನ್ನು ಜಾಗತಿಕ ಮಟ್ಟದ ವೈಮಾನಿಕ ಸೇವೆಯಲ್ಲಿ ಹೆಸರುವಾಸಿಯಾಗಿರುವ ಲಂಡನ್‌ ಮೂಲದ ಮೆನ್ಜೀಸ್‌ ಏವಿಯೇಷನ್‌ ವಹಿಸಿಕೊಳ್ಳಲಿದೆ. 

ಈ ಸಂಬಂಧ ಮೆನ್ಜೀಸ್‌ ಏವಿಯೇಷನ್‌ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್‌) ಒಪ್ಪಂದಕ್ಕೆ ಸಹಿ ಹಾಕಿದ್ದು ಮೇ ಅಂತ್ಯದಲ್ಲಿ ಕಾರ್ಯಾಚರಣೆ ಆರಂಭಿಸಿದೆ. 

ಒಪ್ಪಂದದ ಪ್ರಕಾರ ಮುಂದಿನ 15 ವರ್ಷ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ಸೇವೆಯನ್ನು ಮೆನ್ಜೀಸ್‌ ಏವಿಯೇಷನ್‌ ನಿರ್ವಹಣೆ ಮಾಡಲಿದೆ. 

ವೈಮಾನಿಕ ಮಾರ್ಗದಲ್ಲಿ ದಕ್ಷಿಣ ಭಾರತಕ್ಕೆ ನೇರವಾಗಿ ಸರಕು ಸಾಗಣೆಗೆ ಸಂಬಂಧಿಸಿದಂತೆ ದೊಡ್ಡ ಯೋಜನೆ ಇದಾಗಿದೆ. ಇದರಿಂದಾಗಿ ಬೆಂಗಳೂರಿನ ವಿಮಾನ ನಿಲ್ದಾಣದವು ದಕ್ಷಿಣ ಮತ್ತು ಮಧ್ಯ ಭಾರತದ ಅತಿ ದೊಡ್ಡ ಸರಕು ಸಾಗಣೆ ಕೇಂದ್ರ (ಕಾರ್ಗೊ ಹಬ್‌) ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 

ವಾರ್ಷಿಕ 2.50 ಲಕ್ಷ ಟನ್‌ ಸರಕು ಸಾಗಣೆ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಆರಂಭಿಸಲಿರುವ ಮೆನ್ಜೀಸ್‌ ಏವಿಯೇಶನ್‌ ಮುಂದಿನ 15 ವರ್ಷಗಳಲ್ಲಿ ಅದನ್ನು ನಾಲ್ಕು ಲಕ್ಷ ಟನ್‌ಗೆ ವಿಸ್ತರಿಸುವ ಗುರಿ ಹೊಂದಿದೆ.

ಸರಕು ಸಾಗಣೆ (ಕಾರ್ಗೊ) ಸಾಮರ್ಥ್ಯ ಹೆಚ್ಚಳದೊಂದಿಗೆ ಬೆಂಗಳೂರು ದಕ್ಷಿಣ ಮತ್ತು ಮಧ್ಯ ಭಾರತದ ಸರಕು ಸಾಗಣೆ ಮುಂಚೂಣಿ ಕೇಂದ್ರವಾಗಲಿದೆ. ಅಲ್ಲದೇ, ರಫ್ತು, ಆಮದು ವಹಿವಾಟಿಗೆ ಉತ್ತೇಜನ ದೊರೆಯಲಿದೆ. ಸಾಕಷ್ಟು ಉದ್ಯೋಗ ಸೃಷ್ಟಿ ಮತ್ತು ಹೆಚ್ಚಿನ ವಹಿವಾಟು ಸಾಧ್ಯವಾಗಲಿದೆ.     

ದೇಶದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಸುಲಭವಾಗಿ ಸರಕು ಸಾಗಣೆ, ಆಮದು, ರಫ್ತು ವಲಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಭಾರತದ ಹೆಬ್ಬಾಗಿಲು ಆಗಲಿದೆ ಎಂದು ಮೆನ್ಜೀಸ್‌ ಏವಿಯೇಶನ್‌ ಸಂಸ್ಥೆಯ ಪ್ರಕಟಣೆ ಹೇಳಿದೆ. 25 ರಾಷ್ಟ್ರಗಳ ವಿಮಾನ ನಿಲ್ದಾಣಗಳ ಕಾರ್ಗೊ ಸೇವೆಯ ಉಸ್ತುವಾರಿಯನ್ನು ಈ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT