ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸೂಚನೆ

Published 2 ಜೂನ್ 2023, 14:48 IST
Last Updated 2 ಜೂನ್ 2023, 14:48 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೇ ನದಿ ಮೂಲ ಇಲ್ಲವಾದ್ದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಜಿಲ್ಲೆಯಲ್ಲಿರುವ ಕೆರೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ನಾಗರಕೆರೆ ನಿರ್ವಹಣೆ ಯೋಜನೆ ಮತ್ತು ಅರ್ಕಾವತಿ ಜಲಾನಯನದ ಸಂರಕ್ಷಣೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿನ ಕೆರೆಗಳ ಸಂರಕ್ಷಣೆಗೆ ಜಿಲ್ಲಾಡಳಿತವು ಕಾರ್ಯಪ್ರವೃತ್ತಿಯಾಗಿದೆ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ನಾಗರಕೆರೆ ನಿರ್ವಹಣಾ ಯೋಜನೆ ಅಡಿ ನಾಗರಕೆರೆಯನ್ನು ಸಂರಕ್ಷಿಸಲು ಜಿಲ್ಲಾಡಳಿತ ವತಿಯಿಂದ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ನಾಗರಕೆರೆಯು 20 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು ಕೆರೆಯ ಸುತ್ತಲೂ ಸಸಿಗಳನ್ನು ನೆಡಲಾಗಿದೆ. ಇನ್ನುಳಿದ ಭಾಗದಲ್ಲಿ ಮುಂದಿನ ದಿನಗಳಲ್ಲಿ ಸಸಿ ನೆಡಲು ಕ್ರಮ ವಹಿಸಲಾಗುವುದು. ಕೆರೆಯ ನೀರು ಕಲುಷಿತವಾಗದಂತೆ ತಡೆಯಲು ಹಾಗೂ ಕೆರೆಗೆ ಕೊಳಚೆ ನೀರು ತಲುಪದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆರೆಯಲ್ಲಿ ಬೆಳೆದು ನಿಂತಿರುವ ಕಳೆಯನ್ನು ತೆಗೆಯಲು ಅಗತ್ಯ ಕ್ರಮ ವಹಿಸಿ ಕೆರೆ ಸುತ್ತಲೂ ಬೇಲಿ ನಿರ್ಮಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ, ಅವರು, ಡಬ್ಲ್ಯೂಡಬ್ಲ್ಯೂಎಫ್ (ವಲ್ಡ್‌ ವೈಡ್‌ ಫಂಡ್‌ ಫಾರ್ ನೇಚರ್‌) ಸಂಸ್ಥೆಯು ಬಿಲ್ಡಿಂಗ್‌ ಕಮ್ಯುನಿಟಿ  ರೆಸಿಲೆ ಥ್ರೂ ನೇಚರ್ ಬೇಸ್ಡ್ ಸೆಲ್ಯೂಷನ್ಸ್‌ ಎಂಬ ಸಂಶೋಧನೆ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗರಕೆರೆಯನ್ನು ಸಂರಕ್ಷಿಸಲು ಯೋಜನೆ ರೂಪಿಸಿದೆ ಎಂದು ಮಾಹಿತಿ ನೀಡಿದರು.

ಕೆರೆ ನೀರಿನ ಗುಣಮಟ್ಟ ಹಾಗೂ ಕೆರೆ ನೀರು ಕಲುಷಿತಗೊಳ್ಳುವುದನ್ನು ತಪ್ಪಿಸಲು ಸಂಸ್ಥೆಯು ಕೆಲವು ಅಂಶಗಳನ್ನು ಪ್ರಸ್ತಾಪಿಸಿದೆ. ತ್ಯಾಜ್ಯ ನಿರ್ವಹಣೆ, ನೀರಿನ ಹರಿವು ತಿಳಿಯುವ ಬಗೆ, ನೀರಿನ ಗುಣಮಟ್ಟ ಕಾಪಾಡುವಿಕೆಗೆ ಫ್ಲೋಟಿಂಗ್ ಫೌಂಟೇನ್ ಅಳವಡಿಕೆ. ಸ್ಥಳೀಯ ಮರಗಳ ಬೆಳವಣಿಗೆಗೆ ಉತ್ತೇಜನ. ಕೆರೆಯಲ್ಲಿನ ಕಳೆ ನಾಶಪಡಿಸಲು ಕ್ರಮ ಕೈಗೊಳ್ಳುವುದು. ಕೆರೆಗೆ ಬರುವ ನೀರಿನ ಪ್ರಮಾಣ ಹೆಚ್ಚಿಸಲು ರಾಜಕಾಲುವೆ ಸ್ವಚ್ಛಗೊಳಿಸುವುದು ಸೇರಿದಂತೆ ಕೆರೆ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆ ಅವರು ತಿಳಿಸಿ ಜಿಲ್ಲಾಡಳಿದ ಸಹಕಾರ ಕೋರಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸಹಮತ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ, ಹಿರಿಯ ಭೂ ವಿಜ್ಞಾನಿ ಪಲ್ಲವಿ, ಡಬ್ಲ್ಯೂಡಬ್ಲ್ಯೂಎಫ್‌ನ ಕೆರೆ ಸಂರಕ್ಷಣಾ ಸಹಾಯಕ ನಿರ್ದೇಶಕ ಡಾ. ಅಮಿತ್ ದುಬೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT