ವಿಜಯಪುರ (ದೇವನಹಳ್ಳಿ): ಮಂಡಿಬೆಲೆ ರಸ್ತೆಯ ಚನ್ನರಾಯಪ್ಪ ಬಡಾವಣೆಯ ಮನೆಯೊಂದರ ಬಾಕಿ ವಿದ್ಯುತ್ ಬಿಲ್ ಕೇಳಲು ಹೋಗಿದ್ದ ಬೆಸ್ಕಾಂ ನೌಕರನ ಮೇಲೆ ಭಾನುವಾರ ಹಲ್ಲೆ ನಡೆದಿದೆ.
ಹಲ್ಲೆಗೊಳಗಾದ ಬೆಸ್ಕಾಂ ನೌಕರ ತೌಸೀಫ್ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಶಿವಮೂರ್ತಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತೌಸೀಫ್, ‘ಮಂಡಿಬೆಲೆ ರಸ್ತೆಯಲ್ಲಿರುವ ಚನ್ನರಾಯಪ್ಪ ಬಡಾವಣೆಯಲ್ಲಿ ವಿದ್ಯುತ್ ಬಿಲ್ ವಸೂಲಿ ಮಾಡುವ ವೇಳೆ ನೀಲಮ್ಮ ಎಂಬುವವರ ಮನೆ ಆವರಣದಲ್ಲಿ ನಾಯಿ ಇದ್ದ ಕಾರಣ ಹೊರಗಿನಿಂದ ಕೂಗಿದೆ. ಆಗ ಶಿವಮೂರ್ತಿ ಅವರು ಮನೆಯ ಆವರಣದೊಳಗೆ ಬಂದು ಕರೆಯಬೇಕು. ರಸ್ತೆಯಲ್ಲಿ ನಿಂತು ಕರೆದು ನಮ್ಮ ಮರ್ಯಾದೆ ತೆಗೆಯುತ್ತಿದ್ದೀರಿ ಎಂದು ಏರುಧ್ವನಿಯಲ್ಲಿ ಮಾತನಾಡಿದರು’ ಎಂದು ತಿಳಿಸಿದರು. ‘ಅವ್ಯಾಚ ಶಬ್ದಗಳಿಂದ ನಿಂದಿಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ದೂರಿದ್ದಾರೆ.
ಖಂಡನೆ: ಬೆಸ್ಕಾಂ ನೌಕರರ ಮೇಲಿನ ಹಲ್ಲೆಯನ್ನು ಬೆಸ್ಕಾಂ ಸಿಬ್ಬಂದಿ ಖಂಡಿಸಿದ್ದಾರೆ.
ಹಲ್ಲೆ ನಡೆದಿಲ್ಲ: ಹಲ್ಲೆ ನಡೆಸಿದ್ದಾರೆ ಎನ್ನಲಾದ ಶಿವಮೂರ್ತಿ ಅವರ ಸಂಬಂಧಿಯೊಬ್ಬರು ಮಾತನಾಡಿ, ‘ವಿದ್ಯುತ್ ಪಾವತಿಸುವಂತೆ ಬೆಸ್ಕಾಂ ನೌಕರ, ರಸ್ತೆಯಲ್ಲಿ ನಿಂತು, ಬಿಲ್ ಕಟ್ಟಲು ಯೋಗ್ಯತೆ ಇಲ್ಲದೇ ಹೋದರೆ, ಏಕೆ ವಿದ್ಯುತ್ ಬಳಸಬೇಕು ಎಂದು ಮಾತನಾಡಿದ್ದರಿಂದ ಬೇಸರವಾಗಿ ಆತತನ್ನು ತಳ್ಳಿದ್ದಾರೆಯೇ ಹೊರತು. ಹಲ್ಲೆ ನಡೆಸಿಲ್ಲ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.