ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಬಯೋಫ್ಲೋಕ್‌ ಮೀನು ಕೃಷಿ

ಜಿಲ್ಲೆಯ ಮೂವರು ಮಹಿಳೆಯ ಯಶೋಗಾಥೆ
Last Updated 24 ನವೆಂಬರ್ 2022, 4:44 IST
ಅಕ್ಷರ ಗಾತ್ರ

ದೇವನಹಳ್ಳಿ: ಮೀನುಗಾರಿಕೆಯಲ್ಲಿ ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಮೀನುಗಾರರ ಬದುಕಿನಲ್ಲಿ ಸಾಮಾಜಿಕ, ಆರ್ಥಿಕ ಬದಲಾವಣೆ ತರಲು ಜಾರಿಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ.

ಹೊಸಕೋಟೆ ತಾಲ್ಲೂಕಿನ ಹೆಮ್ಮಂಡನಹಳ್ಳಿ ಮಹಿಳಾ ಮೀನುಗಾರರೊಬ್ಬರು ಸುಮಾರು ಅರ್ಧ ಎಕರೆ ಜಮೀನಿನಲ್ಲಿ ಜೈವಿಕ ಕೊಳ ನಿರ್ಮಿಸಿಕೊಂಡು ಬಯೋಫ್ಲೋಕ್‌ ವಿಧಾನದಡಿ ಮೀನುಗಾರಿಕೆ ಮಾಡಲು ಮುಂದಾಗಿದ್ದಾರೆ. ಹೆಮ್ಮಂಡನಹಳ್ಳಿಯ ಭೈರಮ್ಮ ಕೃಷ್ಣಪ್ಪ ತಲಾ 10 ಗುಂಟೆಗಳ ಎರಡು ಘಟಕ ನಿರ್ಮಿಸಿಕೊಂಡು ಮೀನು ಕೃಷಿ ಮಾಡುತ್ತಿದ್ದಾರೆ. ಈಗಾಗಲೇ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಸೌಭಾಗ್ಯ ಆನಂದ ಎಂಬುವರು ಈ ಪ್ರಯತ್ನದಲ್ಲಿ ಯಶಸ್ಸನ್ನೂ ಕಂಡಿದ್ದಾರೆ.

ಮತ್ಸ್ಯ ಸಂಪದ ಯೋಜನೆಯು ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗಾಗಿ ರೂಪುಗೊಂಡಿದೆ. ರಾಷ್ಟ್ರೀಯ ಸೂಚ್ಯಂಕದಲ್ಲಿ ಮೀನುಗಾರಿಕೆಯ ಬೆಳವಣಿಗೆ ದರ ಹೆಚ್ಚಿಸಲು ಸರ್ಕಾರ ವಿಶೇಷ ಕ್ರಮವಹಿಸಿದೆ.

ಮೀನುಗಾರರ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆ ವಿಸ್ತಾರ, ಬಡತನ ನಿವಾರಣೆಯು ಪ್ರಮುಖ ಧ್ಯೇಯಗಳಾಗಿವೆ. ಜಲಚರಗಳ ಪೋಷಣೆಗಾಗಿ ಹೊಸ ಕೊಳಗಳ ನಿರ್ಮಾಣ, ಅಲಂಕಾರಿಕ ಮೀನು‌ ಸಾಗಣೆ ಮತ್ತು ಮಾರಾಟ, ಬಯೋಫ್ಲೋಕ್ ಘಟಕ, ಶೈತ್ಯಾಗಾರ ಘಟಕ, ದ್ವಿಚಕ್ರವಾಹನ ಸೌಕರ್ಯ, ಮೀನು ಮೌಲ್ಯವರ್ಧನೆ ಘಟಕಗಳಿಗೆ ನೆರವು ನೀಡಲಾಗುತ್ತಿದೆ.

ಸಾಮಾನ್ಯವಾಗಿ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಒಂದು ಕೆ.ಜಿ ಮೀನು ಬೆಳೆಸಲು ಸುಮಾರು 1.5 ಕೆ.ಜಿ.ಯಿಂದ 2 ಕೆ.ಜಿವರೆಗೆ ಕೃತಕ ಆಹಾರದ ಅವಶ್ಯಕತೆ ಇರುತ್ತದೆ. ಆದರೆ, ಬಯೋಫ್ಲೋಕ್ ತಂತ್ರಜ್ಞಾನದಲ್ಲಿ ಕೃತಕ ಆಹಾರದ ಬಳಕೆ ಶೇ. 30ರವರೆಗೆ ಕಡಿಮೆಯಾಗುತ್ತದೆ.

ಸಾಂಪ್ರದಾಯಿಕ ಜಲಕೃಷಿಯಲ್ಲಿ ನೀರಿನ ವಿನಿಮಯವು ಆಗಾಗ್ಗೆ ಅಗತ್ಯವಿರುತ್ತದೆ. ಇದರ ಪರಿಣಾಮ ನೀರು ವ್ಯರ್ಥವಾಗುತ್ತದೆ. ದೊಡ್ಡ ಪ್ರಮಾಣದ ವೆಚ್ಚ ಭರಿಸುವ ಸಂಭವವಿರುತ್ತದೆ. ಬಯೋಫ್ಲೋಕ್ ತಂತಜ್ಞಾನ ಅಳವಡಿಕೆಯಿಂದ ನೀರನ್ನು ವಿನಿಮಯ ಮಾಡುವ ಅಗತ್ಯ ಕಡಿಮೆಯಾಗುತ್ತದೆ.

‘ಮತ್ಸ್ಯ ಸಂಪದ ಯೋಜನೆಯಡಿ ಬಯೋಫ್ಲೋಕ್ ಜೈವಿಕ ಕೊಳ ನಿರ್ಮಿಸಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಯೋಜನಾ ವೆಚ್ಚದ ಅನುಪಾತಕ್ಕೆ ಅನುಗುಣವಾಗಿ ಆರ್ಥಿಕ ನೆರವು ಲಭಿಸಲಿದೆ. ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀನುಗಾರರಿಗೆ ಶೇ 60 ಮತ್ತು ಸಾಮಾನ್ಯ ವರ್ಗದವರಿಗೆ ಶೇ 40ರಷ್ಟು ಸಹಾಯಧನ ಸೌಲಭ್ಯ ಉಂಟು. ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಈ ಯೋಜನೆಯ ಸಹಕಾರಿಯಾಗಿದೆ’ ಎನ್ನುತ್ತಾರೆ ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ನಾಗರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT