ಎಂ.ಮುನಿನಾರಾಯಣ.
ವಿಜಯಪುರ (ದೇವನಹಳ್ಳಿ): ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಮೊಟ್ಟೆ ಬೆಲೆ ಗಗನಕ್ಕೇರಿದ್ದು ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವುದು ಶಿಕ್ಷಕರಿಗೆ ಸವಾಲು ಆಗಿದೆ.
ಶಾಲೆಯಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಒಬ್ಬ ವಿದ್ಯಾರ್ಥಿ ₹6 ಸಹಾಯಧನ ನಿಗದಿಪಡಿಸಲಾಗಿದೆ. ಆದರೆ, ಅಂಗಡಿಯಲ್ಲಿ ಒಂದು ಮೊಟ್ಟೆ ₹6.80 ಕ್ಕೆ ಮಾರಾಟವಾಗುತ್ತಿದೆ. ಹಾಗಾಗಿ ಬಿಸಿಯೂಟ ಮಾಡಿಸುತ್ತಿರುವ ಶಿಕ್ಷಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ತಾಲ್ಲೂಕಿನಲ್ಲಿ 235 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಟ್ಟು 13.390 ಮಂದಿ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಫಲಾನುಭವಿಗಳಾಗಿದ್ದಾರೆ. 1-5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಬ್ಬ ವಿದ್ಯಾರ್ಥಿಗೆ ಸಾಂಬಾರು ಪದಾರ್ಥ, ಉಪ್ಪು, ತರಕಾರಿ ಖರೀದಿಗಾಗಿ ₹1.93, 6-10ನೇ ತರಗತಿಯ ವಿದ್ಯಾರ್ಥಿಗಳಿಗೆ ₹2.89 ಸರ್ಕಾರ ನೀಡುತ್ತಿದೆ.
ತರಕಾರಿ ಬೆಲೆಯು ಏರಿಕೆಯಾಗಿದ್ದು, ಸರ್ಕಾರ ನೀಡುವ ಅನುದಾನದಲ್ಲಿ ತರಕಾರಿ ಖರೀದಿಸಲು ಸಾಧ್ಯವಾಗದೆ ತಮ್ಮ ಜೇಬಿನಿಂದ ಹಣ ವೆಚ್ಚ ಮಾಡಿ ಶಿಕ್ಷಕರು ತರಕಾರಿ ಖರೀದಿಸುತ್ತಿದ್ದಾರೆ.
ಸರ್ಕಾರ, ಅಕ್ಷರ ದಾಸೋಹ ಇಲಾಖೆಯ ಮೂಲಕ ಬಿಸಿಯೂಟಕ್ಕಾಗಿ ಅಕ್ಕಿ, ಬೇಳೆ, ಅಡುಗೆ ಅನಿಲ, ಗೋಧಿ, ಎಣ್ಣೆ, ಸರಬರಾಜು ಮಾಡುತ್ತಿದೆ. ಇನ್ನು ಉಳಿದಂತೆ ಸಾಂಬಾರು ಪದಾರ್ಥಗಳು, ಉಪ್ಪು, ತರಕಾರಿ ಶಾಲೆಯವರೇ ಖರೀದಿಸಬೇಕಾಗಿದೆ. ಈಗಿನ ಬೆಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಸರಾಸರಿ ₹ 4 ಖರ್ಚಾಗುತ್ತಿದ್ದು, ಹೆಚ್ಚುವರಿ ₹1.20 ಶಿಕ್ಷಕರಿಗೆ ಹೊರೆಯಾಗುತ್ತಿದೆ ಎಂಬುದು ಶಾಲಾಭಿವೃದ್ಧಿ ಸಮಿತಿಯ ಸದಸ್ಯರ ಮಾತಾಗಿದೆ.
ಸರ್ಕಾರ ಮಕ್ಕಳಿಗೆ ಬಿಸಿಯೂಟ ಕೊಡುತ್ತಿದೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಸರ್ಕಾರ ನೀಡುವ ಅನುದಾನ ಏರಿಕೆಯಾಗದೆ ಶಿಕ್ಷಕರು ಯಾವ ರೀತಿ ನಿಬಾಯಿಸುತ್ತಾರೆ. ಅವರ ಜೇಬಿಂದ ಎಷ್ಟು ದಿನ ಖರ್ಚು ಮಾಡಲು ಸಾಧ್ಯ. ಹಾಗಾಗಿ ಅನುದಾನ ಹೆಚ್ಚಳ ಮಾಡಬೇಕೆಂಬುದು ಪೋಷಕಿ ನಳಿನಾಕ್ಷಿ ಅವರ ಮಾತಾಗಿದೆ.
ತರಕಾರಿಗಳ ಬೆಲೆ ಏರಿಕೆಯಾಗಿರುವುದರಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಕಾರಿ ಒದಗಿಸಲಾಗುತ್ತಿಲ್ಲ. ಇರುವುದರಲ್ಲೇ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜುಹವಳೇಕರ್ ತಿಳಿಸಿದರು.
ಈ ವರ್ಷದ ದಾಖಲಾತಿ ಚಿತ್ರಣ ಸಿಗಲಿ
ಪ್ರಸ್ತುತ ಸರ್ಕಾರದಿಂದ ನಮಗೆ ಬಿಡುಗಡೆಯಾಗುವ ಅನುದಾನವನ್ನು ಆಯಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕರ ಜಂಟಿ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಬಿಸಿಯೂಟಕ್ಕೆ ನೀಡುವ ದರವೂ ಹೊಸದಾಗಿ ಪರಿಷ್ಕರಣೆಯಾಗಿದೆ. ಈ ವರ್ಷದಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಸಂಪೂರ್ಣ ಅಂಕಿ ಅಂಶಗಳ ಚಿತ್ರಣ ದೊರೆತರೆ ಉತ್ತಮ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸುಧಾ ಸಹಾಯಕ ನಿರ್ದೇಶಕಿ ಅಕ್ಷರ ದಾಸೋಹ ದೇವನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.