ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಶಾಂತಿ ಕದಡುವ ಬಿಜೆಪಿ: ಶಾಸಕ ಬಿ.ಶಿವಣ್ಣ

Published 29 ಏಪ್ರಿಲ್ 2024, 4:34 IST
Last Updated 29 ಏಪ್ರಿಲ್ 2024, 4:34 IST
ಅಕ್ಷರ ಗಾತ್ರ

ಆನೇಕಲ್ : ಚುನಾವಣೆ ಸಂದರ್ಭದಲ್ಲಿ ಸಣ್ಣಪುಟ್ಟ ಗಲಾಟೆ, ವಾಗ್ವಾದ ನಡೆಯುತ್ತವೆ. ಚುನಾವಣೆಯ ನಂತರ ಪರಸ್ಪರ ಸಹೋದರರಂತೆ ಇರುವುದು ಎಲ್ಲಾ ಗ್ರಾಮಗಳಲ್ಲಿಯೂ ಕಂಡು ಬರುತ್ತದೆ. ಆದರೆ ಸರ್ಜಾಪುರದಲ್ಲಿ ನಡೆದ ಸಣ್ಣ ಘಟನೆಯನ್ನು ರಾಜಕೀಯ ಉದ್ದೇಶದಿಂದ ದೊಡ್ಡದಾಗಿ ಬಿಂಬಿಸುತ್ತಿರುವುದು ಬಿಜೆಪಿಗೆ ಶೋಭೆ ತರುವುದಿಲ್ಲ ಎಂದು ಆನೇಕಲ್‌ ಶಾಸಕ ಬಿ.ಶಿವಣ್ಣ ಹೇಳಿದರು.

ತಾಲ್ಲೂಕಿನ ಚಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಜಾಪುರದಲ್ಲಿ ಏಪ್ರಿಲ್‌ 26ರಂದು ಚುನಾವಣೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಕಾಂಗ್ರೆಸ್‌ ಕಾರ್ಯಕರ್ತರಾದ ಮಧು ಮತ್ತು ಆಂಜಿನಪ್ಪ ಮಹಿಳಾ ಮತದಾರರಿಗೆ ಮತಗಟ್ಟೆಗೆ ಮಾರ್ಗವನ್ನು ತೋರಿಸುತ್ತಿದ್ದಾಗ ಬಿಜೆಪಿಯ ಕೆಲ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್‌ ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಆಗ ಕೆಲವು ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆದಿತ್ತು. ನಂತರ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಮತಗಟ್ಟೆಯ ಸಮೀಪವೇ ಸಂಜೆ 6ಗಂಟೆಯವರೆಗೂ ಹಲ್ಲೆಗೊಳಗಿದ್ದಾರೆ ಎಂದು ಹೇಳಲಾಗಿರುವ ಜಯಪ್ರಕಾಶ್‌ ಸಹ ಇದ್ದರು. 6 ಗಂಟೆಯ ನಂತರ ಬಿಜೆಪಿಯ ಕಾನೂನು ವಿಭಾಗದವರು ಸರ್ಜಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದರು.

ಸಣ್ಣ ಘಟನೆಯನ್ನು ದೊಡ್ಡ ಘಟನೆ ಎಂಬಂತೆ ಬಿಂಬಿಸಿ ರಾಜ್ಯದ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆನೇಕಲ್‌ ತಾಲ್ಲೂಕಿನಲ್ಲಿ ಎಲ್ಲಾ ಸಮುದಾಯದವರು ಸಹೋದರಂತಿದ್ದಾರೆ. ಎಲ್ಲಾ ಪಕ್ಷಗಳಲ್ಲಿಯೂ ಸ್ನೇಹಿತರಿದ್ದಾರೆ. ಆದರೆ ಇಂತಹ ಸನ್ನಿವೇಶದಲ್ಲಿ ಬಿಜೆಪಿ ತಾಲ್ಲೂಕಿನ ಶಾಂತಿ ಕದಡುವ ಯತ್ನ ನಡೆಸುತ್ತಿದೆ ಎಂದು ಶಾಸಕ ಬಿ.ಶಿವಣ್ಣ ಆರೋಪಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ.ಆರ್.ಮನೋಹರ್ ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ದೊಡ್ಡಹಾಗಡೆ ಹರೀಶ್‌, ರಘುಪತಿರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT