ಬುಧವಾರ, ಫೆಬ್ರವರಿ 19, 2020
27 °C

ವಿಜೃಂಭಣೆಯ ಶ್ರೀಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ದ ಶ್ರೀಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ನಗರದ ತೇರಿನ ಬೀದಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರದ್ಧಾ ಭಕ್ತಿಗಳಿಂದ ರಥಕ್ಕೆ ಹಣ್ಣು ದವನ ಅರ್ಪಿಸಿದರು.

ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಕಲ್ಯಾಣೋತ್ಸವ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ರಥೋತ್ಸವದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಉಪವಿಭಾಗಾಕಾರಿ ಸಿ.ಮಂಜುನಾಥ್, ತಹಶೀಲ್ದಾರ್ ಟಿ.ಎಸ್.ಶಿವರಾಜ್ ಇದ್ದರು.

ಇಲ್ಲಿನ ಶ್ರೀಪ್ರಸನ್ನ ಆಂಜನೇಯಸ್ವಾಮಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಪ್ರಸಾದ ವಿತರಣೆ, ಶ್ರೀಶ್ರೀಕಂಠೇಶ್ವರಸ್ವಾಮಿ ಭಕ್ತ ಮಂಡಳಿಯಿಂದ, ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರ ಸ್ಮರಣಾರ್ಥ ನಗರದ ದೇವಾಂಗ ಮಂಡಳಿಯಲ್ಲಿ ಅರವಟಿಗೆ, ಬಿಸಿಲಹಳ್ಳಿ ಚಿಕ್ಕಚೌಡಪ್ಪನವರ ಭಜನಾ ಮಂಡಳಿ ಸೇರಿದಂತೆ ವಿವಿಧ ಮಂಡಳಿಗಳಿಂದ ಅರವಟಿಕೆ ಏರ್ಪಡಿಸಲಾಗಿತ್ತು.

ಬ್ರಹ್ಮರಥೋತ್ಸವದ ಅಂಗವಾಗಿ ಡಿವೈಎಫ್‍ಐ ತಾಲ್ಲೂಕು ಸಮಿತಿ ವತಿಯಿಂದ, ಸಾಹಿತ್ಯಾಭಿರುಚಿ ಬೆಳೆಸುವ ನಿಟ್ಟಿನಲ್ಲಿ ಪುಸ್ತಕ ಸಂತೆ- ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ತೇರಿನ ಬೀದಿ ವೃತ್ತದ ಚಿಕ್ಕತುಮಕೂರು ರಸ್ತೆ ಸಮೀಪ ಏರ್ಪಡಿಸಲಾಗಿತ್ತು.

ಫೆ. 11 ರಂದು ಹಗಲು ಪರಿಷೆ ನಡೆಯಲಿದೆ. ಮಾರ್ಚ್ 25ರವರೆಗೆ ಪ್ರಾಕಾರೋತ್ಸವಗಳು ನಡೆಯಲಿವೆ. ಫೆ.11ರಂದು : ಪುತ್ಥಳಿ ಬೊಂಬೆ ಪ್ರದರ್ಶನ -ಸಮಾರೋಪ ಸಮಾರಂಭ: ಫೆ.11 ರಂದು ರಾತ್ರಿ 7.30 ಗಂಟೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಿಸಿರುವ ಪುತ್ಥಳಿ ಬೊಂಬೆ ಪ್ರದರ್ಶನವನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನೆಲ್ಲಿಗೆರೆಯ ಯುವಜನ ಯಕ್ಷಗಾನ ಮಂಡಳಿಯ ವತಿಯಿಂದ ಶ್ರೀ.ಎನ್.ಟಿ.ಮೂರ್ತಾಚಾರ್ಯ ನೆಲ್ಲಿಗೆರೆ ಭಾಗವತರ ನೇತೃತ್ವದ ಭಕ್ತ ಮಾರ್ಕಂಡೇಯ ಯಕ್ಷಗಾನ ಬೊಂಬೆಯಾಟ ಪ್ರಸಂಗ ನಡೆಯಲಿದೆ.

ಸಮಾರೋಪ ಸಮಾರಂದಲ್ಲಿ ಬಿಜೆಪಿ ಮುಖಂಡರಾದ ಕೆ.ಬಿ.ಮುದ್ದಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ಶ್ರೀರಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್, ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ಆಡಳಿತ ವ್ಯವಸ್ಥಾಪಕ ಎಂ.ಎಸ್.ಮಂಜುನಾಥ್, ಮುಖಂಡರಾದ ಎನ್‌.ಹನುಮಂತೇಗೌಡ, ಎಂ.ಮಲ್ಲೇಶ್, ಆರ್.ಕೆಂಪರಾಜ್, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಟಿ.ಎನ್.ನಾಗರಾಜು, ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಭಾಗವಹಿಸಲಿದ್ದಾರೆ.

ರಾತ್ರಿ 9.30ಕ್ಕೆ ಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು