ಶನಿವಾರ, ಸೆಪ್ಟೆಂಬರ್ 18, 2021
27 °C
ವಿಜಯಪುರದಲ್ಲಿ ‘ಪರಿವರ್ತನೆ 2019 ಬೇಸಿಗೆ ಶಿಬಿರ’ ಸಮಾರೋಪ ಸಮಾರಂಭ

‘ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮಾಹಿತಿ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿರುವ ಸಮಾಜಕ್ಕೆ ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ಅವರನ್ನು ಸಜ್ಜನರನ್ನಾಗಿ ಮಾಡದಿದ್ದರೆ ಭವಿಷ್ಯ ಕರಾಳವಾಗಿರುತ್ತದೆ ಎಂದು ಸಾಹಿತಿ ಡಾ.ವಿ.ಎನ್.ರಮೇಶ್ ಹೇಳಿದರು.

ಇಲ್ಲಿನ ಶೃಂಗೇರಿ ಶಾರದಾ ವಿದ್ಯಾಸಂಸ್ಥೆಯ ಆವರಣದಲ್ಲಿ ವೆಂಕಟಮ್ಮ ವಿ.ಆರ್.ನಾರಾಯಣಪ್ಪ ಸೇವಾ ಪ್ರತಿಷ್ಠಾನ, ಜೇಸಿಐ ವಿಜಯಪುರ ಹಾಗೂ ಚೈತನ್ಯ ಯೋಗಿ ಆಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ‘ಪರಿವರ್ತನೆ 2019 ಬೇಸಿಗೆ ಶಿಬಿರ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭವಿಷ್ಯದ ಕುರಿತು ಚಿಂತಿಸುವ ನಾವು, ಭವಿಷ್ಯದ ಪ್ರಜೆಗಳ ಬಗ್ಗೆ ಅಸಡ್ಡೆ ಮನೋಭಾವನೆ ತೋರುವುದು ಉಚಿತವಲ್ಲ. ಮಕ್ಕಳಲ್ಲಿ ಸಮಯ ಸ್ಫೂರ್ತಿ, ಉತ್ತಮ ಸಂಸ್ಕಾರ, ಗುರುಹಿರಿಯರ ಬಗ್ಗೆ ಗೌರವ ಭಾವನೆಯನ್ನು ಮೂಡಿಸುವುದು ನಮ್ಮ ಕರ್ತವ್ಯವಾಗಬೇಕು. ಇದನ್ನೇ ಶಿಕ್ಷಣ ಸಂಸ್ಥೆಗಳು ಕೂಡ ಜವಾಬ್ದಾರಿಯುತವಾಗಿ ಮಾಡಬೇಕಾಗಿದೆ. ಪರಿವರ್ತನೆ 2019ರ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ತರಬೇತಿ ಕಾರ್ಯಾಗಾರಗಳು ಹೆಚ್ಚು ನಡೆಯಬೇಕು. ಆಗ ಮಾತ್ರ ಉತ್ತಮ ಪ್ರತಿಭೆಗಳು ಹೊರ ಬರಲು ಸಾಧ್ಯ’ ಎಂದರು.

ಜೇಸಿಐ ವಲಯ 14ರ ಉಪಾಧ್ಯಕ್ಷ ಲೋಹಿತ್ ಮಾತನಾಡಿ, ‘ಸಮಾಜದಲ್ಲಿನ ಬಹುಮುಖಿ ಸಂಪ್ರದಾಯಗಳು, ಚಿಂತನೆಗಳು, ಅಭಿವೃದ್ಧಿ ಪರವಾದ ನಿಲುವುಗಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿಕೊಂಡು ಹೋಗಬೇಕಾಗಿರುವ ನಾಯಕತ್ವದ ಕೊರತೆ ಕಾಡದಂತೆ ಮಾಡಬೇಕಾಗಿರುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನಮ್ಮ ಮಕ್ಕಳು ವೈದ್ಯರಾಗಬೇಕು, ಐಎಎಸ್ ಅಧಿಕಾರಿಗಳಾಗಬೇಕು, ಕೆಎಎಸ್ ಮಾಡಬೇಕು, ಎನ್ನುವ ಹಲವಾರು ಚಿಂತನೆಗಳನ್ನು ಇಟ್ಟುಕೊಂಡಿರುವ ಪೋಷಕರಲ್ಲಿ ಸಮಾಜದ ಸೇವೆಗಿಂತ ಹಣ ಸಂಪಾದನೆ ಮಾಡಬೇಕೆಂಬ ಬಯಕೆ ಹೆಚ್ಚಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜೇಸಿಐ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ‘ಮಕ್ಕಳಲ್ಲಿ ಏನೆಲ್ಲ ಪ್ರತಿಭೆಗಳಿವೆ ಎನ್ನುವುದನ್ನು ಪೋಷಕರೂ ತಿಳಿದುಕೊಂಡು ಮಕ್ಕಳ ಆಸಕ್ತಿಯ ವಿಷಯವನ್ನು ಪ್ರೋತ್ಸಾಹಿಸಬೇಕು’ ಎಂದರು.

ಭಾರತೀಯ ಸೀನಿಯರ್ ಛೇಂಬರ್ ವಿಜಯಪುರ ಲೀಜನ್ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ, ಪ್ರಭಂಜನ ಎಜುಕೇಷನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಚಂದ್ರಮುಖಿ ರಮೇಶ್, ಆರ್.ಮುನಿರಾಜು, ಜೆ.ಆರ್.ಮುನಿವೀರಣ್ಣ, ಶಿಕ್ಷಣ ಸಂಯೋಜಕಿ ಬಿ.ಉಮಾದೇವಿ, ಟಿ.ಅಗ್ರಹಾರ ನಾರಾಯಣಸ್ವಾಮಿ, ಮುಖ್ಯ ಶಿಕ್ಷಕಿ ಅರ್ಚನಾ, ಶಿಕ್ಷಕ ಮುನಿಕೃಷ್ಣಪ್ಪ, ರಮ್ಯಶ್ರೀ, ಚಂದ್ರಿಕಾ, ಅಮೃತ, ರಾಮಚಂದ್ರಪ್ಪ, ವಿಜಯಲಕ್ಷ್ಮೀ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.