ಮಂಗಳವಾರ, ಜನವರಿ 28, 2020
17 °C

‘ಚಿದಾನಂದಮೂರ್ತಿ ಯುವಸಾಹಿತಿಗಳಿಗೆ ಸ್ಫೂರ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ನಾಡಿನ ಹಿರಿಯ ಸಾಹಿತಿ, ಇತಿಹಾಸತಜ್ಞ, ಹೋರಾಟಗಾರ, ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಕಾವಲುಗಾರನ ರೀತಿ ಬದುಕಿದ್ದ, ಹಂಪೆಯೊಂದಿಗೆ ಆಪ್ತತೆ ಬೆಳೆಸಿಕೊಂಡಿದ್ದ ಸಾಹಿತಿ ಎಂ.ಚಿದಾನಂದಮೂರ್ತಿ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಅಭಿಪ್ರಾಯಪಟ್ಟರು.

ಇಲ್ಲಿನ ಗಾಂಧಿಚೌಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಾಹಿತಿ ಚಿದಾನಂದಮೂರ್ತಿ ಹಾಗೂ ಜೇಸಿಐನ ಸಂಸ್ಥಾಪಕ ಅಧ್ಯಕ್ಷ ಪಿ.ಮುಕುಂದರಾವ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡದ ಉತ್ತಮ ಲೇಖಕರಾಗಿ, ವಿದ್ವಾಂಸರಾಗಿ, ಸಂಶೋಧಕರಾಗಿ ಕನ್ನಡ ಭಾಷೆ ಹಾಗೂ ಕರ್ನಾಟಕ ಇತಿಹಾಸ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಇವರು ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಗಳಿಸಲು ನಡೆಸಿದ್ದ ಚಳವಳಿಗೆ ಪ್ರಸಿದ್ಧರಾಗಿದ್ದರು’ ಎಂದು ತಿಳಿಸಿದರು.

‘ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿ, 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸ ಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರಾದರು. ಇಂತಹ ಹಿರಿಯ ಚೇತನ ಇಂದಿನ ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಬೇಕು’ ಎಂದರು.

‘ಪಿ.ಮುಕುಂದರಾವ್ ಅವರು ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ತಂಡ ರಚಿಸಿ ಮಕ್ಕಳ ಏಳಿಗೆಗಾಗಿ ದುಡಿದಿದ್ದಾರೆ. ಅಂತಹ ಮನಸ್ಥಿತಿಯನ್ನು ಎಲ್ಲರೂ ಹೊಂದಕು’ ಎಂದರು.

ಸಾಹಿತಿ ವಿ.ಎನ್.ರಮೇಶ್ ಮಾತನಾಡಿ, ‘ಚಿದಾನಂದಮೂರ್ತಿ ಅವರು ರಚಿಸಿದ ಕೃತಿಗಳಾದ ವೀರಶೈವ ಧರ್ಮ, ವಾಗರ್ಥ, ಸಂಶೋಧನಾ ತರಂಗ ಸರಸ, ಪಾಂಡಿತ್ಯ ರಸ, ಲಿಂಗಾಯತ ಅಧ್ಯಯನಗಳು, ಕರ್ನಾಟಕ ಸಂಸ್ಕ್ರತಿ, ಹೊಸತು ಹೊಸತು, ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ, ಕರ್ನಾಟಕ-ನೇಪಾಳ ಪ್ರಸಾರಾಂಗ ಕೃತಿಗಳು ವಿಖ್ಯಾತವಾಗಿವೆ’ ಎಂದರು.

ಮುಖಂಡ ಶೇಷಗಿರಿರಾವ್ ಮಾತನಾಡಿ, ‘ಡಾ. ಎಂ. ಚಿದಾನಂದಮೂರ್ತಿ ಅವರ ಸಂಶೋಧನೆ ಮತ್ತು ಸಾಹಿತ್ಯದ ಜೊತೆಯಲ್ಲಿ ಅವರ ನೇರ ನಡೆ, ನುಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಮೀರಿದ ಸ್ನೇಹಶೀಲ ಗುಣವನ್ನೂ ನಾಡು ಸದಾ ಸ್ಮರಿಸುತ್ತದೆ’ ಎಂದರು.

ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ರಾಜಗೋಪಾಲ್, ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಸಾಂಸ್ಕೃತಿಕ ಕಲಾ ತಂಡದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ.ನಾಯ್ಡು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು