ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯೋಗ ಮೇಳ: 1,097 ಮಂದಿ ನೇರ ನೇಮಕ

ವರ್ಷದಲ್ಲಿ ‘ಮನೆಗೊಂದು ಉದ್ಯೋಗ’ ನೀಡಲು ಬದ್ಧ: ಸಚಿವ ಕೆ.ಎಚ್‌.ಮುನಿಯಪ್ಪ
Published : 13 ಸೆಪ್ಟೆಂಬರ್ 2024, 20:53 IST
Last Updated : 13 ಸೆಪ್ಟೆಂಬರ್ 2024, 20:53 IST
ಫಾಲೋ ಮಾಡಿ
Comments

ದೇವನಹಳ್ಳಿ: ಇಲ್ಲಿನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಕೈಗಾರಿಕೆ ಕೇಂದ್ರ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ 1,097‌ ಅಭ್ಯರ್ಥಿಗಳಿಗೆ ನೇರ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು.

ಮೇಳದಲ್ಲಿ 163 ಕಂಪನಿಗಳು ಹಾಗೂ 12,000 ಆಕಾಂಕ್ಷಿಗಳು ಭಾಗವಹಿಸಿದ್ದರು. ಇದರಲ್ಲಿ 1,097 ಅಭ್ಯರ್ಥಿಗಳು ನೇರ ನೇಮಕಾತಿಗೊಂಡರು. 3,500 ಅಭ್ಯರ್ಥಿಗಳನ್ನು ಮುಂದಿನ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್‌.ಶಿವಶಂಕರ ಮಾಹಿತಿ ನೀಡಿದರು.

ಉದ್ಯೋಗ ಮೇಳ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ, ‘ಕೌಶಲಭರಿತ ಯುವ ಸಮೂಹವನ್ನು ಸೃಜಿಸಿ, ಎಲ್ಲರಿಗೂ ಉದ್ಯೋಗ ನೀಡಲು ಮಹಾತ್ವಾಕಾಂಕ್ಷೆ ಹೆಜ್ಜೆ ಇಡಲಾಗಿದೆ. ಮುಂದಿನ ಒಂದು ವರ್ಷದಲ್ಲಿ ‘ಮನೆಗೊಂದು ಉದ್ಯೋಗ’ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಿಎಸ್‌ಆರ್‌ ನಿಧಿ ಮೂಲಕ ಸರ್ಕಾರಿ ಶಾಲೆ, ಕಾಲೇಜು ಉನ್ನತೀಕರಣಗೊಳಿಸಿ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿ ಆಗಿದೆ. ಈಗ ಇದನ್ನು ಇಡೀ ರಾಜ್ಯದಲ್ಲಿ ಅನುಕರಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆಗೆ ಸಮರೋಪಾದಿಯಲ್ಲಿ ಪರಿಹಾರ ಒದಗಿಸಲು ಮುಂದಾಗಿದ್ದೇವೆ ಎಂದರು.

ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಸಮಾಲೋಚನೆ ನಡೆಸಿದರು
ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಸಮಾಲೋಚನೆ ನಡೆಸಿದರು

ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ

ಉದ್ಯೋಗ ಮೇಳದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು ಬಹುತೇಕ ತಾಂತ್ರಿಕ ಹುದ್ದೆಗಳಿಗೆ ಹೆಚ್ಚು ಅವಕಾಶವಿದೆ. ಸಾಂಪ್ರಾದಯಿಕ ಪದವಿ ಪಡೆದ ಅಭ್ಯರ್ಥಿಗಳಿಗೆ ಯಾವ ರೀತಿ ತರಬೇತಿ ಕೌಶಲ ತುಂಬ ಬೇಕು ಎಂದು ಮಾರ್ಗದರ್ಶನ ನೀಡಲಾಗುವುದು. ಅದರಂತೆಯೇ ಅವರನ್ನು ಸಜ್ಜು ಮಾಡಲಾಗುವುದು. ಕಂಪನಿಗಳು ಬೇಕಿರುವ ಕೌಶಲ ಬಗ್ಗೆ ತಿಳಿಸಿದರೆ ಉದ್ಯೋಗ ಆಕಾಂಕ್ಷಿಗಳಿಗೆ ವಿಶೇಷ ತರಬೇತಿ ಆಯೋಜಿಸಿ ಕೆಲಸಕ್ಕೆ ಅಣಿ ಮಾಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ಗ್ಯಾರಂಟಿ ಹಣ ಶಾಶ್ವತವಲ್ಲ: ಡಾ.ಕೆ.ಸುಧಾಕರ್‌

ಮನುಷ್ಯನಿಗೆ ಬೇಕಿರುವುದು ನೀರು ಆಹಾರ ಮನೆ ನಂತರ ಉದ್ಯೋಗ. ರಾಜ್ಯ ಸರ್ಕಾರ ಗ್ಯಾರಂಟಿ ಮೂಲಕ ನೀಡುವ ₹2 ಸಾವಿರ ಹಣ ಅವರ ಜೇಬಿನಲ್ಲಿ ಇರುವುದಿಲ್ಲ. ಜನತೆಗೆ ಬೇಕಿರುವುದು ಉದ್ಯೋಗದ ಗ್ಯಾರೆಂಟಿ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.

ತಾಂತ್ರಿಕ ಕೌಶಲ್ಯ ಅಭಿವೃದ್ಧಿಗೆ ನೂರು ವರ್ಷಗಳ ಹಿಂದೆಯೇ ಸರ್‌.ಎಂ.ವಿಶ್ವೇಶ್ವರಯ್ಯ ತಿಳಿಸಿದ್ದರು. ಈ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ₹50 ಲಕ್ಷ ಕೋಟಿಯನ್ನು ಮೂಲ ಸೌಕರ್ಯಕ್ಕೆ ನೀಡಿದ್ದು ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಆಗಲಿದೆ. ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು - ಹೈದರಾಬದ್‌ ದಶ ಪಥದ ಕಾರಿಡಾರ್‌ ರಸ್ತೆಗೆ ಹಸಿರು ನಿಶಾನೆ ಸಿಕ್ಕಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT