ಶನಿವಾರ, ಅಕ್ಟೋಬರ್ 8, 2022
21 °C
ಕನ್ನಡಿಗರ ತೆರಿಗೆ ಹಣ ವ್ಯರ್ಥಕ್ಕೆ ಕನ್ನಡ ಪಕ್ಷ ಆಕ್ರೋಶ

ದೊಡ್ಡಬಳ್ಳಾಪುರ: ಹಿಂದಿ ದಿವಸ್‌ ಆಚರಣೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದು ಖಂಡನೀಯ. ಕೂಡಲೇ, ರದ್ದುಪಡಿಸಬೇಕು ಎಂದು ಆಗ್ರಹಿಸಿ ಕನ್ನಡ ಪಕ್ಷದಿಂದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎನ್. ಮಂಜುನಾಥ್ ಮಾತನಾಡಿ, ಕನ್ನಡಿಗರ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ್ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ. ಭಾರತ ಸಂವಿಧಾನದ 14ನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕು ನೀಡುತ್ತದೆ. ಹಿಂದಿ ಕೂಡ ಕನ್ನಡದಂತೆಯೇ ಒಂದು ಭಾಷೆ. ಅದಕ್ಕೆ ವಿಶೇಷ ಸ್ಥಾನಮಾನ, ಪ್ರೋತ್ಸಾಹ ನೀಡುವುದು ಸರಿಯಲ್ಲ ಎಂದು
ಟೀಕಿಸಿದರು.

ಭಾಷಾ ವೈವಿಧ್ಯತೆಯ ಭಾರತದಲ್ಲಿ ಹಿಂದಿಯಂತಹ ಒಂದು ಭಾಷೆಯನ್ನು ಹೊತ್ತು ಮೆರೆಸುವ ಅಗತ್ಯ ಇಲ್ಲ. ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದಾಗಿದೆ. ಹಿಂದಿ ದಿವಸ್ ಆಚರಣೆ ಮೂಲಕ ಇತರೆ ಭಾರತೀಯ ಭಾಷೆಗಳನ್ನು ಕಡೆಗಣಿಸಿ ಇತರೆ ಭಾಷಿಗರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸುವುದು ಅಕ್ಷಮ್ಯ ಎಂದರು.

ಹಿಂದಿ ನುಡಿಯೊಂದನ್ನು ಇಡೀ ದೇಶದಲ್ಲಿ ಬೆಳೆಸುವ ಉದ್ದೇಶ ಸರಿಯಾದುದಲ್ಲ. ಹಿಂದಿ ಭಾಷಿಗರಿಗೆ ಎಲ್ಲಾ ರಾಜ್ಯಗಳಲ್ಲೂ ಅಗತ್ಯ ಸೇವೆ ಕಲ್ಪಿಸುವುದು ತಪ್ಪು. ಆ ಮೂಲಕ ಇತರೆ ಭಾಷಿಕರಿಗೆ ಇಲ್ಲದ ಸೌಲಭ್ಯಗಳನ್ನು ಹಿಂದಿ ಭಾಷಿಗರಿಗೆ ಒದಗಿಸಲಾಗುತ್ತಿದೆ ಎಂದು ದೂರಿದರು.

ಕನ್ನಡಿಗರಿಗೆ ಸಿಗಬೇಕಾದ ಬ್ಯಾಂಕಿಂಗ್ ಹಾಗೂ ಕೇಂದ್ರ ಸರ್ಕಾರದ ಉದ್ಯೋಗಗಳು ಉತ್ತರ ಭಾರತದವರ ಪಾಲಾಗುತ್ತಿವೆ. ಹಿಂದಿ ಹೇರಿಕೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಜನಸಾಮಾನ್ಯರಿಗೆ ತಮ್ಮದೇ ಆದ ಭಾಷೆಯನ್ನು ಮಾತನಾಡುವ ಸ್ವಾತಂತ್ರ್ಯವೂ ಇಲ್ಲದಾಗಿದೆ. ಈ ದಿಸೆಯಲ್ಲಿ ಹಿಂದಿ ಹೇರುವ ಹಿಂದಿ ದಿವಸ್ ಆಚರಣೆಯನ್ನು ಕೈಬಿಡಬೇಕು. ಅದಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಬೇಕು ಎಂದು
ಆಗ್ರಹಿಸಿದರು.

ಕನ್ನಡ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಡಿ. ವೆಂಕಟೇಶ್, ರಾಜ್ಯ ಸಮಿತಿ ಸದಸ್ಯರಾದ ಡಿ.ಪಿ. ಆಂಜನೇಯ, ಸಂಘಟನಾ ಕಾರ್ಯದರ್ಶಿ ವಿ. ಪರಮೇಶ್, ಖಜಾಂಚಿ ಕೆ.ಎನ್‌. ಕುಮಾರ್, ಮುಖಂಡರಾದ ಕೇಶವ, ನಾಗೇಶ್, ರಮೇಶ್, ಎಸ್.ಎಲ್. ರಾಮಾಂಜಿನಪ್ಪ, ರಂಗನಾಥ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು