ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಅಧಿಕಾರ ದಾಹ

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಕೃಷ್ಣ ಬೈರೇಗೌಡ ಆರೋಪ
Last Updated 12 ಡಿಸೆಂಬರ್ 2020, 7:44 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕಳೆದ ಮೂರು ತಿಂಗಳಿಂದ ರೈತರಿಗೆ ಮಾರಕವಾಗುತ್ತಿರುವ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದ ಜೆಡಿಎಸ್ ಭವಿಷ್ಯದ ಅಧಿಕಾರದ ದಾಹಕ್ಕಾಗಿ ಏಕಾಏಕಿ ಬಿಜೆಪಿ ಬೆಂಬಲಿಸಿ ಕಾಯ್ದೆ ಪಾಸ್ ಆಗಲು ಅನುಕೂಲ ಮಾಡಿಕೊಟ್ಟಿದೆ’ ಎಂದು ಶಾಸಕ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

ಇಲ್ಲಿನ ಚಿಕ್ಕಸಣ್ಣೆ ಬಳಿ ಶುಕ್ರವಾರ ನಡೆದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳಿಂದ ರೈತರಿಗಾಗುವ ಚಿಂತಾಜನಕ ಪರಿಣಾಮ ಕುರಿತು ಹಲವು ದಿನಗಳಿಂದ ಜೆಡಿಎಸ್ ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಹರಿಹಾಯ್ದ ನಂತರ ಬಿಜೆಪಿಗೆ ಬೆಂಬಲ ನೀಡಲಾಗಿದೆ. ರೈತರನ್ನು ಡೋಂಗಿ ಹೋರಾಟಗಾರರು ಎಂದು ಅವಮಾನಿಸುವುದು ಎಷ್ಟು ಸರಿ, ನಿಜವಾದ ಡೋಂಗಿಗಳು ಯಾರು ಎಂಬುದನ್ನು ರೈತರು ತೀರ್ಮಾನಿಸಲಿದ್ದಾರೆ ಎಂದರು.

ಕೃಷಿ ಕಾ‌ಯ್ದೆಗಳ ತಿದ್ದುಪಡಿಯಿಂದ ರೈತರ ಭೂಮಿ ಶ್ರೀಮಂತರ ಕೈಗೆ ಸೇರಲಿದೆ. ಎಪಿಎಂಸಿಗಳು ಬಾಗಿಲು ಮುಚ್ಚಿದರೆ ರೈತರ ಬದುಕು ತ್ರಿಶಂಕು ಸ್ಥಿತಿಯಾಗಲಿದೆ. ಕಾಂಗ್ರೆಸ್‌ ಸರ್ಕಾರವಿದ್ದಾಗ ಆನ್‍ಲೈನ್ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದ ಈವರೆಗೆ ಅರ್ಥಿಕ ಸ್ಥಿತಿ ಪಾತಾಳ ಸೇರುತ್ತಿದೆ ಎಂದು ಆರೋಪಿಸಿದರು.

ಗೋಹತ್ಯೆ ನಿಷೇಧ ಕಾಯ್ದೆಗೆ ಮುಂದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಗೋಮಾಂಸ ರಫ್ತು ನಿಲ್ಲಿಸಲಿ. ರಫ್ತು ವಹಿವಾಟು ನಡೆಸುತ್ತಿರುವವರು ಬಿಜೆಪಿ ಪ್ರಾಯೋಜಕರು. ಇದನ್ನೆಲ್ಲ ಮತದಾರರಿಗೆ ಮನವರಿಕೆ ಮಾಡಬೇಕು. ಭವಿಷ್ಯದ ಚುನಾವಣೆಗೆ ಇದು ತಳಹದಿಯಾಗಲಿದೆ ಎಂದು ಹೇಳಿದರು.

ಪಂಚಾಯತ್‍ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯ ಕಾರ್ಯಾಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿಗೆ ಅಧಿಕಾರ ವಿಕೇಂದ್ರಿಕರಣವಾಗುವ ಇಚ್ಛೆ ಇಲ್ಲ. ಇದಕ್ಕಾಗಿ ಪಂಚಾಯಿತಿ ಚುನಾವಣೆಯ ವಿಳಂಬಕ್ಕೆ ಹುನ್ನಾರ ನಡೆಸಿತ್ತು. ಸಂವಿಧಾನದಲ್ಲಿ ಅಂತಹ ಅವಕಾಶವಿಲ್ಲ ಎಂದು ಹೇಳಿದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದು ಈಗ ಬಯಲಾಗಿದೆ ಎಂದರು.

ಮುಖಂಡ ಬಿ. ರಾಜಣ್ಣ, ಮಾಜಿ ಶಾಸಕರಾದ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಕೆಪಿಸಿಸಿ ಸದಸ್ಯ ಚಿನ್ನಪ್ಪ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್, ರಾಮಚಂದ್ರಪ್ಪ, ಉಪಾಧ‍್ಯಕ್ಷರಾದ ಎಸ್.ಪಿ. ಮುನಿರಾಜು, ಶಾಂತಕುಮಾರ್, ವಿಜಯಪುರ ಹೋಬಳಿ ಎಸ್‌ಟಿ ಘಟಕದ ಅಧ್ಯಕ್ಷ ಎಂ. ಮುನಿ
ಆಂಜಿನಪ್ಪ, ಕೆಪಿಸಿಸಿ ವಿವಿಧ ಘಟಕ ಪದಾಧಿಕಾರಿಗಳಾದ ಜಗನ್ನಾಥ್, ಆರ್. ರವಿಕುಮಾರ್, ಮಾರುತಿ, ನಾಗೇಶ್, ನಟರಾಜ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮೀನಾರಾಯಣಪ್ಪ, ಕೆ.ಸಿ. ಮಂಜುನಾಥ್, ಅನಂತಕುಮಾರಿ, ರಾಧಮ್ಮ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಚೇತನ್ ಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT