ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರಿಕೆಗೂ ತಟ್ಟಿದ ಕೊರೊನಾ ಕರಿನೆರಳು

ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರ ಕೇಂದ್ರಗಳನ್ನು ಸೇರುವ ಆತಂಕ
Last Updated 31 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಾರಿಗೆ ತರಲಾಗಿರುವ ಲಾಕ್‌ಡೌನ್‌ ಕರಿನೆರಳು ನಗರದ ಮುಖ್ಯ ಉದ್ಯಮವಾಗಿರುವ ನೇಕಾರಿಕೆ ಮೇಲೆ ಬಿದ್ದಿದ್ದು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ನಗರದಲ್ಲಿ ಸುಮಾರು 25 ಸಾವಿರ ವಿದ್ಯುತ್‌ ಮಗ್ಗಗಳಿವೆ. ಜಿಎಸ್‌ಟಿ ಜಾರಿಗೆ ಬಂದ ನಂತರ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು ಕುಂಟುತ್ತಲೇ ಸಾಗುತಿತ್ತು. ಈಗ ಕೊರೊನಾ ಸೋಂಕು ಇಡೀ ಉದ್ಯಮವನ್ನೇ ಆವರಿಸಿದ್ದು ಸದಾ ಲಟ್ಟಪಟ್ಟ ಸದ್ದಿನಿಂದ ತುಂಬಿರುತ್ತಿದ್ದ ನಗರ ಸ್ತಬ್ದವಾಗಿದೆ.

ಸಾಮಾನ್ಯವಾಗಿ ಯುಗಾದಿ ಹಬ್ಬದ ನಂತರ ಮೂರು ದಿನಗಳ ಕಾಲ ನೇಕಾರಿಕೆಗೆ ರಜೆ ಇರುತ್ತದೆ. ಹಬ್ಬದ ದಿನವೇ ಜಾರಿಗೆ ಬಂದ ಲಾಕ್‌ಡೌನ್‌ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ನಿದ್ದೆಗೆಡಿಸಿದೆ. ಸದ್ಯಕ್ಕೆ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರಲ್ಲಿ ಸ್ಥಳಿಯರಷ್ಟೇ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ, ಆಂಧ್ರಪ್ರದೇಶ, ಬಿಹಾರ ರಾಜ್ಯದವರ ಸಂಖ್ಯೆಯೂ ಸಮ ಪ್ರಮಾಣದಲ್ಲಿದೆ. ಹಬ್ಬದ ಹಿನ್ನೆಲೆಯಲ್ಲಿ ಹೊರಗಿನಿಂದ ಬಂದ ಕಾರ್ಮಿಕರಲ್ಲಿ ಅರ್ಧಕ್ಕೂ ಹೆಚ್ಚಿನ ಕಾರ್ಮಿಕರು ಊರುಗಳಿಗೆ ಹಿಂದಿರುಗಿದ್ದವರು. ಅಲ್ಲಿಂದ ಬಂದಿಲ್ಲ ಎನ್ನುತ್ತಾರೆ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಹಾಗೂ ನೇಕಾರ ಪಿ.ಎಂ.ವೆಂಕಟೇಶ್‌.

ಯುಗಾದಿ ಹಬ್ಬಕ್ಕೆ ಮುನ್ನ ಕೆಲಸ ಮಾಡಿ ಬಂದಿದ್ದ ಬಟವಾಡೆಯಲ್ಲಿ(ಕೂಲಿ) ನೇಕಾರಿಕೆ ಕಾರ್ಮಿಕರು ಇನ್ನು ಒಂದು ವಾರಗಳ ಕಾಲ ಜೀವನ ನಡೆಸಬಹುದು. ಆದರೆ, ಹಬ್ಬಕ್ಕೆ ಊರುಗಳಿಗೆ ಹೋಗದೆ ಇಲ್ಲಿಯೇ ಬಾಡಿಗೆ ಮನೆಗಳಲ್ಲಿಯೇ ಕುಟುಂಬ ಸಮೇತ ಉಳಿದಿದ್ದ ಹೊರಗಿನ ಕಾರ್ಮಿಕರು ಕೆಲಸ ಇಲ್ಲದೆ ಜೀವನಕ್ಕೆ ಅಗತ್ಯ ದಿನಸಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದೇ ದೊಡ್ಡ ಪ್ರಮಾಣದಲ್ಲಿ ನಿರಾಶ್ರಿತರ ಕೇಂದ್ರಗಳನ್ನು ಸೇರುವ ಆತಂಕ ಎದುರಾಗಿದೆ.

ನಗರದ ಕರೇನಹಳ್ಳಿ ಪ್ರದೇಶದಲ್ಲಿ ನೇಕಾರಿಕೆಯಲ್ಲಿ ತೊಡಗಿರುವ ಬಹುತೇಕ ಕಾರ್ಮಿಕರು ಹೊರಗಿನವರು. ಇಲ್ಲಿನ ಕಾರ್ಮಿಕರು ಇಡೀ ವಾರ ಮಗ್ಗದಲ್ಲಿ ಸೀರೆಗಳನ್ನು ನೇಯ್ದು ಭಾನುವಾರ ಬರುವ ಬಟವಾಡೆ ಮೇಲೆಯೇ ಜೀವನ ನಡೆಸುವಂತ ಕುಟುಂಬಗಳು. ಆದರೆ, ನೇಯುವ ಸೀರೆಗಳು ಹೊರಗೆ ಹೋಗದೆ, ನೇಕಾರಿಕೆಗೆ ಅಗತ್ಯ ಇರುವ ಕಚ್ಚಾವಸ್ತುಗಳು ಹೊರಗಿನಿಂದ ಬಾರದೆ ಇರುವ ಹಿನ್ನೆಲೆಯಲ್ಲಿ ಮಗ್ಗಗಳು ಸ್ಥಗಿತಗೊಂಡಿವೆ.

‘ಲಾಕ್‌ಡೌನ್‌ ಒಂದೆರಡು ವಾರದ ಒಳಗೆ ಮುಕ್ತಾಯವಾದರೆ ಹೇಗೋ ಕೆಲಸ ಮಾಡಿ ಗಂಜಿ ಕುಡಿದಾದರೂ ಜೀವನ ನಡೆಸಲು ಸಾಧ್ಯ. ಲಾಕ್‌ಡೌನ್‌ ಮತ್ತಷ್ಟು ದಿನ ವಿಸ್ತರಣೆಯಾದರೆ ಕಾರ್ಮಿಕರ ಜತೆಗೆ ಒಂದೆರಡು ಮಗ್ಗಗಳನ್ನು ಹೊಂದಿರುವ ಮಾಲೀಕರು ಸಹ ನಿರಾಶ್ರಿತರ ಕೇಂದ್ರಗಳಿಗೆ ಹೋಗುವ ದಿನಗಳು ದೂರ ಇಲ್ಲ. ಈಗ ನಾವಷ್ಟೇ ಮನೆಯಲ್ಲಿ ಕುಳಿತು ಜೀವನ ನಡೆಸುತ್ತಿಲ್ಲ. ನಮ್ಮನ್ನೇ ನಂಬಿ ಮನೆಯಲ್ಲಿನ ಮಗ್ಗದಲ್ಲಿ ಸೀರೆ ನೇಯುತ್ತಿದ್ದ ಕಾರ್ಮಿಕರ ಜೀವನಕ್ಕೆ ಅಗತ್ಯ ಇರುವ ದಿನಸಿ ವಸ್ತುಗಳನ್ನು ಖರೀದಿಸಲು ಮುಂಗಡವಾಗಿ ಹಣ ನೀಡಲಾಗುತ್ತಿದೆ. ಆದರೆ, ಈ ರೀತಿಯ ಬದುಕು ಸಣ್ಣ ನೇಕಾರರು ಎಷ್ಟು ದಿನಗಳವರೆಗೆ ನಡೆಸಲು ಸಾಧ್ಯವಿದೆ’ ಎಂದು ಪ್ರಶ್ನಿಸುತ್ತಾರೆ ಕನಕದಾಸ ರಸ್ತೆಯ ನೇಕಾರ ಮುನಿರಾಜು.

ಹಬ್ಬಕ್ಕೂ ಮುನ್ನ ಮನೆಯಲ್ಲಿ ದಾಸ್ತಾನು ಇದ್ದ ರೇಷ್ಮೆ ಹಾಗೂ ಮಗ್ಗದಲ್ಲಿದ್ದ ವಾರ್ಪು ಮುಕ್ತಾಯವಾಗುವ ತನಕ ಮನೆಯಲ್ಲಿಯೇ ಕುಳಿತು ಬೇಸರವಾಗಿರುವವರು ಮಗ್ಗಗಳನ್ನು ನಡೆಸುತಿದ್ದಾರೆ. ಆದರೆ, ದಾಸ್ತಾನು ಖಾಲಿಯಾದ ನಂತರ ಕಚ್ಚಾ ವಸ್ತು ತರಲು ಸಾಧ್ಯವೂ ಇಲ್ಲ ಮತ್ತು ಈಗ ನೇಯ್ದಿರುವ ಸೀರೆಯನ್ನು ಹೊರಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವೇ ಇಲ್ಲದಾಗಿದೆ.

ಬೇಡಿಕೆ ಸಿಗಲಿದೆಯೇ ?: ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ಜೀವನ ನಡೆಸಲು ಅಗತ್ಯ ಇರುವ ವಸ್ತುಗಳ ಖರೀದಿಗೆ ಜನ ಮುಂದಾಗುತ್ತಾರೆ ವಿನಹ ಬಟ್ಟೆ, ಸೀರೆಗಳ ಖರೀದಿಗೆ ಯಾರು ತಾನೇ ಮುಂದಾಗುತ್ತಾರೆ ಎನ್ನುವ ಅನುಮಾನ ನೇಕಾರರದ್ದು. ಬಟ್ಟೆ ದಿನನಿತ್ಯದ ಅಗತ್ಯ ವಸ್ತು ಅಲ್ಲ. ಮನೆಯಲ್ಲಿ ಇರುವ ಬಟ್ಟೆಯನ್ನು ಹುಟ್ಟು ಬದುಕು ನಡೆಸುವ ಕಡೆಗೆ ಎಲ್ಲರೂ ಪ್ರಥಮ ಆದ್ಯತೆ ನೀಡುತ್ತಾರೆ. ಹೀಗಾಗಿ ನೇಕಾರಿಕೆ ಉದ್ಯಮ ಚೇತರಿಸಿಕೊಳ್ಳಲು ಎಷ್ಟು ದಿನಗಳ ಕಾಲ ಬೇಕಾಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದ್ದು, ನೇಕಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಪರ್ಯಾಯ ಉದ್ಯೋಗದ ಹುಡುಕಾಟದತ್ತ ಮನಸ್ಸು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT