ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಸ್ವಯಂ ಲಾಕ್‌ಡೌನ್‌ಗೆ ವ್ಯಾಪಾರಸ್ಥರ ನಿರ್ಧಾರ

ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ
Last Updated 30 ಜೂನ್ 2020, 9:41 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ಮೂರು ಕೋವಿಡ್‌-19 ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ವರ್ತಕರು ಸೇರಿದಂತೆ ವಿವಿಧ ವಲಯಗಳ ವ್ಯಾಪಾರಸ್ಥರು ಸಭೆ ನಡೆಸಿ ಜುಲೈ 1 ರಿಂದ 14ರವರೆಗೇ ಮಧ್ಯಾಹ್ನ 2 ಗಂಟೆಗೆ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು‌ ಒಮ್ಮತದ ನಿರ್ಧಾರ ಕೈಗೊಂಡರು.

‘ದೂರದ ಎಲ್ಲೋ ಇದ್ದ ಕೊರೊನಾ‌ ಸೋಂಕು ಈಗ ನಮ್ಮ ಮನೆಗಳ ಪಕ್ಕಕ್ಕೆ ಬಂದಿದೆ. ಆದ ಕಾರಣ, ನಮ್ಮ ಮನೆಗಳಿಗೂ ಬಾರದಂತೆ ತಡೆಯಲು ಅನಿವಾರ್ಯವಾಗಿ ಬಂದ್‌ ಮಾಡಲೇಬೇಕಿದೆ. ಈ ನಿರ್ಧಾರವನ್ನು ಗೌರವಿಸಿ ತಾಲ್ಲೂಕು ಮತ್ತು ನಗರಸಭೆ ಆಡಳಿತ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ಮಾತನಾಡಿ, ‘ಇಡೀ ತಾಲ್ಲೂಕಿನಲ್ಲಿ ಇರುಷ್ಟು ಜನ ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇಲ್ಲಿ ಸೋಂಕು ಹರಡಿದರೆ, ತಡೆಯುವುದು ಕಷ್ಟವಾಗಲಿದೆ. ಸಭೆಯ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಆದೇಶ ನೀಡಲಾಗುವುದು’ ಎಂದರು.

ನಗರಸಭೆ ವ್ಯಾಪ್ತಿಯಲ್ಲಿನ ಮೂರು ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಸೋಂಕು ತಡೆಗೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದುನಗರಸಭೆ ಪೌರಾಯುಕ್ತ ರಮೇಶ್‌ ಎಸ್‌.ಸುಣಗಾರ್‌ ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಸಲ್ಲದು: ಈ ಹಿಂದೆಯ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು, ಗುಟ್ಕಾ ಉಗುಳುವುದನ್ನು ನಿಷೇಧಿಸಿದೆ. ಅಲ್ಲದೆ ದಂಡ ವಿಧಿಸುವ ಅಧಿಕಾರವನ್ನು ನೀಡಿದೆ. ಈ ನಿಟ್ಟಿನಲ್ಲಿ ಮಂಗಳವಾರದಿಂದಲೇ ಪೊಲೀಸರು, ನಗರಸಭೆ ಅಧಿಕಾರಿಗಳ ತಂಡ ಕಾರ್ಯಾಚರಣೆಯನ್ನು ನಿಯಮಿತವಾಗಿ ಕೈಗೊಂಡು ಗುಟ್ಕಾ ಮಾರಾಟ, ಸಾರ್ವಜನಿಕ ಸ್ಥಳ ಹಾಗೂ ಹೋಟೆಲ್‌ಗಳಲ್ಲಿ ಕುಳಿತು ಧೂಮಪಾನ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.

ನಗರದ ಡಿ.ಕ್ರಾಸ್‌ ವೃತ್ತದಿಂದ ಪ್ರವಾಸಿ ಮಂದಿರ ವೃತ್ತ ಹಾಗೂ ಎಪಿಎಂಸಿ ಸಮೀಪದ ಹೆದ್ದಾರಿ ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು ಮಾರಾಟ ಹಾಗೂ ಮೀನು, ಮಾಂಸದ ಅಂಗಡಿಗಳನ್ನು ತೆರವು ಮಾಡಲು ನಗರಸಭೆ ಹಾಗೂ ಪೊಲೀಸ್‌ ಇಲಾಖೆ ವತಿಯಿಂದ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಗ್ರಾಹಕರು ವ್ಯಾಪಾರ ವಹಿವಾಟು ನಡೆಸಲು ಹೆದ್ದಾರಿ ಬದಿಯಲ್ಲಿಯೇ ವಾಹನಗಳ ನಿಲುಗಡೆ ಮಾಡುವುದರಿಂದ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ವಾಹನಗಳ ಸುಗಮ ಸಂಚಾರಕ್ಕು ಅಡ್ಡಿಯಾಗಿದೆ. ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಮಾಡುತ್ತಿರುವವರು ಸಹ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಎಚ್ಚರಿಕೆ ವಹಿಸಲು ಗಸ್ತು ನಡೆಸುವಂತೆಯು ಸೂಚನೆ ನೀಡಲಾಗುವುದು ಎಂದರು.

ಸಭೆಯಲ್ಲಿ ವಿವಿಧ ವಲಯಗಳ ವರ್ತಕ ಸಂಘಟನೆಗಳ ಮುಖಂಡರು, ನಗರ ಪೊಲೀಸ್‌ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಸೋಮಶೇಖರ್‌, ಗ್ರಾಮಾಂತರ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ವಿ.ಗಜೇಂದ್ರ ಇದ್ದರು.

* ಸ್ವಯಂ ಪ್ರೇರಣೆಯಿಂದ ಬಂದ್‌ ಕೈಗಳ್ಳುವುದಾದರೆ ನಮ್ಮ ಅಡ್ಡಿ ಇಲ್ಲ. ಆದರೆ ನಾವು ಬಲವಂತವಾಗಿ ಬಾಗಿಲು ಮುಚ್ಚುವಂತೆ ಹೇಳಲಾಗದು

- ಟಿ.ರಂಗಪ್ಪ, ಡಿವೈಎಸ್‌ಪಿ

‘ಪ್ರತಿಭಟನೆಗೆ ಕಡಿಮೆ ಸಂಖ್ಯೆ ಜನ ಸೇರಿಸಿ’

‘ಲಾಕ್‌ಡೌನ್‌ ತೆರವಿನ ನಂತರ ತಾಲ್ಲೂಕು ಸೇರಿದಂತೆ ಎಲ್ಲ ಕಡೆಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಗುಂಪು ಸೇರಿಸುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಇದೆ. ಆದರೆ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸದೆ ಕಡಿಮೆ ಸಂಖ್ಯೆಯಲ್ಲಿ ಅಂತರ ಕಾಪಾಡಿಕೊಂಡು ಸಭೆಗಳನ್ನು ನಡೆಸಬೇಕು. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಲಾಗುವುದು’ ಎಂದು ಡಿವೈಎಸ್‌ಪಿ ಟಿ.ರಂಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT