ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮಾರ್ಗಸೂಚಿ ಮರೆತ ಶಾಸಕ, ದೂರು ದಾಖಲು

ಕಾರ್ಯಕರ್ತರೊಟ್ಟಿಗೆ ಜನ್ಮ ದಿನ ಆಚರಣೆ
Last Updated 24 ಜೂನ್ 2021, 3:37 IST
ಅಕ್ಷರ ಗಾತ್ರ

ವಿಜಯಪುರ: ‘ಪ್ರತಿಯೊಬ್ಬರೂ ಕಡ್ಡಾಯವಾಗಿ ಕೊರೊನಾ ನಿಯಮ ಪಾಲನೆ ಮಾಡಬೇಕು ಎಂದು ಸರ್ಕಾರ ಸೂಚಿಸಿದರೂ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಕಾರ್ಯಕರ್ತರ ಪಡೆಯೊಂದಿಗೆ ದೇವಾಲಯಗಳಿಗೆ ಭೇಟಿ ನೀಡಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಪುರುಷೋತ್ತಮ್ ದೂರಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಜನರು ಜೀವನ ನಡೆಸಲು ಪರದಾಡುತ್ತಿದ್ದಾರೆ. ಸೋಂಕಿನ ಪ್ರಮಾಣ ಇತ್ತೀಚೆಗಷ್ಟೇ ಕಡಿಮೆಯಾಗುತ್ತಿದೆ. ಪುರಸಭೆಯ ಚುನಾವಣಾ ಪೂರ್ವದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸೋಂಕಿನ ಬಗ್ಗೆ ನಿರ್ಲಕ್ಷ್ಯವಹಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಮನೆ ಮನೆಗೆ ಓಡಾಡಿದ್ದ ಶಾಸಕರು ಸೋಂಕಿಗೆ ತುತ್ತಾಗಿದ್ದರು. ಈಗ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ಟೀಕಿಸಿದರು.

ಮುಖಂಡ ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ಧಾರ್ಮಿಕ ಕೇಂದ್ರಗಳ ಬಾಗಿಲು ತೆರೆಯಲು ಅನುಮತಿ ನೀಡಿಲ್ಲ. ಭಕ್ತರು ಯಾರೂ ದೇವಾಲಯಗಳಿಗೆ ಪ್ರವೇಶ ಮಾಡಲಿಕ್ಕೆ ಅವಕಾಶ ಕೊಟ್ಟಿಲ್ಲ. ಆದರೂ, ಶಾಸಕರ ಹುಟ್ಟುಹಬ್ಬದ ಅಂಗವಾಗಿ ದೇವಾಲಯಗಳ ಬಾಗಿಲು ತೆರೆಯಲಾಗಿದೆ. ಅವರ ಅಭಿಮಾನಿಗಳನ್ನು ದೇವಾಲಯದ ಒಳಗೆ ಬಿಟ್ಟುಕೊಂಡು ಪೂಜಾ ಕಾರ್ಯಕ್ರಮ ನಡೆಸಿರುವುದು ಎಷ್ಟರಮಟ್ಟಿಗೆ ಸರಿ, ಇವರ ಮೇಲೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ ತಿಂಗಳು ಪಟ್ಟಣದ ಎಲ್ಲಮ್ಮ ದೇವಾಲಯದ ಬಾಗಿಲ ಬಳಿಯಲ್ಲಿ ಸ್ಥಳೀಯ ಜನರು ದೀಪ ಬೆಳಗಿದರು ಎನ್ನುವ ಕಾರಣಕ್ಕೆ 25ಕ್ಕೂ ಹೆಚ್ಚು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸರ್ಕಾರ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಆದರೂ, ನೂರಾರು ಮಂದಿ ದೇವಾಲಯದಲ್ಲಿ ಸೇರಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಮುಖಂಡ ಅಶ್ವಥನಾರಾಯಣ ಮಾತನಾಡಿ, ಕಲ್ಯಾಣ ಮಂಟಪಗಳಲ್ಲಿ ಯಾವುದೇ ಸಭೆ, ಸಮಾರಂಭ, ಮದುವೆಗೆ ಅವಕಾಶ ನೀಡಿಲ್ಲ. ಆದರೂ, ಪಟ್ಟಣದ ಅನ್ನಪೂರ್ಣೇಶ್ವರಿ ಕನ್ವೆನ್‌ಷನ್‌ ಹಾಲ್‌ನಲ್ಲಿ ನೂರಾರು ಮಂದಿ ಸೇರಿಕೊಂಡು ಅಂತರ ಕಾಪಾಡದೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡುವುದು ಖಂಡನೀಯ. ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸುತ್ತೇವೆ ಎಂದರು.

‘ರಾಜ್ಯ ಸರ್ಕಾರ ದೇವಾಲಯಗಳನ್ನು ತೆರೆಯಲಿಕ್ಕೆ ಅನುಮತಿ ಕೊಟ್ಟಿಲ್ಲ. ಲಾಕ್‌ಡೌನ್ ನಿಯಮಗಳಲ್ಲಿ ಕೆಲವು ಮಾರ್ಪಾಡು ಮಾಡಿದೆ. ಯಾರೂ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು’ ಎಂದುತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT