ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ

ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕಾಯ್ದೆ ರೂಪಿಸಲು ಚಿಂತನೆ: ಸಚಿವ ಆರ್.ಅಶೋಕ್‌
Last Updated 21 ಏಪ್ರಿಲ್ 2020, 15:42 IST
ಅಕ್ಷರ ಗಾತ್ರ

ಆನೇಕಲ್: ಪಾದರಾಯನಪುರ ಘಟನೆ ಹಿನ್ನೆಲೆಯಲ್ಲಿ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಲು ಉತ್ತರಪ್ರದೇಶದ ಮಾದರಿಯಲ್ಲಿ ಕಠಿಣ ಕಾಯ್ದೆ ರೂಪಿಸಿ ಎರಡು ಮೂರು ದಿನಗಳಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ತಾಲ್ಲೂಕಿನ ಜಿಗಣಿಯಲ್ಲಿ ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

ಪಾದರಾಯನಪುರ ಘಟನೆಯಲ್ಲಿ ಪಾಲ್ಗೊಂಡಿರುವ ಹಲವು ಮಂದಿಯನ್ನು ಬಂಧಿಸಿ ರಾಮನಗರ ಜೈಲಿಗೆ ಕಳುಹಿಸಲಾಗಿದೆ. ಘಟನೆಯಲ್ಲಿ ಪಾಲ್ಗೊಂಡವರು ಅಮಾಯಕರಲ್ಲ ಗೂಂಡಾಗಳು. ಹಾಗಾಗಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊರೊನಾ ಸೋಂಕು ಹರಡುವಿಕೆ ತಡೆಯುವ ಸಂಬಂಧ ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರತಿದಿನ ಸಭೆ ನಡೆಸಿ ಚರ್ಚೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಲಾಕ್‌ಡೌನ್‌ ಸಮರ್ಪಕವಾಗಿ ಜಾರಿಗೊಳಿಸಲು ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ ಸಮರ್ಥವಾಗಿ ಲಾಕ್‌ಡೌನ್‌ ಅನುಷ್ಠಾನಗೊಳಿಸಿರುವುದರಿಂದ ಪ್ರಕರಣಗಳು ಕಡಿಮೆಯಾಗುತ್ತಿವೆ. ಕಳೆದ ಎರಡು ದಿನಗಳಿಂದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ವೈದ್ಯರು, ಪೊಲೀಸರು, ಕಂದಾಯ, ಆರೋಗ್ಯ ಇಲಾಖೆ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಹಲ್ಲೆಕೋರರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಾಗಲಕೋಟೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ವಿವಿಧ ಪಿಂಚಣಿದಾರರಿಗೆ ನೀಡಬೇಕಾದ ಪೂರ್ಣ ಅನುದಾನ ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳ ಮೂಲಕ ಫಲಾನುಭವಿಗಳಿಗೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಎಲ್ಲ ಮುಖಂಡರು ಕೊರೊನಾ ಸಂಕಟದ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಪ್ರತಿ ಪಂಚಾಯಿತಿಯಲ್ಲೂ ಅಡುಗೆ ಕೇಂದ್ರ ಪ್ರಾರಂಭಿಸಿ ಊಟ ನೀಡಲಾಗುತ್ತಿದೆ. ಸುಮಾರು 20 ಸಾವಿರ ದಿನಸಿ ಕಿಟ್‌ ನೀಡಲಾಗಿದೆ. ಗುರುತಿಸಿದ ಎಲ್ಲರಿಗೂ ಆಹಾರ ಸಾಮಗ್ರಿ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟೇಶ್‌ಗೌಡ, ಮಂಡಲ ಅಧ್ಯಕ್ಷ ರಾಜಶೇಖರರೆಡ್ಡಿ, ಮುಖಂಡರಾದ ರಮೇಶ್‌, ಕೊಪ್ಪ ಮುನಿರಾಜು, ಜೆ.ಸಿ.ಕೃಷ್ಣಪ್ಪ, ನಾಗೇಂದ್ರ, ಮುನಿರಾಜು, ಮಲ್ಲಿಗೆ ಆನಂದ್‌, ಎಂ.ಸಿ.ರಾಜಪ್ಪ, ರಾಮಚಂದ್ರಪ್ಪ, ಪ್ರಸಾದ್‌ರೆಡ್ಡಿ, ಮರಿಯಪ್ಪ, ಮಮತಾ ನರಸಿಂಹರೆಡ್ಡಿ, ಶಿವರಾಮರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT