‘ಶಾಸಕರ ಪಕ್ಷಾಂತರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’

ಶುಕ್ರವಾರ, ಜೂಲೈ 19, 2019
26 °C
ದೇವನಹಳ್ಳಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ

‘ಶಾಸಕರ ಪಕ್ಷಾಂತರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ’

Published:
Updated:
Prajavani

ದೇವನಹಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಶಾಸಕರ ಪಕ್ಷಾಂತರ ಪರ್ವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ರಾಜ್ಯ ಘಟಕ ಅಧ್ಯಕ್ಷ ಇಂಡ್ಲವಾಡಿ ಬಸವರಾಜು ದೂರಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರಜಾ ವಿಮೋಚನಾ ಚಳವಳಿ ವತಿಯಿಂದ ಆರೋಗ್ಯ ಮತ್ತು ಕಣ್ಣಿನ ತಪಾಸಣೆಯ ನಂತರ ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಕ್ಷಾಂತರ ಮಾಡುತ್ತಿರುವ ಶಾಸಕರು ಮತದಾರರಿಗೆ ದ್ರೋಹ ಮಾಡುತ್ತಿದ್ದಾರೆ, ಕೋಟ್ಯಂತರ ರೂಪಾಯಿ ಹಣಕ್ಕಾಗಿ ತಮ್ಮ ಪಕ್ಷ ಮತ್ತು ವೈಯಕ್ತಿಕ ವ್ಯಕ್ತಿತ್ವವನ್ನು ಮಾರಿಕೊಳ್ಳುತ್ತಿದ್ದಾರೆ. ನೈತಿಕತೆ ಇಲ್ಲದೆ ಪಕ್ಷಾಂತರ ಮಾಡುವ ಶಾಸಕರನ್ನು ಮತ್ತೆ ಚುನಾವಣೆಗೆ ನಿಲ್ಲದಂತೆ ಆಜೀವ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು.

ಕಳೆದ ಒಂದು ವರ್ಷದಲ್ಲಿ ಅಧಿಕಾರ ಉಳಿಸಿಕೊಳ್ಳುವ ಮತ್ತು ಪರೋಕ್ಷವಾಗಿ ಗದ್ದುಗೆ ಹಿಡಿಯುವ ಪ್ರಯತ್ನ ನಿರಂತರವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಜನಸಾಮಾನ್ಯರು ಬೇಸತ್ತಿದ್ದಾರೆ. ಮಂತ್ರಿ ಸ್ಥಾನ, ನಿಗಮ ಮಂಡಳಿಗೆ ಆಕಾಂಕ್ಷಿಗಳಾಗಲು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಗಳ ಹೇಳಿಕೆ ನಿರಂತರವಾಗಿದೆ ಎಂದು ಟೀಕಿಸಿದರು.

ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಪರ್ವ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಇಂತಹ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಿದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಸಿಗಲಿದೆ ಎಂದರು.

ಪ್ರಚಾರ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಸಂಘಟನೆಯು ಕೇವಲ ಹೋರಾಟಕ್ಕೆ ಸೀಮಿತಗೊಳಿಸದೆ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ, ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ, ಪರಿಸರ ಮತ್ತು ಜಲಮೂಲ ರಕ್ಷಣೆ ಬಗ್ಗೆಯೂ ಕಾಳಜಿಯಿಂದ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ವಯೋವೃದ್ಧರು, ಬಡವರು, ಅನಾಥರು, ಅಂಗವಿಕಲರ ಬಗ್ಗೆ ವಿಶೇಷ ಕಾಳಜಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಘಟಕ ಉಪಾಧ್ಯಕ್ಷ ಜಾಲ ಕಿಟ್ಟಿ, ಬೆಂಗಳೂರು ನಗರ ಘಟಕ ಅಧ್ಯಕ್ಷ ಸಿ.ಚೆನ್ನಕೇಶವ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮುತ್ತುರಾಜ್, ತಾಲ್ಲೂಕು ಘಟಕ ಉಪಾಧ್ಯಕ್ಷ ಮೋಹನ್ ಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಸೋನಿಲತಾ, ಉಪಾದ್ಯಕ್ಷೆ ನಾಜೀಮ, ನಗರ ಘಟಕ ಅಧ್ಯಕ್ಷೆ ಸುಷ್ಮಾರಾಣಿ, ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣ, ಸಂಘಟನಾ ಕಾರ್ಯದರ್ಶಿ ಆಯಿಷಾ, ಗೌರವಾಧ್ಯಕ್ಷೆ ಲಲಿತಾ, ಮೈಸೂರು ನಗರ ಘಟಕ ಅಧ್ಯಕ್ಷ ಸತೀಶ್, ಬೆಂಗಳೂರು ನಗರ ಘಟಕ ಕಾರ್ಯದರ್ಶಿ ಸುನೀಲ್ ಕುಮಾರ್, ಕಾರ್ಮಿಕ ಘಟಕ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ಪರಶುರಾಮ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !