ಮಂಗಳವಾರ, ಅಕ್ಟೋಬರ್ 27, 2020
24 °C

ಮದ್ದೀಡು ಶೆಡ್ ಸ್ಥಳಾಂತರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಇಲ್ಲಿನ ಮೇಲೂರು ರಸ್ತೆಯಲ್ಲಿರುವ ದೊಡ್ಡಮೋರಿಯ ಬಳಿಯಲ್ಲಿ ಮದ್ದೀಡು ತೆಗೆಯಲು ಒಂದು ಶೆಡ್ ನಿರ್ಮಾಣ ಮಾಡಿಕೊಂಡಿದ್ದು, ಪ್ರತಿ ಭಾನುವಾರವೂ ಸೇರಿದಂತೆ ವಾರದಲ್ಲಿ ಎರಡು ಮೂರು ದಿನಗಳ ಕಾಲ ಜನರಿಂದ ತುಂಬುತ್ತಿದೆ. ಕೊರೊನಾ ಆತಂಕದ ನಡುವೆ ಜನರನ್ನು ಒಟ್ಟಿಗೆ ಸೇರಿಸಿಕೊಂಡು ಈ ರೀತಿ ಮಾಡುತ್ತಿರುವುದರಿಂದ ಸ್ಥಳೀಯರಿಂದ ಭಯವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಮುನಿಶಾಮಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

‘ಪಟ್ಟಣ ಸೇರಿದಂತೆ ದೂರದ ಊರುಗಳಿಂದ ಜನರು ಹೊಟ್ಟೆನೋವು, ಎದೆನೋವಿನಂತಹ ಕಾಯಿಲೆಗಳ ಚಿಕಿತ್ಸೆಗೆ ಆಯುರ್ವೇದಿಕ್ ಔಷಧಿ ಪಡೆಯಲು ಇಲ್ಲಿಗೆ ಬಂದು ಮದ್ದೀಡು ತೆಗೆಸುತ್ತಾರೆ. ಈ ವೇಳೆ ಅವರಿಗೆ ಬಾಳೆಹಣ್ಣಿನಲ್ಲಿ ಔಷಧಿಯನ್ನು ಕೊಟ್ಟು ಹೆಚ್ಚು ನೀರು ಕುಡಿಸಿ ವಾಂತಿ ಮಾಡಿಸುತ್ತಾರೆ.

ಇದು ವಾಸದ ಮನೆಗಳ ಸಮೀಪದಲ್ಲಿರುವ ಕಾರಣದಿಂದ ಇಲ್ಲಿಗೆ ಬೇರೆ ಬೇರೆ ಕಡೆಗಳಿಂದ ಜನರು ಬರುವುದರಿಂದ ನಮಗೆ ಭಯದ ಇದೆ. ಯಾರಿಂದ ಹೇಗೆ ಕೋವಿಡ್ ಹರಡುತ್ತದೆಯೋ ಎನ್ನುವ ಆತಂಕವೂ ಕಾಡುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಪುರಸಭೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಇಲ್ಲಿಂದ ಸ್ಥಳಾಂತರ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾ ಮಾತನಾಡಿ, ‘ಇಲಾಖೆಯ ಅನುಮತಿಯಿಲ್ಲದೇ ಈ ರೀತಿಯಾದ ಚಟುವಟಿಕೆಗಳನ್ನು ಮಾಡುವುದು ಅಪರಾಧ. ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿರಲಿಲ್ಲ. ಯಾವ ರೀತಿಯಾಗಿ ಅದನ್ನು ತೆಗೆಯುತ್ತಿದ್ದಾರೆ ಎನ್ನುವ ಕುರಿತು ಮಾಹಿತಿಯಿಲ್ಲ. ಈ ಬಗ್ಗೆ ಗಮನಹರಿಸುತ್ತೇವೆ. ಜನರೂ ಕೂಡಾ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ’ ಎಂದರು.

ಪುರಸಭೆಯ ಆರೋಗ್ಯಾಧಿಕಾರಿ ಉದಯ್ ಕುಮಾರ್ ರಾವ್ ಮಾತನಾಡಿ, ‘ಅದು ಆಯುರ್ವೇದಿಕ್ ಕೇಂದ್ರ, ಸುಮಾರು ವರ್ಷಗಳಿಂದ ನಡೆಯುತ್ತಿದೆ. ಜನರನ್ನು ಹೆಚ್ಚು ಸೇರಿಸದಂತೆ ಕಾಂಪೌಂಡ್ ಒಳಗೆ ಮಾಡಿಕೊಳ್ಳುವಂತೆ ತಿಳಿಸಿದ್ದೇವೆ. ಜನರು ಹೆಚ್ಚು ಸೇರುತ್ತಿದ್ದರೆ, ಎಚ್ಚರಿಕೆ ನೀಡುತ್ತೇವೆ. ಯಾರಿಗೂ ಇದುವರೆಗೂ ತೊಂದರೆಯಾಗಿಲ್ಲ. ಆರೋಗ್ಯ ಇಲಾಖೆಯವರು ಗಮನಹರಿಸಬೇಕು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು