ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿವೃತ್ತಿ ಅಂಚಿನ ಪ್ರಾಧ್ಯಾಪಕರಿಗೆ ಪಿಎಚ್‌.ಡಿ ಮಾರ್ಗದರ್ಶನ ಅವಕಾಶ!

ಬೆಂಗಳೂರು ಉತ್ತರ ವಿ.ವಿಯಿಂದ ನಿಯಮ ಉಲ್ಲಂಘನೆ: ಸಂಶೋಧನಾ ಅಭ್ಯರ್ಥಿಗಳ ಆರೋಪ
Published 14 ಆಗಸ್ಟ್ 2024, 4:21 IST
Last Updated 14 ಆಗಸ್ಟ್ 2024, 4:21 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿ ಪಿಎಚ್‌.ಡಿ ಪದವಿ ಅಭ್ಯರ್ಥಿಗಳಿಗೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಮಾರ್ಗದರ್ಶಕರ ನಿಯೋಜನೆ ಮಾಡಲಾಗುತ್ತಿದೆ ಎಂದು ಆರೋಪ ಸಂಶೋಧನಾ ವಿದ್ಯಾರ್ಥಿಗಳ ವಲಯದಿಂದ ಕೇಳಿ ಬಂದಿದೆ.

ಆಗಸ್ಟ್‌ 7ರಂದು ಪಿಎಚ್‌.ಡಿ ಮಾರ್ಗದರ್ಶಕರಿಗೆ ಸಂಶೋಧನಾ ವಿದ್ಯಾರ್ಥಿಗಳನ್ನು ನಿಯೋಜಿಸುವ ವಿಷಯವಾರು ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಹಲವಾರು ಲೋಪದೋಷಗಳಿವೆ ಎಂದು ವಿದ್ಯಾರ್ಥಿ ಸಂಘಟನೆಗಳು ದೂರಿವೆ.

ಯುಜಿಸಿಯ ನಿಯಮಾವಳಿ ಪ್ರಕಾರ ಕನಿಷ್ಠ ಎರಡು ವರ್ಷ ಸೇವಾವಧಿ ಇರುವ ಪ್ರಾಧ್ಯಪಕರಿಗೆ ಪಿಎಚ್‌.ಡಿ ಮಾರ್ಗದರ್ಶನ ನೀಡಲು ಅವಕಾಶವಿದೆ. ಆದರೆ, ಹೊಸಕೋಟೆ ಸಂಶೋಧನಾ ಕೇಂದ್ರದಲ್ಲಿ ಭೌತಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಕೇವಲ ಎಂಟು ತಿಂಗಳ ಸೇವಾವಧಿ ಇರುವ ಮಾರ್ಗದರ್ಶಕರಿಗೆ ಹೊಸ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. 

ನಿವೃತ್ತಿ ಅಂಚಿನಲ್ಲಿರುವ ಪ್ರಾಧ್ಯಾಪಕರಿಗೆ ಹೊಸ ವಿದ್ಯಾರ್ಥಿಗಳನ್ನು ನಿಯೋಜಿಸಿದರೆ ಪ್ರಾಧ್ಯಾಪಕರ ನಿವೃತ್ತಿಯ ನಂತರ ಪಿಎಚ್‌.ಡಿ ಪದವಿ ಪೂರ್ಣಗೊಳ್ಳಿಸುವುದು ಸಂಶೋಧನಾ ವಿದ್ಯಾರ್ಥಿಗಳಿಗೆ ಕಷ್ಟ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ
ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ
ಮೀಸಲಾತಿಯಂತೆ ವಿದ್ಯಾರ್ಥಿಗಳ ದಾಖಲಾತಿಗೆ ಅನುವು ಮಾಡಿಕೊಡಬೇಕು. ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ಅನ್ಯಾಯ ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು
- ಲೋಕೇಶ್‌ ರಾಮ್‌ ಅಧ್ಯಕ್ಷ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ
ಯುಜಿಸಿ ನಿಯಮಾವಳಿಗಳ ಪ್ರಕಾರವೇ ಮಾರ್ಗದರ್ಶಕರಿಗೆ ಹೊಸ ಪಿಎಚ್‌.ಡಿ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಸ್ವಹಿತಾಸಕ್ತಿಗಾಗಿ ಕೆಲವು ವಿದ್ಯಾರ್ಥಿಗಳು ಅಪಪ್ರಚಾರ ಮಾಡುತ್ತಿದ್ದಾರೆ.
-ನಿರಂಜನ ವಾನಳ್ಳಿ ಉಪ ಕುಲಪತಿ ಬೆಂಗಳೂರು ಉತ್ತರ ವಿ.ವಿ

ಸಂಶೋಧನ ಕೇಂದ್ರದಲ್ಲಿಲ್ಲ ಮಾರ್ಗದರ್ಶಕರು

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮಾವಳಿ ಪ್ರಕಾರ ಯಾವುದೇ ಪದವಿ ಕಾಲೇಜಿನಲ್ಲಿ ಸಂಶೋಧನ ಕೇಂದ್ರ ಸ್ಥಾಪಿಸಲು ವಿಷಯವಾರು ಕನಿಷ್ಠ ಇಬ್ಬರು ಮಾರ್ಗದರ್ಶಕರು ಇರುವುದು ಕಡ್ಡಾಯ. ಆದರೆ ಹೊಸಕೋಟೆಯಲ್ಲಿ ಒಬ್ಬರೇ ಮಾರ್ಗದರ್ಶಕರಿದ್ದರೂ ಅಲ್ಲಿ ಸಂಶೋಧನಾ ಕೇಂದ್ರದ ಮಾನ್ಯತೆ ನೀಡಲಾಗಿದೆ. ಇದರಿಂದ ಪ್ರಾಧ್ಯಪಕರ ಕೆಲಸದ ಮೇಲೂ ಒತ್ತಡ ಹೆಚ್ಚಾಗಲಿದ್ದು ವಿದ್ಯಾರ್ಥಿಗಳಿಂದ ಮಂಡಿಸುವ ಪ್ರಬಂಧಗಳ ಮೇಲೆ ಪರಿಣಾಮ ಬಿರುತ್ತದೆ ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿ ವಿನೋದ್‌.

ಮೀಸಲಾತಿ ಉಲ್ಲಂಘನೆ: ದಲಿತ ವಿದ್ಯಾರ್ಥಿಗೆ ತಪ್ಪಿದ ಸೀಟ್‌

ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂಟು ಸಂಶೋಧನಾ ವಿದ್ಯಾರ್ಥಿಗಳ ಸೀಟು ಖಾಲಿ ಇದೆ ಎಂದು ಪ್ರಕಟಣೆ ನೀಡಲಾಗಿದೆ. ಆ ಪೈಕಿ ಒಂದು ಸ್ಥಾನ ಪರಿಶಿಷ್ಟ ವಿದ್ಯಾರ್ಥಿಗೆ ಮೀಸಲಾಗಿತ್ತು. ಪರೀಕ್ಷೆಯಲ್ಲಿ ಶೇ 60 ರಷ್ಟು ಅಂಕಗಳಿಸಿ ಈ ಮೀಸಲಾತಿ ಸ್ಥಾನಕ್ಕೆ ಅರ್ಹತೆ ಪಡೆದಿದ್ದ ವಿದ್ಯಾರ್ಥಿಯೊಬ್ಬರಿಗೆ ಪರಿಶಿಷ್ಟ ಜಾತಿಯ ಕೋಟಾದಲ್ಲಿ ಸೀಟ್‌ ವಿತರಣೆ ಮಾಡಿಲ್ಲ. ವಿಶ್ವವಿದ್ಯಾಲಯ ಪ್ರಕಟಣೆ ತಪ್ಪಾಗಿತ್ತು ಎಂದು ತಿಳಿಸಲಾಗಿದೆ. ಇದರಿಂದ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಆರೋಪಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT