ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ವಿಷಯುಕ್ತ ತ್ಯಾಜ್ಯ ಹೆದ್ದಾರಿ ಬದಿಗೆ!

Last Updated 12 ಫೆಬ್ರುವರಿ 2022, 16:07 IST
ಅಕ್ಷರ ಗಾತ್ರ

ದೇವನಹಳ್ಳಿ: ವಿಮಾನ ನಿಲ್ದಾಣದ ರನ್ ವೇ ಬಳಿ ಸೃಜನೆಯಾಗುವ ಕಸ ಅಲ್ಲಿಯೇ ವಿಲೇವಾರಿ ಮಾಡದೆ ಹತ್ತಿರದ ರಾಷ್ಟ್ರೀಯ ಹೆದ್ದಾರಿ 7 ಬದಿ ಸುರಿಯಲಾಗುತ್ತಿದೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಸಂಗ್ರಹವಾಗುವ ಮಾನವ ತ್ಯಾಜ್ಯ ಹಾಗೂ ವೈದ್ಯಕೀಯವಾಗಿ ಉಪಯೋಗಿಸಿರುವ ಮಾಸ್ಕ್, ಚುಚ್ಚುಮದ್ದುಗಳನ್ನು ಹತ್ತಿರದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸ್ಥಳಗಳಲ್ಲಿ ತಂದು ಸುರಿಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ವಿಮಾನ ನಿಲ್ದಾಣ ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿಲೇವಾರಿ ಘಟಕ ಸ್ಥಾಪನೆ ಮಾಡಿದ್ದರೂ ಇದರ ಸದುಪಯೋಗ ಮಾಡುತ್ತಿಲ್ಲ. ಅವಧಿ ಮುಗಿದ ಉಪಹಾರ, ಮಾನವ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಸೇರಿದಂತೆ ಇತರ ವಸ್ತುಗಳನ್ನು ಹೆದ್ದಾರಿ ಬಳಿ ನಿರ್ವಹಣೆ ಹೊತ್ತಿರುವ ಖಾಸಗಿ ಕಂಪನಿಯ ಸಿಬ್ಬಂದಿ ಸುರಿಯುತ್ತಿರುವ ‌ದೃಶ್ಯಗಳು ಸೆರೆಯಾಗಿವೆ. ವಿಲೇವಾರಿ ಮಾಡಲು ಅವಕಾಶವಿಲ್ಲದ ಕಾರಣ ತಂದು ಸುರಿಯಲಾಗುತ್ತಿದೆ ಎಂಬುದು ಸಿಬ್ಬಂದಿ ಸಮಜಾಯಿಷಿ.

ನಿರ್ವಹಣೆ ಹೊಣೆ ಹೊತ್ತಿರುವ ಕಂಪನಿ ಎಲ್ಲ ನಿಯಮ ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿ ಬಳಿ ಕಸ ಸುರಿದು ಸ್ಥಳೀಯರಿಗೆ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ ಎಂದು ಸ್ಥಳೀಯ ಮಂಜುನಾಥ್ ಆರೋಪಿಸಿದರು.

ವಿಮಾನ ನಿಲ್ದಾಣ ಸಿಬ್ಬಂದಿ ಕಣ್ತಪ್ಪಿಸಿ ಬರಲು ಸಾಧ್ಯವಿಲ್ಲ. ಆದ ಕಾರಣ ಕಸದ ಮೂಟ್ಟೆಯನ್ನು ಗಸ್ತು ವಾಹನಗಳಲ್ಲಿ ತುಂಬಿ ನಿಲ್ದಾಣದ ಹೊರಗೆ ಕಳಿಸುವಂತೆ ಮಾಡಲಾಗುತ್ತಿದೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಪಟ್ಟಣದ ಕೆಂಪೇಗೌಡ ಸರ್ಕಲ್ ಬಳಿ ಹೆದ್ದಾರಿಗೆ ಹೊಂದಿಕೊಂಡಿರುವ ರಾಜಕಾಲುವೆ ಇದೆ. ಅದರಲ್ಲೂ ವಿಮಾನಗಳಿಂದ ಸಂಗ್ರಹ ಮಾಡಿದ ಮಾನವ ತ್ಯಾಜ್ಯ ತಂದು ಸುರಿಯುತ್ತಿರುವುದು ಸಾಮಾನ್ಯವಾಗಿದೆ. ಸ್ಥಳೀಯರು ಕೂಡ ಪ್ರಶ್ನೆ ಮಾಡುತ್ತಿಲ್ಲ ಎಂದು ಸ್ಥಳೀಯರಾದ ರಾಮಸ್ವಾಮಿ ಆರೋಪಿಸಿದರು.

ಕಪ್ಪು ಪಟ್ಟಿಗೆ ಸೇರಿಸಿ

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ 'ಸಾರ್ವಜನಿಕ ಆರೋಗ್ಯದ ಜತೆ ಆಟವಾಡುತ್ತಿರುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ರೀತಿಯ ಕಂಪನಿಯನ್ನು ಬ್ಲಾಕ್ ಲಿಸ್ಟ್‌ಗೆ ಹಾಕಿ, ತಪ್ಪು ಮಾಡಿದ ವ್ಯಕ್ತಿಗಳನ್ನು ದೇಶ ಗಡಿಪಾರು ಮಾಡಬೇಕು' ಎಂದು ಎಚ್ಚರಿಕೆ ನೀಡಿದರು.

ಕಾನೂನು ಕ್ರಮ

ದೇವನಹಳ್ಳಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ವಸಂತ ಕುಮಾರ್ ಮಾತನಾಡಿ 'ಇದೊಂದು ಅಕ್ಷಮ್ಯ ಅಪರಾಧ. ಗ್ರಾಮಗಳ ಸ್ವಚ್ಛತೆಗೆ ಸಾಕಷ್ಟು ಶ್ರಮಿಸುತ್ತಿದ್ದೇವೆ. ಈ ರೀತಿ ತ್ಯಾಜ್ಯ ಸುರಿಯುತ್ತಿರುವುದರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT