ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಅಭಿವೃದ್ಧಿ ವಂಚಿತ ಮುತ್ಯಾಲಮಡುವು

Last Updated 1 ನವೆಂಬರ್ 2021, 4:25 IST
ಅಕ್ಷರ ಗಾತ್ರ

ಆನೇಕಲ್:ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ಯಾಲಮಡುವು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಜನರಿಂದ ದೂರವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಾಕರ್ಷಣೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅವಕಾಶಗಳಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ನೇಪಥ್ಯಕ್ಕೆ ಸರಿದಿದೆ.

ಬೆಂಗಳೂರಿಗೆ ಸಮೀಪದ ಪ್ರವಾಸಿ ತಾಣಗಳ ಪೈಕಿ ಆನೇಕಲ್‌ ತಾಲ್ಲೂಕಿನ ಮುತ್ಯಾಲಮಡುವು 40 ಕಿ.ಮೀ ದೂರದಲ್ಲಿರುವ ಪ್ರಕೃತಿ ಸೌಂದರ್ಯದ ತಾಣ. ಕಣಿವೆಯಲ್ಲಿ ಮಳೆಗಾಲದಲ್ಲಿ ಹಸಿರಿನ ಸಿರಿ ರಾರಾಜಿಸುತ್ತಿರುತ್ತದೆ.

ಕಣಿವೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಆನಂದ. ಎತ್ತರದಿಂದ ಧುಮ್ಮಿಕ್ಕುತ್ತಿರುವ ಜಲಧಾರೆಯನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ವಿದ್ಯಾರ್ಥಿಗಳು, ಯುವಕರು, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸೇರಿದಂತೆ ನೂರಾರು ಮಂದಿ ಮುತ್ಯಾಲಮಡುವಿನ ಕಣಿವೆಯಲ್ಲಿ ನೀರಾಟವಾಡಿ ವಿಹರಿಸಿ ವಾರದ ದಣಿವು ನೀಗಿಸಿಕೊಳ್ಳಲು ಆಗಮಿಸುತ್ತಾರೆ. ಆದರೆ, ಮೂಲಸೌಲಭ್ಯದ ಕೊರತೆಯಿಂದಾಗಿ ಬಂದ ನಂತರ ಬೇಸರ ಬರುವಂತಹ ಪರಿಸ್ಥಿತಿಯಿದೆ.

ಹೆಚ್ಚು ಮಳೆಯಾದಾಗ ಸುಮಾರು 300 ಅಡಿಗಳಿಗೂ ಎತ್ತರದ ಜಲಪಾತದಲ್ಲಿ ನೀರು ಭೋರ್ಗರೆಯುತ್ತಾ ಧುಮುಕುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೋರು ಮಳೆ ಸುರಿದರೂ ಜಲಪಾತದಲ್ಲಿ ನೀರು ಕಡಿಮೆಯಾಗಿದೆ. ಹೆಸರಿಗೆ ತಕ್ಕಂತೆ ಮುತ್ತಿನ ಹನಿಗಳಂತೆ ನೀರು ಬೀಳುತ್ತಿದೆ. ಇದರಿಂದಾಗಿ ಜಲಪಾತ ನೋಡಲು ಬರುವ ಪ್ರವಾಸಿಗರು ಮುತ್ಯಾಲಮಡುವಿನಲ್ಲಿ ನೀರೇ ಬೀಳುತ್ತಿಲ್ಲ ಎಂದು ನಿರಾಸೆಗೊಳ್ಳುತ್ತಿದ್ದಾರೆ.

ಅವ್ಯವಸ್ಥೆಯ ಆಗರ: ಮುತ್ಯಾಲಮಡುವಿಗೆ ಆನೇಕಲ್‌ ಮುಖ್ಯರಸ್ತೆಯಿಂದ ಸುಣವಾರ ಮೂಲಕ ಮೂರು ಕಿ.ಮೀ ಹಾದಿ ಕ್ರಮಿಸಬೇಕು. ಆದರೆ, ಈ ರಸ್ತೆಯುದ್ದಕ್ಕೂ ಗುಂಡಿಗಳಿಂದ ಕೂಡಿದ್ದು ಹಾಳಾಗಿದೆ. ಬರುವ ಪ್ರವಾಸಿಗರು ಪ್ರಯಾಸಪಟ್ಟು ಬರಬೇಕಾಗಿದೆ.

ಪ್ರವಾಸಿ ತಾಣಗಳಿಗೆ ಸುಸಜ್ಜಿತ ರಸ್ತೆಯು ಸಂಪರ್ಕಕ್ಕೆ ಅತ್ಯಂತ ಅವಶ್ಯಕ. ಆದರೆ, ಈ ರಸ್ತೆಯು ಅತ್ಯಂತ ಹಾಳಾಗಿದ್ದು ಅಭಿವೃದ್ಧಿಪಡಿಸಿದರೆ ಪ್ರವಾಸಿಗರು ನೆಮ್ಮದಿಯಿಂದ ಸಂಚರಿಸಲು ಅನುಕೂಲವಾಗುತ್ತದೆ. ಹಾಗಾಗಿ ಆನೇಕಲ್‌-ಥಳಿ ಮುಖ್ಯರಸ್ತೆಯಿಂದ ಮುತ್ಯಾಲಮಡುವುವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ.

ನಿರ್ವಹಣೆಯಿಲ್ಲದೇ ಸೊರಗಿರುವ ಉದ್ಯಾನ: ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರ ಆಕರ್ಷಣೆಗಾಗಿ ಸುಸಜ್ಜಿತ ಉದ್ಯಾನ ನಿರ್ಮಿಸಲಾಗಿತ್ತು. ಕುಳಿತುಕೊಳ್ಳಲು ಸುಸಜ್ಜಿತ ಕಲ್ಲು ಹಾಸುಗಳು, ವಿವಿಧ ಜಾತಿಯ ಅಲಂಕಾರಿಕ ಗಿಡಗಳು ಮತ್ತು ಹಳೆಯದಾದ ವೀಕ್ಷಣಾ ಗೋಪುರ ಸೇರಿದಂತೆ ಹಲವು ಸೌಲಭ್ಯಗಳು ಉದ್ಯಾನಕ್ಕೆ ಹೊಸ ಕಳೆ ನೀಡಿದ್ದವು. ಆದರೆ ಉದ್ಯಾನದ ಉದ್ಘಾಟನೆಯ ನಂತರ ಕೆಲವು ತಿಂಗಳು ಹೊರತುಪಡಿಸಿ ಏಳೆಂಟು ವರ್ಷಗಳಿಂದಲೂ ನಿರ್ವಹಣೆ ಮಾಡದೇ ಉದ್ಯಾನದೊಳಗಡೆ ಕಾಲಿಡಲು ಆಗದಂತಹ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು ಪಾಳು ಬಿದ್ದಿದೆ.

ನೀರಿಗಿಳಿದ ದೋಣಿಗಳು: ಮುತ್ಯಾಲಮಡುವಿನಲ್ಲಿ ಚೆಕ್‌ ಡ್ಯಾಂ ನಿರ್ಮಿಸಿದ್ದು, ನೀರಿನ ಸಂಗ್ರಹವಾಗಿದೆ. ದೋಣಿ ವಿಹಾರಕ್ಕಾಗಿ ದೋಣಿಗಳಿವೆ. ಆದರೆ ಈ ದೋಣಿಗಳು ನಿರ್ವಹಣೆ ಸಮರ್ಪಕವಾಗಿಲ್ಲ. ಹಾಗಾಗಿ ವಿಹಾರಕ್ಕಾಗಿ ಖರೀದಿ ಮಾಡಿರುವ ದೋಣಿಗಳು ಮುತ್ಯಾಲಮಡುವಿನ ಮಯೂರ ಹೋಟೆಲ್‌ ಬಳಿ ಕಾಯಂ ಆಗಿ ನಿಂತು ಹೋಗಿವೆ.

ಮುತ್ಯಾಲಮಡುವು ಜಲಪಾತದಿಂದ ಸುಮಾರು ಒಂದು ಕಿ.ಮೀ. ದೂರದವರೆಗೆ ಕಾಡಿನ ಕಿರು ದಾರಿಯಲ್ಲಿ ಸಾಗಿದರೆ ಶಂಕು ಚಕ್ರದ ಜಲಪಾತವನ್ನು ನೋಡಬಹುದು. ಆದರೆ ಇಲ್ಲಿಗೆ ಸಾಗುವುದು ಕಷ್ಟಕರವಾಗಿದೆ. ನಿರ್ಜನ ಪ್ರದೇಶ ಇದಾಗಿದೆ. ಮುತ್ಯಾಲಮಡುವಿನಲ್ಲಿ ಜನಜಂಗುಳಿ ಸದಾ ನೆರೆದಿದ್ದರೆ ಶಂಕುಚಕ್ರ ಜಲಪಾತದ ಕಡೆ ಕಡಿಮೆ ಜನ ತೆರಳುತ್ತಾರೆ. ಏಕೆಂದರೆ ಸಂಪೂರ್ಣ ಕಾಡು ಹಾದಿಯಾಗಿದೆ.

ಒಂದು ಕಿ.ಮೀ ಸಾಗಿದ ನಂತರ ಶಂಕು ಚಕ್ರ ಜಲಪಾತದೆಡೆಗೆ ಹೋಗಬೇಕಾದರೆ ಬೆಟ್ಟವನ್ನು ಹತ್ತಬೇಕು. ಬಂಡೆಗಲ್ಲುಗಳ ನಡುವೆ ಎಚ್ಚರಿಕೆಯಿಂದ ಹೆಜ್ಜೆಯಿಟ್ಟು ಸಾಗಬೇಕು. ಚಾರಣದ ಅನುಭವವನ್ನು ಕಟ್ಟಿಕೊಡುತ್ತದೆ. ಇದನ್ನು ಅಭಿವೃದ್ಧಿಪಡಿಸಿ ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಮುತ್ಯಾಲಮಡುವಿನಲ್ಲಿ ಪ್ರವಾಸಿಗರು ನಿರಾತಂಕವಾಗಿ ಓಡಾಡಲು ಅನುಕೂಲವಾಗುವಂತೆ ಭದ್ರತಾ ವ್ಯವಸ್ಥೆಯನ್ನು ಬಿಗಿಪಡಿಸುವ ಅವಶ್ಯಕತೆಯಿದೆ ಎಂಬುದು ಪ್ರವಾಸಿಗರ ಬೇಡಿಕೆಯಾಗಿದೆ.

ಕಣಿವೆಗೆ ಇಳಿಯಲು ಇತ್ತೀಚೆಗೆ ಸುಸಜ್ಜಿತ ಮೆಟ್ಟಿಲುಗಳನ್ನು ಮಾಡಲಾಗಿದೆ ಮತ್ತು ಮೂರು ಸ್ಥಳಗಳಲ್ಲಿ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಉಳಿದ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದವರು ಕ್ರಿಯಾಯೋಜನೆ ರೂಪಿಸಿ ಜನರ ಆಕರ್ಷಣೆಯ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿದ್ದರೂ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮುತ್ಯಾಲಮಡುವು ಕಾಯಕಲ್ಪವಿಲ್ಲದೇ ಮೂಲೆಗುಂಪಾಗಿದೆ. ಮಳೆಗಾಲದಲ್ಲಿ ಜನರನ್ನು ಆಕರ್ಷಿಸುವ ಮುತ್ಯಾಲಮಡುವು ಬೇಸಿಗೆ ಕಾಲದಲ್ಲಿ ನೀರಿಲ್ಲದೇ ಬಣಗುಡುತ್ತದೆ. ವರ್ಷಪೂರ್ತಿ ಪ್ರವಾಸಿಗರು ಈ ತಾಣದಲ್ಲಿ ವಿಹರಿಸಲು ಅನುಕೂಲವಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಅವಶ್ಯಕತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT