ಗುರುವಾರ , ಜೂನ್ 30, 2022
24 °C
ಚೌಡಪ್ಪನಹಳ್ಳಿ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಅಭಿವೃದ್ಧಿಗೆ ಪಕ್ಷಾತೀತ ಸಹಕಾರ ಅಗತ್ಯ: ಶಾಸಕ ನಿಸರ್ಗ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಾಗ ಜನರು ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಚನ್ನರಾಯಪಟ್ಟಣ ಹೋಬಳಿಯ ಗಂಗವಾರ-ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಪ್ಪನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ತಂಗುದಾಣ ಹಾಗೂ ಸಿ.ಸಿ. ರಸ್ತೆ ಅಭಿವೃದ್ಧಿ, ಕೊಂಡೇನಹಳ್ಳಿಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದರೂ ಸರ್ಕಾರದ ಅಸಹಕಾರದ ನಡುವೆಯೂ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಸಿ.ಸಿ. ರಸ್ತೆಗಳು, ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಸ್ಥಳೀಯವಾಗಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಾಗ ಜನರ ಸಹಭಾಗಿತ್ವ ಬಹುಮುಖ್ಯವಾಗುತ್ತದೆ. ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಿಕೊಂಡಿದ್ದೇವೆ. ಚುನಾವಣೆಗಳು ಮುಗಿದ ನಂತರ ಎಲ್ಲಾ ಜಾತಿ, ವರ್ಗದವರ ಏಳಿಗೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸ್ಥಳೀಯ ನಾಗರಿಕರು ಹೆಚ್ಚು ಉತ್ಸಾಹ ತೋರಿಸಬೇಕು’ ಎಂದು ಹೇಳಿದರು.

ಮಹಿಳೆಯರು ಕೂಡ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವತ್ತ ಸಾಗುತ್ತಿರುವುದು ಶ್ಲಾಘನೀಯ. ಮಹಿಳೆಯರು ಸಂಘಟಿತರಾಗಬೇಕು. ಸಹಕಾರ ಸಂಘದಲ್ಲಿ ಸದಸ್ಯರಾಗಿರುವ ಪ್ರತಿಯೊಬ್ಬರಿಗೂ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದ್ದು, ಜನರ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಿದೆ ಎಂದರು.

ಬಮೂಲ್ ನಿರ್ದೇಶಕರಾದ ಶ್ರೀನಿವಾಸ್, ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಮನೋಹರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಹೋಬಳಿ ಅಧ್ಯಕ್ಷ ಮುನಿರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಟಾಲಪ್ಪ, ಮುಖಂಡರಾದ ಕಗ್ಗಲಹಳ್ಳಿ ಗುರಪ್ಪ, ಶಂಕರ್, ಜೊನ್ನಹಳ್ಳಿ ಮುನಿರಾಜು, ಜಯರಾಮೇಗೌಡ, ಸಿ.ಎಸ್. ರಾಜಣ್ಣ, ಮೇನಕಾ ಕೃಷ್ಣಮೂರ್ತಿ, ಆರ್.ಕೆ. ನಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಅಶ್ವಥನಾರಾಯಣ, ಕಮಲೇಶ್, ನಾಗರಾಜ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು