ವಿಜಯಪುರ(ದೇವನಹಳ್ಳಿ): ಟೊಮೆಟೊ ಬಳಿಕ ಹುಣಸೆ ಹಣ್ಣು ದುಬಾರಿಯಾಗಿದೆ. ₹80 ಇದ್ದ ಒಂದು ಕೆಜಿಯ ಹುಣಸೆಹಣ್ಣಿನ ಬೆಲೆ ₹160ಕ್ಕೆ ಏರಿಕೆಯಾಗಿದೆ.
ಎಲ್ಲೆಡೆ ಟೊಮೆಟೊ ಬೆಲೆ ಗಗನಮುಖಿ ಆಗುತ್ತಿದೆ. ಟೊಮೆಟೊಗೆ ಪರ್ಯಾಯವಾಗಿ ಹುಣಸೆಹಣ್ಣು ಬಳಕೆ ಮಾಡುತ್ತಿರುವ ಕಾರಣ, ಹುಣಸೆಹಣ್ಣು ದುಬಾರಿಯಾಗಿದ್ದು, ಗ್ರಾಹಕರು ಮತ್ತಷ್ಟು ಕಂಗಾಲಾಗುವಂತಾಗಿದೆ.
15 ಕೆ.ಜಿ. ಟೊಮೆಟೊ ಬಾಕ್ಸ್ ದಾಖಲೆ ₹2,300 ಮಾರಾಟವಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಟೊಮೆಟೊ ₹140, ಗುಣಮಟ್ಟದ ಟೊಮೆಟೊ ₹150ಗೆ ಮಾರಾಟವಾಗುತ್ತಿದೆ. ಬಡವರು, ಮಧ್ಯಮವರ್ಗದವರು ಟೊಮೆಟೊ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಜನರು ಹುಣಸೆ ಹಣ್ಣಿನ ಮೊರೆ ಹೋಗಿದ್ದಾರೆ. ಈಗ ಅದೂ ಕೂಡಾ ದುಬಾರಿಯಾಗುತ್ತಿದೆ.
ಹುಣಸೆ ಮರ ಹಣ್ಣು ಬಿಟ್ಟಾಗ, ಸಹಜವಾಗಿಯೇ ಹಣ್ಣನ್ನು ಸಂಗ್ರಹಿಸಿಕೊಳ್ಳಲಾಗುತ್ತದೆ. ಹಣ್ಣು ಕಪ್ಪಾದಷ್ಟು ಸ್ವಲ್ಪ ಸಿಹಿ, ಹೆಚ್ಚು ಹುಳಿಯಾಗುತ್ತದೆ. ಈ ಕಾರಣದಿಂದ ಹಳೇ ಹುಣಸೇ ಹಣ್ಣಿಗೂ ಹೆಚ್ಚಿನ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಹೊಸ ಹುಣಸೆಹಣ್ಣಿಗಿಂತ ಹಳೇ ಹುಣಸೇ ಹಣ್ಣಿಗೆ ₹10 ಜಾಸ್ತಿ ಬೆಲೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.