ವಿಜಯಪುರ(ದೇವನಹಳ್ಳಿ): ಗಣೇಶ ಚತುರ್ಥಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳನ್ನು ಪ್ರತಿಪ್ಠಾಪನೆ ಮಾಡುವುದು, ಡಿ.ಜೆ.ಸೌಂಡ್ ಸಿಸ್ಟಮ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾತ್ರವೇ ಪ್ರತಿಷ್ಠಾಪನೆ ಮಾಡಬೇಕು. ರಾಸಾಯನಿಕ ಬಣ್ಣಗಳಿಂದ ಕೂಡಿರಬಾರದು. ಯಾರೂ ಕೂಡ ಸರ್ಕಾರದ ನಿರ್ದೇಶನ ಉಲ್ಲಂಘನೆ ಮಾಡಬಾರದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಾಂತ್ ನಾಯಕ್ ತಿಳಿಸಿದರು.
ಪಟ್ಟಣದ ಮಂಗಳವಾರ ಗೌರಿಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿ ಪೂರ್ತಿ ಪ್ರತಿಷ್ಠಾಪನೆ ಮಾಡಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರೂ ಕೆಲವರು ಕದ್ದುಮುಚ್ಚಿ ಪ್ರತಿಷ್ಠಾಪನೆ ಮಾಡಲು ಪ್ರಯತ್ನ ಮಾಡುತ್ತಾರೆ. ಅಂತಹವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಡಿ.ಜೆ ಸೌಂಡ್ ಸಿಸ್ಟಮ್ ಬಳಕೆ ಮಾಡುವುದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತೊಂದರೆಯಾಗಲಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರತಿಯೊಂದು ಹಳ್ಳಿಗೂ ಗಸ್ತು ಕಾನ್‌ಸ್ಪೆಬಲ್ ನೇಮಕ ಮಾಡಿದ್ದು, ಅವರು ಗಮನಿಸುತ್ತಿರುತ್ತಾರೆ. ಪ್ರತಿಷ್ಠಾಪನೆಗೆ ಮುನ್ನಾ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ಬೆಸ್ಕಾಂ, ಪುರಸಭೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು.
ಇದ್ ಮಿಲಾದ್ ಆಚರಣೆ ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ಮೂಲಕ ಸೌಹಾರ್ದ ಕಾಪಾಡಬೇಕು. ಹಿಂದೂ, ಮುಸ್ಲಿಮರು ಎನ್ನುವ ಬೇಧಭಾವವಿಲ್ಲದೆ ಎಲ್ಲರೂ ಒಗ್ಗೂಡಿ ಹಬ್ಬ ಆಚರಣೆ ಮಾಡುವಂತೆ ಸಲಹೆ ನೀಡಿದರು.
ಮೆರವಣಿಗೆ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಬೇಕು. ಪುರಸಭೆ ನಿಗದಿಪಡಿಸಿರುವ ಕಡೆ ಮಾತ್ರವೇ ಗಣಪತಿ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ಸೂಚಿಸಿದರು. ಪ್ರತಿಷ್ಠಾಪನೆ ಮಾಡಿರುವ ಸ್ಥಳಗಳಲ್ಲಿ ಯಾವುದೇ ಅನಾಹುತ ನಡೆದರೂ ಯಾರು ನೇತೃತ್ವ ವಹಿಸಿರುತ್ತಾರೋ ಅವರು ನೇರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಹುರುಳುಗುರ್ಕಿ ರಾಜಣ್ಣ ಮಾತನಾಡಿ, ಹಬ್ಬಗಳಲ್ಲಿ ಪರಸ್ಪರ ಎಲ್ಲರೂ ಸೌಹಾರ್ದದಿಂದ ಪಾಲ್ಗೊಳ್ಳಬೇಕೆಂದು ಎಂದು ಹೇಳಿದರು.
ಸಭೆಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ, ಹಿಂದೂ, ಮುಸ್ಲಿಂ ಸಮುದಾಯ ಮುಖಂಡರು ಇದ್ದರು.